ವಿಜಯಪುರ: ಎಂಟು ಬಾರಿ ಶಾಸಕನಾಗಿ ಅಯ್ಕೆ ಆಗಿರುವ ನನಗೂ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ. ಹೈಕಮಾಂಡ್ ಯಡಿಯೂರಪ್ಪ ಅವರನ್ನು ವಯಸ್ಸು ಹಾಗೂ ಇತರೆ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನದ ಬದಲಾವಣೆಗೆ ಮುಂದಾದಲ್ಲಿ ನಾನೂ ಆಕಾಂಕ್ಷಿ ಎಂದು ಆಹಾರ, ನಾಗರಿಕ ಸರಬರಾಜು ಖಾತೆ ಸಚಿವ ಉಮೇಶ್ ಕತ್ತಿ ಸಿ.ಎಂ. ಹಕ್ಕು ಪ್ರತಿಪಾದಿಸಿದ್ದಾರೆ.
ಸೋಮವಾರ ವಿಜಯಪುರ ಜಿಲ್ಲೆಯ ಆಲಮಟ್ಟಿ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಅಭಿವೃದ್ಧಿ ಹಿನ್ನಡೆ ಕಂಡು ಬಂದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಧ್ವನಿ ಎತ್ತುವಲ್ಲಿ ಹಿಂದೆ ಬೀಳುವುದಿಲ್ಲ ಎಂದೂ ಹೇಳಿದರು.
ಜಲಸಂಪನ್ಮೂಲ ಖಾತೆ ಸೇರಿದಂತೆ ಹಲವು ಖಾತೆ ನಿರ್ವಹುಸುವ ಸಾಮರ್ಥ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇದೆ. ಪ್ರಮುಖ ಖಾತೆಗಳು ಸೇರಿದಂತೆ ಹಲವು ಖಾತೆಗಳ ನಿರ್ವಹಣೆ ವಿಷಯದಲ್ಲಿ ಮುಖ್ಯಮಂತ್ರಿ ಗಳಿಗೆ ಒತ್ತಡ ಆಗಲಿದೆ ಎಂಬುದು ನಿಮ್ಮ ಹಾಗೂ ನನ್ನ ಅಭಿಪ್ರಾಯ ಅಷ್ಟೇ, ಆದರೆ ಮುಖ್ಯಮಂತ್ರಿ ಹಲವು ಖಾತೆ ನಿರ್ವಹಿಸುವಲ್ಲಿ ಸಮರ್ಥರಿದ್ದಾರೆ ಎಂದರು.
ಇದನ್ನೂ ಓದಿ :ಅಟಾರ್ನಿ ಜನರಲ್ ವೇಣುಗೋಪಾಲ್ ಅಧಿಕಾರಾವಧಿ ವಿಸ್ತರಣೆ ?
ರಾಜ್ಯದಲ್ಲಿ ಬಿಳಿಜೋಳ, ಮಾಲದಂಡಿ ಜೋಳದ ಬೆಂಬಲ ಬೆಲೆ ಹೆಚ್ಚಳದ ಕುರಿತು ಕೇಂದ್ರಕ್ಕೆ ಮನವಿ ಮಾಡಲಾಗುತ್ತದೆ. ಬೆಂಬಲ ಬೆಲೆಯಲ್ಲಿ ಖರೀದಿಸಿದ ಬಿಳಿಜೋಳ, ರಾಗಿ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ದಕ್ಷಿಣ ಕರ್ನಾಟಕದಲ್ಲಿ ರಾಗಿ, ಉತ್ತರ ಕರ್ನಾಟಕ ಭಾಗದಲ್ಲಿ ಜೋಳದ ಬಳಕೆಗೆ ತಕ್ಕಂತೆ ವಿತರಣೆಗೆ ಚಿಂತನೆ ನಡೆದಿದೆ. ಗ್ರಾಹಕರ ಬೇಡಿಕೆ, ಧಾನ್ಯಗಳ ದಾಸ್ತಾನು ಲಭ್ಯತೆ ಆಧರಿಸಿ ಪೂರೈಕೆ ಹಾಗೂ ವಿತರಣೆಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಉಮೇಶ ಕತ್ತಿ ವಿವರಿಸಿದರು.