ಬೆಳಗಾವಿ: ಅನಧಿಕೃತ ಲೇ ಔಟ್‌ಗಳ ಮೂಲಕ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ ಎಚ್ಚರಿಕೆ ನೀಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತ ಲೇಔಟ್ ನಿರ್ಮಾಣವಾಗಿರುವುದು ಗಮನಕ್ಕೆ ಬಂದಿದೆ. ಗೊತ್ತಿದ್ದೂ ಇಂಥ ಚಟುವಟಿಕೆಗೆ ಕುಮಕ್ಕು ನೀಡುವ ಅಧಿಕಾರಿಗಳೇ ನೇರ ಜವಾಬ್ದಾರರಾಗುತ್ತಾರೆ. ಯಾವುದೇ ಒತ್ತಡಕ್ಕೆ ಒಳಗಾಗದೇ ಇಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ಬೆಳಗಾವಿ ದೇಶದಲ್ಲಿ 40ನೇ ಸ್ಥಾನ ಹಾಗೂ ರಾಜ್ಯದಲ್ಲಿ 5ನೇ ಸ್ಥಾನದಲ್ಲಿದೆ. ಎಲ್ಲ ನಗರದಲ್ಲೂ ಈ ಯೋಜನೆಯ ಕಾರ್ಯ ವಿಳಂಬವಾಗಿದೆ. ಕೆಲ ತೊಡಕುಗಳು ಇರುವುದರಿಂದ ಇದು ನಿಧಾನ ಗತಿಯಲ್ಲಿ ಸಾಗಿದೆ. ಇನ್ನು ಕಾಮಗಾರಿ ವೇಗ ಪಡೆದುಕೊಂಡಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ರಾಜ್ಯದ ಟಾಪ್ 3ರಲ್ಲಿ ಬೆಳಗಾವಿಯ ಸ್ಥಾನ ಭದ್ರಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಬೆಳಗಾವಿ ನಗರಕ್ಕೆ ನೀರಿನ ಮೂಲ ಇದೆ. ಸಮರ್ಪಕ ಪೂರೈಕೆ ಮಾಡುವ ದೃಷ್ಟಿಯಿಂದ ನಿರಂತರ ಕುಡಿಯುವ ನೀರಿನ ಯೋಜನೆಗೆ 420 ಕೋಟಿ ರೂ. ಅನುದಾನ ಬಿಡುಗಡೆ ಆಗಿದ್ದು, ಇನ್ನು ಮೂರು ತಿಂಗಳಲ್ಲಿ ಕೆಲಸ ಆರಂಭವಾಗಲಿದೆ. 24X7 ನೀರು ಎಲ್ಲರಿಗೂ ಲಭ್ಯ ಆಗಲಿದೆ ಎಂದರು.
ಬೆಳಗಾವಿಗೆ ನಗರೋತ್ಥಾನ ಯೋಜನೆಯಡಿ 125 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಆಗಲಿದೆ. ಜತೆಗೆ ಸ್ಮಾರ್ಟ್ ಸಿಟಿಯ ವಾರ್ಷಿಕ ಅನುದಾನ ಕೂಡಿಸಿ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿ ವರ್ಷ ತಲಾ 100 ಕೋಟಿ ರೂ. ಅನುದಾನ ನೀಡುತ್ತಿದ್ದು, ಈವರೆಗೆ ಬಂದ ಅನುದಾನದಲ್ಲಿ ಬ್ಯಾಂಕಿನಿಂದ 52 ಕೋಟಿ ರೂ. ಬಡ್ಡಿ ಬಂದಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ವೇತನವನ್ನು ಹಂತ ಹಂತವಾಗಿ ಪಾವತಿಸಲಾಗುತ್ತಿದೆ. ಇನ್ನು 15 ದಿನಗಳ ವೇತನ ಪಾವತಿ ಮಾಡಲಾಗಿದೆ ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಸಚಿವರು ತಿಳಿಸಿದರು.