ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನಡೆದ ಸಂಸದೀಯ ಸಭೆಯಲ್ಲಿ ಆಕಾಶ್ ವಿಜಯವರ್ಗೀಯ ಅವರು ಬ್ಯಾಟ್‌ನಲ್ಲಿ ಅಧಿಕಾರಿಗೆ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಕಿಡಿ ಕಾರಿದ್ದಾರೆ.
ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ, ಯಾರ ಮಗನೇ ಆಗಲಿ. ಈ ರೀತಿ ವರ್ತಿಸುವವರನ್ನು ಪಕ್ಷದಿಂದನಿರ್ದಾಕ್ಷಿಣ್ಯವಾಗಿ ಹೊರ ಹಾಕಿ ಎಂದು ಗುಡುಗಿದ್ದಾರೆ.
ಸಂಸದೀಯ ಸಭೆಯ ಬಳಿಕ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಢಿ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಪ್ರಧಾನಿ ಮೋದಿ ಅವರು ಪಕ್ಷದ ನಾಯಕರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಅಂತಹ ನಡವಳಿಕೆಯು ಸ್ವೀಕಾರಾರ್ಹವಲ್ಲ, ಯಾರೇ ಆಗಿರಲಿ ಕಠಿಣ ಕ್ರಮ ಕೈಗೊಳ್ಳಬೇಕು. ಪಕ್ಷಕ್ಕೆ ಕೆಟ್ಟ ಹೆಸರು ತರುವುದನ್ನು ಸಹಿಸುವುದಿಲ್ಲ.ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ ಎಂದರು.
ಬಿಜೆಪಿ ಹಿರಿಯ ನಾಯಕ ಕೈಲಾಷ್ ವಿಜಯವರ್ಗೀಯ ಅವರ ಪುತ್ರ ಮಧ್ಯಪ್ರದೇಶದ ಇಂಧೋರ್‌ನ ಶಾಸಕ ಆಕಾಶ್ ವಿಜಯ್ ವರ್ಗೀಯ ಅವರು ಸಾರ್ವಜನಿಕರವಾಗಿ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರ ಬಂದ ಅವರಿಗೆ ಸಂಭ್ರಮಾಚರಣೆಯ ಸ್ವಾಗತವೂ ದೊರಕಿತ್ತು. ಈ ಘಟನೆ ಬಿಜೆಪಿಗೆ ತೀವ್ರ ಮುಜುಗರವನ್ನು ತಂದಿಟ್ಟಿತ್ತು, ವಿಪಕ್ಷಗಳು ವ್ಯಾಪಕ ಟೀಕಾ ಪ್ರಹಾರವನ್ನು ನಡೆಸಿದ್ದವು.