ವಿಶ್ವಸಂಸ್ಥೆ: ಪಾಕಿಸ್ಥಾನದ ಉಗ್ರ ಸಂಘಟನೆಗಳು ಮಕ್ಕಳನ್ನೂ ಬಿಡದೆ ಆತ್ಮಾಹುತಿ ದಾಳಿ ಸಹಿತ ಉಗ್ರ ಕೃತ್ಯಗಳಿಗೆ ಪ್ರಚೋದಿಸಿ ಬಳಸಿಕೊಳ್ಳುತ್ತಿವೆ. ಜಮ್ಮು-ಕಾಶ್ಮೀರದ ಮಕ್ಕಳೂ ಇಂಥ ಉಗ್ರ ಸಂಘಟನೆಗಳ ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ ಎಂಬ ಗಂಭೀರ ಹಾಗೂ ಆತಂಕಕಾರಿ ಮಾಹಿತಿಯೊಂದನ್ನು ವಿಶ್ವಸಂಸ್ಥೆ ಬಹಿರಂಗಪಡಿಸಿದೆ.
ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿ ದೀನ್‌ನಂಥ ಸಂಘಟನೆಗಳು ಇಂಥ ಕೃತ್ಯದಲ್ಲಿ ತೊಡಗಿಕೊಂಡಿವೆ ಎಂದು ಮಕ್ಕಳು ಮತ್ತು ಸಶಸ್ತ್ರ ಸಂಘರ್ಷಬಗ್ಗೆ ವಿಶ್ವಸಂಸ್ಥೆ ಪ್ರ. ಕಾರ್ಯದರ್ಶಿಯ ವಾರ್ಷಿಕ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಕಾಶ್ಮೀರ ದಲ್ಲಿ ಭದ್ರತಾ ಪಡೆಗಳೊಂದಿಗೆ ಘರ್ಷಣೆಗಿಳಿಯು ವಂತೆ ಮಕ್ಕಳನ್ನೂ ಛೂ ಬಿಡಲಾಗುತ್ತಿದೆ.
ಪಾಕ್‌ನಲ್ಲೂ ಇಂಥ ಹೀನ ಕೃತ್ಯಗಳು ನಡೆದಿದ್ದು, ಮದ್ರಸ ಗಳಿಂದಲೇ ಮಕ್ಕಳನ್ನು ಆಯ್ಕೆ ಮಾಡಿ, ಆತ್ಮಾಹುತಿ ಬಾಂಬರ್‌ಗಳಾಗಿ ಪರಿವರ್ತಿಸ ಲಾಗುತ್ತಿದೆ ಎಂದೂ ವರದಿ ಹೇಳಿದೆ. ಇಂಥ ಸಂಘಟನೆಗಳೇ ಬಿಡುಗಡೆಗೊಳಿಸಿದ ವೀಡಿಯೋ ತುಣುಕುಗಳಲ್ಲಿ ಮಕ್ಕಳನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ. ತರಬೇತಿ ಬಳಿಕ ಹೇಗೆ ಆತ್ಮಾಹುತಿ ಬಾಂಬರ್‌ಗಳಾಗಿ ಬದಲಿಸಲಾಗುತ್ತದೆ ಎಂಬೆಲ್ಲ ಮಾಹಿತಿ ಹೊರಹಾಕಲಾಗಲಾಗಿದೆ ಎಂದು ಹೇಳಲಾಗಿದೆ.
ಬಾಲಕಿಯರೂ ಬಲಿ: 2017ರ ಜನವರಿ-ಡಿಸೆಂಬರ್ ವೇಳೆಯಲ್ಲಿ ಸಿದ್ಧಪಡಿಸಲಾದ ವರದಿ ಇದಾಗಿದ್ದು, “ಕೆಲವೊಂದು ಮದ್ರಸಗಳಲ್ಲಿಯೇ ಮಕ್ಕಳನ್ನು ಇಂಥ ಕೃತ್ಯಗಳಿಗೆ ಪ್ರಚೋದಿಸಿ ತರಬೇತಿಗೆ ಕರೆದೊಯ್ಯಲಾಗುತ್ತಿದೆ. ಈ ಬಗ್ಗೆ ಪಾಕಿಸ್ಥಾನದಿಂದಲೇ ಅಧಿಕೃತವಾಗಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಪಾಕ್ ಮೂಲದ ಕೆಲವು ಉಗ್ರ ಸಂಘಟನೆಗಳು ನಿರಂತರವಾಗಿ ಮಕ್ಕಳನ್ನು ಆತ್ಮಾಹುತಿ ಬಾಂಬರ್‌ಗಳಾಗಿ ಬಳಸಿಕೊಳ್ಳುತ್ತಿವೆ’ ಎಂದು ಹೇಳಿದೆ. ಅಲ್ಲದೆ, ಜನವರಿಯಲ್ಲಿ ತೆಹ್ರಿಕ್-ಇ- ತಾಲಿಬಾನ್ ಪಾಕಿಸ್ಥಾನ್ ಇಂಥದ್ದೊಂದು ವೀಡಿಯೋ ಬಿಡುಗಡೆ ಮಾಡಿತ್ತು. ಬಾಲಕರಷ್ಟೇ ಅಲ್ಲದೆ, ಬಾಲಕಿಯರೂ ಇದಕ್ಕೆ ಬಲಿಯಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದೂ ವರದಿ ತಿಳಿಸಿದೆ.
“ಗ್ರೇ ಲಿಸ್ಟ್’ನಲ್ಲಿ ಪಾಕಿಸ್ಥಾನ; ಪರೋಕ್ಷ ಕಪಾಳಮೋಕ್ಷ!: ಸುನ್ನಿ ಪ್ರತ್ಯೇಕತಾವಾದಿ ಸಂಘಟನೆ ಮೇಲೆ ಹೇರಿದ್ದ ನಿಷೇಧವನ್ನು ಪಾಕಿಸ್ಥಾನ ಸರಕಾರ ವಾಪಸ್ ಪಡೆದ ಕೆಲವೇ ಗಂಟೆಗಳಲ್ಲಿ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಪಾಕಿಸ್ಥಾನವನ್ನು “ಗ್ರೇ ಲಿಸ್ಟ್’ಗೆ ಸೇರಿಸಿದೆ. ಭಯೋತ್ಪಾದನ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವುದನ್ನು ಇನ್ನೂ ನಿಲ್ಲಿಸದೇ ಇರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಂಡಿದೆ. ಈ ಮೂಲಕ ಪಾಕ್ ಸರಕಾರಕ್ಕೆ ಪರೋಕ್ಷವಾಗಿ ಕಪಾಳಮೋಕ್ಷ ಮಾಡಿದೆ. ಅಷ್ಟೇ ಅಲ್ಲ, ಒಟ್ಟು 26 ಅಂಶಗಳ ಕ್ರಮಕ್ಕೆ ಮುಂದಾಗುವ ನಿರ್ಧಾರವನ್ನು ಪ್ರಕಟಿಸಿದೆ. ಪ್ಯಾರಿಸ್‌ನಲ್ಲಿ ನಡೆದ ಎಫ್ಎಟಿಎಫ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದಕ್ಕಿವೆ ಸಾಕ್ಷಿಗಳು
ಸಿಂಧ್ ಪ್ರಾಂತ್ಯದ ಸೆಹ್ವಾನ್‌ನಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ದಾಳಿಯಲ್ಲಿ 20 ಮಕ್ಕಳು ಸಹಿತ 75 ಮಂದಿ ಬಲಿಯಾಗಿದ್ದರು.
ಕಳೆದ ವರ್ಷದಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ 8 ಪ್ರಮುಖ ದಾಳಿಗಳ ಪೈಕಿ 4 ನಡೆದಿರುವುದು ಬಾಲಕಿಯರ ಶಾಲೆಗಳಲ್ಲಿ.
ಝಾರ್ ಕಣಿವೆ ಪ್ರದೇಶದ ಆಕ್ಸ್‌ಫರ್ಡ್ ಪಬ್ಲಿಕ್ ಶಾಲೆಯ ಮೇಲೆ ಮಾರ್ಚ್‌ನಲ್ಲಿ ನಡೆದ ದಾಳಿಯಲ್ಲಿ ಶಿಕ್ಷಕಿಯರು ಬಲಿಯಾಗಿದ್ದರು.
ಮಾರ್ಚ್‌ನಲ್ಲೇ ಬಲೂಚಿಸ್ತಾನ ಪ್ರಾಂತ್ಯದ ಖೀಲಾ ಅಬ್ದುಲ್ಲಾದಲ್ಲಿಯೂ ಶಾಲೆಯನ್ನೇ ಗುರಿಯಾಗಿಸಿಕೊಂಡು ದಾಳಿ ನಡೆದಿತ್ತು.
2014ರಲ್ಲಿ ಪೇಶಾವರದಲ್ಲಿರುವ ಆರ್ಮಿ ಶಾಲೆಯ ಮೇಲೆ ದಾಳಿ ನಡೆದಾಗ ಮಕ್ಕಳು ಸಹಿತ 150 ಮಂದಿ ಬಲಿಯಾಗಿದ್ದರು.
ಬಾಲಕಿಯರು ಶಿಕ್ಷಣ ಪಡೆಯುತ್ತಿರುವುದನ್ನೇ ಗುರಿಯಾಗಿಸಿಕೊಂಡು ಅಂಥ ಶಾಲೆ ಗಳ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದಾರೆ. ಈ ಕೃತ್ಯಕ್ಕೆ ಮಕ್ಕಳನ್ನೇ ಬಳಸಿ ಕೊಳ್ಳಲಾಗುತ್ತಿದೆ. ಪಾಕಿಸ್ಥಾನ ಸರಕಾರ ಇದನ್ನು ಗಂಭೀರ ವಾಗಿ ಪರಿಗಣಿಸಬೇಕಿದೆ.
– ಆ್ಯಂಟೋನಿಯೊ ಗುಟೆರಸ್, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ