ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕು ಬೈಲೂರು ಗ್ರಾಮದಲ್ಲಿ ಹರಾಜು ಮೂಲಕ ಅವಿರೋಧವಾಗಿ ಆಯ್ಕೆಯಾಗಿದ್ದ 13 ಸದಸ್ಯರನ್ನು ಅಸಿಂಧುಗೊಳಿಸಿರುವ ರಾಜ್ಯ ಚುನಾವಣಾ ಆಯೋಗ, ಸಿಂಧಿಗೇರಿ ಗ್ರಾಮ ಪಂಚಾಯಿತಿಯ ಚುನಾವಣೆಯನ್ನೇ ಮುಂದೂಡಿ ಶುಕ್ರವಾರ ಆದೇಶ ಹೊರಡಿಸಿದೆ.
ಜಿಲ್ಲೆಯ ಕುರುತೋಡು ತಾಲೂಕು ಸಿಂಧಿಗೇರಿ ಗ್ರಾಮ ಪಂಚಾಯಿತಿ 26 ಸದಸ್ಯರ ಪೈಕಿ ಬೈಲೂರು ಗ್ರಾಮದ 13 ಸದಸ್ಯರು ಹರಾಜು ಮೂಲಕ ಅವಿರೋಧವಾಗಿ ಆಯ್ಕೆಯಾಗಿದ್ದರು. ದೇವಸ್ಥಾನ ನಿರ್ಮಾಣ ನೆಪದಲ್ಲಿ ನಡೆದ ಈ ಹರಾಜು ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರು ಲಕ್ಷಾಂತರ ರೂ. ನೀಡಿ ಗ್ರಾಪಂ ಸದಸ್ಯ ಸ್ಥಾನಗಳನ್ನು ಬಿಕರಿ ಮಾಡಿದ್ದರು. ಹೀಗೆ ನಡೆದ ಹರಾಜಿನಲ್ಲಿ ಬಿಕರಿಯಾದ 13 ಸದಸ್ಯ ಸ್ಥಾನಗಳಿಂದ 51.20 ಲಕ್ಷ ರೂ.ಗಳು ಹಣ ಸಂಗ್ರಹವಾಗಿತ್ತು. ಈ ಕುರಿತ ಹರಾಜು ನಡೆದ ವೀಡಿಯೋ, 13 ಸದಸ್ಯರ ಹೆಸರು ಮತ್ತು ಹಣದ ಮಾಹಿತಿಯುಳ್ಳ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವೈರಲ್ ಆಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಾಗಿದ್ದ ಈ ವೀಡಿಯೋಗಳು ಮಾಧ್ಯಮಗಳಲ್ಲೂ ಸುದ್ದಿಯಾಗಿದ್ದು, ಚರ್ಚೆಗೆ ಗ್ರಾಸ ಒದಗಿಸಿತ್ತು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಹರಾಜಿನ ವೀಡಿಯೋ, ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯನ್ನು ಆಧರಿಸಿ ಗ್ರಾಮಕ್ಕೆ ಭೇಟಿ ನೀಡಿದ್ದ ಕುರುಗೋಡು ತಹಸೀಲ್ದಾರ್ ಮತ್ತು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿ, ಕುರುಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಹಣ ನೀಡಿ ಅವಿರೋಧವಾಗಿ ಆಯ್ಕೆಯಾಗಿದ್ದ 13 ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಕೋಮಾಕ್ಕೆ ಜಾರಿದೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ: ಶಾಸಕ ಪ್ರಿಯಾಂಕ್ ಖರ್ಗೆ
ಈ ಕುರಿತ ವರದಿಯನ್ನು ಪರಿಶೀಲಿಸಿರುವ ರಾಜ್ಯ ಚುನಾವಣಾ ಆಯೋಗ, ಹರಾಜಿನಲ್ಲಿ ಹಣ ನೀಡಿ ಅವಿರೋಧವಾಗಿ ಆಯ್ಕೆಯಾಗಿರುವ 13 ಸದಸ್ಯರನ್ನು ಅಸಿಂಧುಗೊಳಿಸುವಂತೆ ಸೂಚಿಸಿ, ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಜತೆಗೆ ಸಿಂಧಿಗೇರಿ ಗ್ರಾಮ ಪಂಚಾಯಿತಿ ಚುನಾವಣೆಯನ್ನೇ ಮುಂದೂಡಲಾಗಿದೆ. ಅಸಿಂಧುಗೊಂಡಿರುವ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕಾ? ಇಲ್ಲವೇ? ಎಂಬುದನ್ನು ನ್ಯಾಯಾಲಯದ ಆದೇಶ ಹೊರಬೀಳಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸೇರ್ಪಡೆಗೆ ಅಡ್ಡಿ: ಸುವೇಂದು ರಾಜೀನಾಮೆ ಸ್ವೀಕರಿಸಲ್ಲ ಎಂದ ಬಂಗಾಳ ಸ್ಪೀಕರ್!