Advertisement

ಪಾಕ್‌ಗೆ ಮತ್ತೆ ಜಾಗತಿಕ ಮುಖಭಂಗ

01:22 AM Sep 12, 2019 | Team Udayavani |

ವಿಶ್ವಸಂಸ್ಥೆ: ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸಲು ವಿಶ್ವಸಂಸ್ಥೆ ಸ್ಪಷ್ಟವಾಗಿ ನಿರಾಕರಿಸಿದ್ದು, ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನವೇ ಖುದ್ದು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಖಡಾಖಂಡಿತವಾಗಿ ಹೇಳಿದೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟಾನಿಯೋ ಗುಟೆರೆಸ್‌ ಅವರ ವಕ್ತಾರ ಸ್ಟೀಫ‌ನ್‌ ಡ್ಯುರಾಜಿಕ್‌, ”ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಯಾವುದೇ ಇರಾದೆ ಗುಟೆರೆಸ್‌ ಅವರಿಗಿಲ್ಲ. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಆಗಾಗ ಭುಗಿಲೇಳುವ ಗಡಿ ಸಂಬಂಧಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಅವರು ಆತಂಕಗೊಂಡಿದ್ದಾರೆ. ಆದಾಗ್ಯೂ, ಆ ಸಮಸ್ಯೆಯನ್ನು ಉಭಯ ರಾಷ್ಟ್ರಗಳೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದೂ ಅಪೇಕ್ಷಿಸಿದ್ದಾರೆ” ಎಂದು ಹೇಳಿದ್ದಾರೆ.

ಪಾಕ್‌ಗೆ ದೊಡ್ಡ ಮುಖಭಂಗ: ಡ್ಯುರಾಜಿಕ್‌ ಅವರ ಈ ಹೇಳಿಕೆ, ಕಾಶ್ಮೀರ ವಿಚಾರದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸುವಂತೆ ಮಾಡಲು ಹರಸಾಹಸ ಪಡುತ್ತಿದ್ದ ಪಾಕಿಸ್ತಾನಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದೆ. ಸಮಸ್ಯೆ ಇತ್ಯರ್ಥಕ್ಕೆ ಮಧ್ಯಪ್ರವೇಶಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಸೇರಿದಂತೆ ಅನೇಕ ವಿಶ್ವನಾಯಕರ ಸಹಾಯ ಕೋರುತ್ತಿದ್ದ ಪಾಕಿಸ್ತಾನ, ತನ್ನ ಎಲ್ಲಾ ಯತ್ನದಲ್ಲೂ ವಿಫ‌ಲವಾಗಿದೆ. ಜಿನಿವಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ 42ನೇ ಮಹಾ ಸಮ್ಮೇಳನದಲ್ಲಿ ಇಂಥದ್ದೇ ಪ್ರಯತ್ನಕ್ಕೆ ಕೈ ಹಾಕಿದ್ದ ಪಾಕ್‌, 47 ರಾಷ್ಟ್ರಗಳ ಪ್ರತಿನಿಧಿಗಳ ಮುಂದೆ ಭಾರತವನ್ನು ಖಳನಾಯಕನನ್ನಾಗಿ ಚಿತ್ರಿಸಿ, ಜಾಗತಿಕ ಸಮುದಾಯವನ್ನು ಕಾಶ್ಮೀರದತ್ತ ಸೆಳೆಯುವ ಯತ್ನ ಮಾಡಿತ್ತು. ಕಾಶ್ಮೀರ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿತ್ತು. ಆದರೆ, ಬುಧವಾರ ಹೊರಬಿದ್ದಿರುವ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯವರ ಮನದಿಂಗಿತ ಪಾಕಿಸ್ತಾನದ ಪ್ರಯತಕ್ಕೆ ತಣ್ಣೀರೆರೆಚಿದೆ. ಈ ನಡುವೆ, ಪಿಒಕೆಯಲ್ಲಿ ಇಮ್ರಾನ್‌ ಖಾನ್‌ ಬುಧ ವಾರ ಬೃಹತ್‌ ರ್ಯಾಲಿ ನಡೆಸಿದ್ದು, ಕಾಶ್ಮೀರ ಜನತೆಗೆ ನೈತಿಕ ಬೆಂಬಲ ನೀಡಬೇಕೆಂದು ಕರೆ ನೀಡಿದ್ದಾರೆ.

ನೂರ್‌ಗೆ ಜಾಗತಿಕ ಉಗ್ರನ ಪಟ್ಟ: ಪಾಕಿಸ್ತಾನದ ತೆಹ್ರೀಕ್‌-ಎ-ತಾಲಿಬಾನ್‌ ಪಾಕಿಸ್ತಾನ್‌ (ಟಿಟಿಪಿ) ಸಂಘಟನೆಯ ಮುಖ್ಯಸ್ಥ ನೂರ್‌ ವಾಲಿಯನ್ನು ‘ಜಾಗತಿಕ ಮಟ್ಟದ ವಿಶೇಷ ಉಗ್ರ’ನೆಂದು ಅಮೆರಿಕ ಘೋಷಿಸಿದೆ. ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡಗಳ ಮೇಲಿನ ದಾಳಿಗೆ 18 ವರ್ಷ ತುಂಬಿದ ಸಂದರ್ಭದಲ್ಲೇ ಅಮೆರಿಕ ಈ ಹೊಸ ನಿರ್ಧಾರ ಪ್ರಕಟಿಸಿದೆ.

ಸುಪ್ರೀಂ ಮೆಟ್ಟಿಲೇರಿದ ವೈಕೋ: ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾರನ್ನು ಹಾಜರು ಪಡಿಸುವಂತೆ ಕೇಂದ್ರ ಹಾಗೂ ಜಮ್ಮು- ಕಾಶ್ಮೀರ ಸರ್ಕಾರಕ್ಕೆ ಸೂಚಿಸುವಂತೆ ಕೋರಿ ರಾಜ್ಯಸಭೆ ಸದಸ್ಯ, ಎಂಡಿಎಂಕೆ ಸ್ಥಾಪಕ ವೈಕೋ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಗೃಹಬಂಧನದಲ್ಲಿ ಇರಿಸುವ ಮೂಲಕ ಸಾಂವಿಧಾನಿಕ ಹಕ್ಕುಗಳಿಂದ ಅವರನ್ನು ವಂಚಿಸಲಾಗುತ್ತಿದೆ ಎಂದು ವೈಕೋ ಆರೋಪಿಸಿದ್ದಾರೆ.

Advertisement

ಉಗ್ರರ ರವಾನೆಗೆ ಸಜ್ಜಾದ ಪಾಕ್‌
ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ತಾನು ಹೊಂದಿರುವ ಉಗ್ರರ ಶಿಬಿರಗಳನ್ನು ಪುನರಾರಂಭಿಸಿರುವ ಪಾಕಿಸ್ತಾನ, ಉಗ್ರರ ಒಳನುಸುಳುವಿಕೆಯ ಏಳು ಗುಪ್ತ ಮಾರ್ಗಗಳನ್ನು ಮತ್ತೆ ಸನ್ನದ್ಧಗೊಳಿಸಿದೆ. ಈ ಮೂಲಕ, ಸದ್ಯದಲ್ಲೇ ಭಾರತದೊಳಕ್ಕೆ 275 ಉಗ್ರರನ್ನು ಕಳುಹಿಸಲು ಯೋಜನೆ ರೂಪಿಸಲಾಗಿದೆ ಎಂದು ಭಾರತೀಯ ಗುಪ್ತಚರ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಈ ಉಗ್ರರಲ್ಲಿ ಆಫ‌್ಗನ್‌ ಮೂಲದ ಜಿಹಾದಿಗಳು ಹಾಗೂ ಪಶ್ತುನ್‌ ಪ್ರಾಂತ್ಯದಲ್ಲಿರುವ ಬಾಡಿಗೆ ಸೈನಿಕರಿದ್ದಾರೆ ಎಂದು ಹೇಳಲಾಗಿದೆ. ಅಂದಹಾಗೆ, ಬಾಡಿಗೆ ಸೈನಿಕರನ್ನು ಒಗ್ಗೂಡಿಸಿ ಅವರನ್ನು ಭಾರತದ ಕಡೆಗೆ ಛೂ ಬಿಡುವುದು ಹೊಸ ವಿಚಾರವೇನಲ್ಲ ಎಂದು ಮೂಲಗಳು ತಿಳಿಸಿವೆ.

ಲಷ್ಕರ್‌ ಉಗ್ರನ ಹತ್ಯೆ
ಇತ್ತೀಚೆಗೆ, ಜಮ್ಮು ಕಾಶ್ಮೀರದ ಸಪೋರೆ ಜಿಲ್ಲೆಯ ಹಣ್ಣು ವ್ಯಾಪಾರಿಯೊಬ್ಬರ ಮನೆಯಲ್ಲಿದ್ದ ಐದು ವರ್ಷದ ಹೆಣ್ಣು ಮಗುವಿನ ಮೇಲೆ ಗುಂಡು ಹಾರಿಸಿ ಆಕೆಯನ್ನು ಗಾಯಗೊಳಿಸಿದ್ದ ಲಷ್ಕರ್‌-ಎ-ತೊಯ್ಬಾ ಉಗ್ರ ಆಸಿಫ್ ಮಕ್ಬೂಲ್ ಬಟ್‌ನನ್ನು ಭದ್ರತಾ ಪಡೆಗಳು ಬುಧವಾರ, ಗುಂಡಿಕ್ಕಿ ಹತ್ಯೆಗೈದಿದೆ.

Advertisement

Udayavani is now on Telegram. Click here to join our channel and stay updated with the latest news.

Next