ಬೆಳಗಾವಿ : ಮಾಸ್ಕ್ ಹಾಕುವುದು ಬಿಡುವುದು ಜನರ ವೈಯಕ್ತಿಕ ವಿಚಾರ. ನನಗೆ ಮಾಸ್ಕ್ ಹಾಕಬೇಕೆಂದು ಅನಿಸಿಲ್ಲ. ಹೀಗಾಗಿ ನಾನು ಮಾಸ್ಕ್ ಹಾಕುವುದಿಲ್ಲ ಎಂದು
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಅರಣ್ಯ ಸಚಿವ ಉಮೇಶ ಕತ್ತಿ ಉಡಾಫೆ ಉತ್ತರ ನೀಡುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.
ಅಥಣಿಯಲ್ಲಿ ಸಾಮಾಜಿಕ ಅಂತರ ಮರೆತು ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಇಂಥ ಉಡಾಫೆ ಉತ್ತರ ನೀಡಿದ ಸಚಿವ ಕತ್ತಿ, ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಸ್ವಂತ ಜವಾಬ್ದಾರಿ ಹೊತ್ತು ಅವರೇ (ಜನರು) ಮಾಸ್ಕ್ ಹಾಕಿಕೊಳ್ಳಬೇಕು. ಮಾಸ್ಕ್ ಹಾಕದೇ ಇರುವುದು ನನ್ನ ವೈಯಕ್ತಿಕ ವಿಚಾರ. ನಾನು ಮಾಸ್ಕ್ ಹಾಕುವುದಿಲ್ಲ ಎಂದು ಹೇಳಿದರು.
ಮಾಸ್ಕ್ ವಿಚಾರದಲ್ಲಿ ಜನ ಸಾಮಾನ್ಯರಿಗೊಂದು ನ್ಯಾಯ ಜನಪ್ರತಿನಿಧಿಗಳಿಗೆ ಒಂದು ನ್ಯಾಯ ಆಗಿದ್ದು, ಈ ಬಗ್ಗೆ ಉಮೇಶ ಕತ್ತಿ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರ್ಯಕ್ರಮದಲ್ಲಿಯೂ ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರ ಮರೆತು ಜನಪ್ರತಿನಿಧಿಗಳು ಭಾಗವಹಿಸಿದ್ದರು. ಉಮೇಶ ಕತ್ತಿ, ಮಾಜಿ ಸಚಿವ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಮಹೇಶ ಕುಮಟಳ್ಳಿ ಮಾಸ್ಕ್ ಹಾಕಿಕೊಂಡಿರಲಿಲ್ಲ.
ನನ್ನ ಹೇಳಿಕೆಯ ಅಪಾರ್ಥ ಬೇಡ: ಸಚಿವ ಕತ್ತಿ ಟ್ವಿಟ್
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವ ಉಮೇಶ ಕತ್ತಿ ಅವರು, ನಾನು ಮಾತನಾಡಿರುವ ಬಗ್ಗೆ ಜನ ಅಪಾರ್ಥ ತಿಳಿಯಬಾರದು. ಮಾಸ್ಕ್ ಹಾಕುವ ವಿಚಾರದಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಪಾಲಿಸಬೇಕು ಎನ್ನುವುದು ನನ್ನ ನಿಲುವು.ಅದೇ ನನ್ನ ಹೇಳಿಕೆಯೂ ಆಗಿತ್ತು. ನಾನು ಮಾಸ್ಕ್ ಹಾಕಬೇಡಿ ಎಂದು ಯಾರಿಗೂ ಹೇಳಿಲ್ಲ. ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳುವುದು ಬೇಡ. ರಾಜ್ಯ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ನನಗೆ, ನನ್ನ ಜವಾಬ್ದಾರಿಯ ಸಂಪೂರ್ಣ ಅರಿವಿದೆ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಮಾಧ್ಯಮದಲ್ಲಿ ವರದಿಯಾಗಿದೆ. ಕೋವಿಡ್ ನಂತಹ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ನಮಗೆಲ್ಲರಿಗೂ ನಮ್ಮ ಹೊಣೆಗಾರಿಕೆ ಬಗ್ಗೆ ತಿಳಿದಿದೆ. ಹೀಗಾಗಿ ಕೋವಿಡ್ ಮುಗಿಯುವವರೆಗೆ ನಾವೆಲ್ಲರೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ ಎಂದು ಟ್ವಿಟ್ಟರ್ ಹಾಗೂ ಫೇಸಬುಕ್ ಪುಟದಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಏ.16ರಿಂದ ಮೇ 4 ರವರೆಗೆ ನಡೆಯಲಿದೆ ಪರೀಕ್ಷೆ