Advertisement

ಐಎಎಫ್ ವಿಮಾನಕ್ಕೆ ಸಿಗದ ಅನುಮತಿ

10:23 AM Feb 24, 2020 | Team Udayavani |

ಹೊಸದಿಲ್ಲಿ: ಕೊರೊನಾ ವೈರಸ್‌ ಸೋಂಕು ಪೀಡಿತ ವುಹಾನ್‌ನಲ್ಲಿರುವ 100ಕ್ಕೂ ಹೆಚ್ಚು ಭಾರತೀಯರನ್ನು ವಾಪಸ್‌ ಕರೆತರುವ ಭಾರತದ ಪ್ರಯತ್ನಕ್ಕೆ ಚೀನದ ವಿಳಂಬ ಧೋರಣೆ ಅಡ್ಡಿಯಾಗಿದೆ.

Advertisement

ಭಾರತೀಯ ವಾಯುಸೇನೆಯ ವಿಶೇಷ ವಿಮಾನ ಚೀನಕ್ಕೆ ಹಾರಲು ಸಿದ್ಧವಾಗಿ ನಿಂತಿದೆ. ಅದರಲ್ಲಿ ಚೀನಕ್ಕೆ ಸಹಾಯವಾಗಿ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಈ ವಿಮಾನದಲ್ಲಿ ಇರಿಸಲಾಗಿದೆ. ಆದರೆ ಸಮಸ್ಯೆಯಾಗಿರುವುದು ಚೀನವು ಅನುಮತಿ ನೀಡಲು ಎತ್ತಿರುವ ಕ್ಯಾತೆ.

ಈಗಾಗಲೇ ಫೆಬ್ರವರಿ ಆರಂಭದಲ್ಲಿ ಎರಡು ಏರ್‌ ಇಂಡಿಯಾ ವಿಶೇಷ ವಿಮಾನಗಳು ಅಲ್ಲಿಗೆ ತೆರಳಿ 647 ಭಾರತೀಯರನ್ನು ಸ್ವದೇಶಕ್ಕೆ ಕರೆತಂದಿದ್ದವು. ಅಲ್ಲಿ ಇನ್ನೂ 100 ಭಾರತೀಯರಿದ್ದಾರೆ. ಅವರನ್ನು ವಾಪಸ್‌ ಕರೆತರುವ ಸಲುವಾಗಿ ವಾಯುಪಡೆಯ ಅತಿದೊಡ್ಡ ವಿಮಾನ ಸಿ-17 ಹೊರಟಿದೆ.

ಚೀನ ಹೇಳುವುದೇನು?
ಚೀನೀ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್‌ ಶುವಾಂಗ್‌ ಅವರು ವಿಮಾನಕ್ಕೆ ಅನುಮತಿ ನೀಡದೆ ಇರುವುದು ಉದ್ದೇಶಪೂರ್ವಕ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಹ್ಯುಬೆ ಪ್ರಾಂತ್ಯದಲ್ಲಿ ಪ್ರಸ್ತುತ ಸ್ಥಿತಿ ಗಂಭೀರವಾಗಿದೆ. ಕೋವಿಡ್‌-19 ವೈರಸ್‌ನ ನಿಯಂತ್ರಣವು ಅತ್ಯಂತ ನಿರ್ಣಾಯಕ ಹಂತದಲ್ಲಿದೆ. ಹೀಗಿರುವಾಗ ನಾವು ಬೇಕೆಂದೇ ಅನುಮತಿ ವಿಳಂಬ ಮಾಡುತ್ತಿದ್ದೇವೆ ಎಂದು ಆರೋಪಿಸುವುದು ಸರಿಯಲ್ಲ ಎಂದಿದ್ದಾರೆ.

ಅನಗತ್ಯ ಪ್ರಯಾಣ ಬೇಡ
ಕೊರೊನಾ ವೈರಸ್‌ ಸೋಂಕಿನ ಭೀತಿಯಿಂದಾಗಿ ಕೇಂದ್ರ ಸರಕಾರವು ದೇಶದ ನಾಗರಿಕರಿಗೆ ಹೊಸ ಪ್ರಯಾಣ ಸಲಹೆಯನ್ನು ಹೊರಡಿಸಿದ್ದು, ಸಿಂಗಾಪುರಕ್ಕೆ ಅನಗತ್ಯವಾಗಿ ಭೇಟಿ ನೀಡದಂತೆ ಸೂಚಿಸಿದೆ. ಶನಿವಾರ ಕೇಂದ್ರ ಸಂಪುಟ ಕಾರ್ಯದರ್ಶಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊರೊನಾ ವೈರಸ್‌ ಹಾವಳಿಗೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ. ಅಲ್ಲದೆ ಇನ್ನು ಮುಂದೆ ನೇಪಾಲ, ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ಮಲೇಷ್ಯಾಗಳಿಂದ ಆಗಮಿಸುವ ವಿಮಾನಗಳ ಪ್ರಯಾಣಿಕರನ್ನೂ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೊಳಪಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರಸ್ತುತ ಕೇವಲ ಚೀನ, ಹಾಂಕಾಂಗ್‌, ಥಾçಲಂಡ್‌, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಜಪಾನ್‌ಗಳಿಂದ ಆಗಮಿಸುವ ಪ್ರಯಾಣಿಕರನ್ನು ಮಾತ್ರವೇ ತಪಾಸಣೆಗೆ ಒಳಪಡಿಸಲಾಗುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next