Advertisement

ಅಂಗೀಕಾರಗೊಳ್ಳದ “ಪ್ರಾಕ್ಸಿ ಮಸೂದೆ’

10:10 AM Apr 05, 2019 | Team Udayavani |

ಮಂಗಳೂರು: ಭಾರತವು ಡಿಜಿಟಲ್‌ ವ್ಯವಸ್ಥೆಗೆ ತೆರೆದುಕೊಂಡರೂ ಎನ್‌ಆರ್‌ಐಗಳ ಬಹು ಕಾಲದ ಬೇಡಿಕೆಯಾದ ಆನ್‌ಲೈನ್‌ ಮತದಾನ ಈ ಬಾರಿಯೂ ಈಡೇರಿಲ್ಲ. ಇದರಿಂದ ಸುಮಾರು 3.10 ಕೋಟಿ ಮಂದಿ ಅನಿವಾಸಿ ಭಾರತೀಯರಲ್ಲಿ ಹೆಚ್ಚಿನವರು ಈ ಬಾರಿಯೂ ವಚಿತರಾಗಲಿದ್ದರೆ. ಕೆಲವರು ಹಕ್ಕು ಚಲಾಯಿಸಲು ಬರುವುದಕ್ಕೂ ಸಿದ್ಧವಾಗುತ್ತಿದ್ದಾರೆ.

Advertisement

ಆನ್‌ಲೈನ್‌ ಮತದಾನಕ್ಕೆ ಅವಕಾಶ ಬೇಕೆನ್ನುವುದು ಅನಿವಾಸಿ ಭಾರತೀಯರ ಸುಮಾರು 20 ವರ್ಷಗಳ ಬೇಡಿಕೆ. ಭಾರತ ಡಿಜಿಟಲೀಕರಣಕ್ಕೆ ತೆರೆದುಕೊಂಡ ಬಳಿಕ ಈ ವ್ಯವಸ್ಥೆ ಜಾರಿಗೆ ಬರಬಹುದು ಅಂದಕೊಂಡರೂ ಹಾಗಾಗಿಲ್ಲ.
ಎನ್ನಾರೈಗಳು ಮತದಾನ ಹಕ್ಕಿನಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಪ್ರತಿನಿಧಿ ಮತದಾನಕ್ಕೆ ಅವಕಾಶ (ಪ್ರಾಕ್ಸಿ ಮತದಾನ) ನೀಡುವ ಮಸೂದೆ ಕಳೆದ ವರ್ಷ ಲೋಕಸಭೆಯಲ್ಲಿ ಮಂಡನೆಯಾಗಿ ಅನುಮೋದನೆಯಾಗಿತ್ತು. ಎನ್ನಾರೈಗಳು ತಮ್ಮ ಪ್ರತಿನಿಧಿ ನಿಯೋಜಿಸುವ ಮೂಲಕ ತಮ್ಮ ಹೆಸರು ಇರುವ ಕ್ಷೇತ್ರಗಳಲ್ಲಿ ಮತದಾನ ಮಾಡುವುದಕ್ಕೆ ಆ ಮಸೂದೆ ಅವಕಾಶ ನೀಡುತ್ತದೆ. ಆದರೆ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರಕಿಲ್ಲ.

ಮತದಾನ ಪ್ರಮಾಣ ಹೆಚ್ಚಳ
ಎನ್ನಾರೈಗಳು ಮತದಾನದಲ್ಲಿ ಪಾಲ್ಗೊಳ್ಳಲು ಆನ್‌ಲೈನ್‌ ವ್ಯವಸ್ಥೆ ಜಾರಿಗೆ ಬಂದರೆ ದೇಶದಲ್ಲಿ ಒಟ್ಟು ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಳ ಖಚಿತ‌. ಅಂಕಿ ಅಂಶಗಳ ಪ್ರಕಾರ 3.10 ಕೋಟಿ ಅನಿವಾಸಿ ಭಾರತೀಯರಿದ್ದಾರೆ. ಇದರಲ್ಲಿ ಬಹುತೇಕ ಮಂದಿ ಇರುವುದು ಕೊಲ್ಲಿ ರಾಷ್ಟ್ರಗಳಲ್ಲಿ. ಆದರೆ ಚುನಾವಣ ಆಯೋಗ ಆನ್‌ಲೈನ್‌ ಮತದಾನಕ್ಕೆ ಅವಕಾಶ ನೀಡದಿರುವುದರಿಂದ ಬಹುತೇಕರಿಗೆ ನಿರಾಶೆಯಾಗಿದೆ. ಭವಿಷ್ಯದಲ್ಲದರೂ ಇದಕ್ಕೆ ಅವಕಾಶ ದೊರೆಯಲಿ ಎಂಬ ಆಶಾವದ ಎನ್ನಾರೈಗಳದ್ದು.

ಲಕ್ಷ ರೂ. ಖರ್ಚು
ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಎನ್ನಾರೈಗಳಿಗೆ ಭಾರತಕ್ಕೆ ಬರಲು ಕನಿಷ್ಠ 30 ಸಾವಿರ ರೂ.ಗಳಿಂದ 1 ಲಕ್ಷ ವರೆಗೂ ಖರ್ಚಾಗುತ್ತದೆ. ಇತರ ದೇಶಗಳಲ್ಲಿ ನೆಲೆಸಿರುವವರಿಗೆ ಇದರ ದುಪ್ಪಟ್ಟು ಖರ್ಚು ತಗಲುತ್ತದೆ. ಕೇವಲ ಮತ ಚಲಾಯಿಸಲು ಇಷ್ಟೆಲ್ಲ ಖರ್ಚು ಮಾಡುವುದಕ್ಕೆ ಎನ್‌ಆರ್‌ಐಗಳು ಹಿಂದೇಟು ಹಾಕುತ್ತಾರೆ. ಇದಕ್ಕಾಗಿ ಆನ್‌ಲೈನ್‌ ಮತ ಚಲಾವಣೆ ಅವಕಾಶ ಬೇಕು ಎನ್ನುತ್ತಾರೆ ಎನ್ನಾರೈ ಮೋಹನ್‌ದಾಸ್‌ ಕಾಮತ್‌.

ಅವಕಾಶ ಇಲ್ಲ
ಆನ್‌ಲೈನ್‌ ಮತದಾನಕ್ಕೆ ಭಾರತದಲ್ಲಿ ಅವಕಾಶ ಇಲ್ಲ. ಸಂಬಂಧ ಪಟ್ಟ ಕಾಯಿದೆಯಲ್ಲಿ ತಿದ್ದುಪಡಿ ಆದಲ್ಲಿ ಮಾತ್ರ ಅವಕಾಶ ಸಿಗುತ್ತದೆ. ಮತದಾನ ದಿನ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಮತದಾನ ಮಾಡಬಹುದು.
ಪ್ರಮೀಳಾ, ಚುನಾವಣೆ ಶಾಖೆ ನಿರ್ವಹಣಾಧಿಕಾರಿ

Advertisement

ಮತದಾನಕ್ಕೆ ಬರುವೆ
ಮತದಾನಕ್ಕಾಗಿ ಊರಿಗೆ ಬರಲು ಕನಿಷ್ಠ 50 ಸಾವಿರ ರೂ. ಖರ್ಚು ತಗಲುತ್ತದೆ.
ಆದಾಗ್ಯೂ ದೇಶಕ್ಕೆ ಸಮರ್ಥ ನಾಯಕನ ಆಯ್ಕೆಗಾಗಿ ನಾನು ಈ ಬಾರಿ ಮತ ಹಾಕಲು ಊರಿಗೆ ಬರುತ್ತಿದ್ದೇನೆ.
ಹೇಮಂತ್‌ ಉಪ್ಪಿನಂಗಡಿ ಸೌದಿ ಅರೇಬಿಯಾದಲ್ಲಿರುವ ಎನ್ನಾರೈ

ಮತದಾನ; ನೋವು
ಪ್ರತಿ ಬಾರಿಯೂ ಮತದಾನದಿಂದ ವಂಚಿತರಾಗುತ್ತಿದ್ದೇವೆ. ಯಾವುದೇ ರೀತಿಯ ದುರ್ಬಳಕೆಯಾಗದಂತೆ ಕಟ್ಟುನಿಟ್ಟಿನ ಆನ್‌ಲೈನ್‌ ಮತದಾನ ವ್ಯವಸ್ಥೆ ಜಾರಿಗೆ ಬಂದಲ್ಲಿ ನಮ್ಮಂತ ಲಕ್ಷಾಂತರ ಅನಿವಾಸಿ ಭಾರತೀಯರು ಮತದಾನ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬಹುದು.
ಚೇತನ್‌ ಕೆಂದಾಡಿ,  ಅಬುಧಾಬಿಯಲ್ಲಿರುವ ಅನಿವಾಸಿ ಭಾರತೀಯ

  ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next