Advertisement

ರಾಷ್ಟ್ರೀಯ  ಕುಸ್ತಿ ಪಂದ್ಯಾವಳಿಗೆ ಉಮೇಶ ಜಮಾದಾರ್‌ ಆಯ್ಕೆ

10:18 AM Dec 30, 2018 | Team Udayavani |

ಬಸವಕಲ್ಯಾಣ: ಸಾಧನೆ ಮಾಡುವ ಛಲ, ಸತತ ಪ್ರಯತ್ನ ಹಾಗೂ ಆತ್ಮ ವಿಶ್ವಾಸವಿದ್ದರೆ ಜೀವನದಲ್ಲಿ ಏನು ಬೇಕಾದರೆ ಸಾಧನೆ ಮಾಡಬಹುದು. ಇದಕ್ಕೆ ಕೋಹಿನೂರ ಗ್ರಾಮದ ಬಡ ಕುಟುಂಬದ ಯುವಕ ಉಮೇಶ ಜಮಾದಾರ್‌ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿರುವುದೇ ನಿದರ್ಶನ.

Advertisement

ಉಮೇಶ ಅವರ ಸತತ ಪ್ರಯತ್ನದ ಫಲವಾಗಿ ಬೆಳಗಾವಿಯಲ್ಲಿ ಜ.26ರಂದು ನಡೆಯಲಿರುವ ರಾಷ್ಟ್ರೀಯ ಕುಸ್ತಿ ಪಂದ್ಯದಲ್ಲಿ ಕರ್ನಾಟಕ ಪ್ರತಿನಿಧಿಯಾಗಿ ಭಾಗವಹಿಸುವ ಅವಕಾಶ ಒದಗಿ ಬಂದಿದೆ. ಇದು ಕೇವಲ ಕುಟುಂಬದಲ್ಲಿ ಮಾತ್ರವಲ್ಲ. ಇಡೀ ಗ್ರಾಮದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ.

ಉಮೇಶ ಅವರು ಗಡಿ ಭಾಗದವರಾಗಿದ್ದರೂ, ಗ್ರಾಮದಲ್ಲಿ ಕುಸ್ತಿ ಅಭ್ಯಾಸಕ್ಕೆ ಬೇಕಾದ ಯಾವುದೇ ಗರಡಿ ಮನೆ ಇಲ್ಲದಿದ್ದರೂ, ಹೊಲದಲ್ಲಿ, ಜಾತ್ರಾ ಮೋತ್ಸವ ಹಾಗೂ ಗ್ರಾಮೀಣ ಭಾಗದಲ್ಲಿ ನಡೆಯುವ ಕುಸ್ತಿ ಪಂದ್ಯದಲ್ಲಿ ಭಾಗವಹಿಸುವ ಮೂಲಕ ತಮ್ಮ ಗುರಿಯ ಪಯಣ ಪ್ರಾರಂಭಿಸಿದರು.

ಈ ಕುರಿತ ತಮ್ಮ ಸ್ವಾನುಭವ ಹೇಳಿದ ಉಮೇಶ, ನನ್ನ ಪ್ರತಿಭೆ ಕಂಡು ಸಂಬಂಧಿಕರಾದ ಅಮರನಾಥ, ಬಸವರಾಜ ದೊಡ್ಮನಿ ಹಾಗೂ ಬಸವಣ್ಣನವರು ದಾವಣಗೆರೆಗೆ ಕರೆದುಕೊಂಡು ಹೋಗಿ ಎಆರ್‌ಜಿ ಕಾಲೇಜಿನಲ್ಲಿ ದ್ವಿತೀಯ ಪಿಯು ಪ್ರವೇಶದ ಜೊತೆಗೆ, ಕ್ರೀಡಾ ವಸತಿ ನಿಲಯಕ್ಕೆ ಸೇರಿಸಿದ್ದರು. ಇಲ್ಲಿನ ಅಂತಾರಾಷ್ಟ್ರೀಯ ಕೋಚ್‌ ಗಳಾದ ಮಂಜುನಾಥ, ಶಿವಾನಂದ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಅವಕಾಶ ಸಿಗಲು ಸಾಧ್ಯವಾಗಿದೆ. ನಾನು ಎಸ್‌ಎಸ್‌ ಎಲ್‌ಸಿ ಓದುತ್ತಿದ್ದಾಗ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅವಕಾಶ ಸಿಕ್ಕಿತ್ತು.

ಆದರೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯದಿಂದ ಅವಕಾಶ ಕೈ ತಪ್ಪಿಹೋಗಿತ್ತು. ಹಾಗಾಗಿ ನಾನು ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ ಎಂದು ಮನಗಂಡು ದಾವಣಗೆರೆಗೆ ಪ್ರಯಾಣಿಸಿದೆ ಎಂದು ಮಾಹಿತಿ ನೀಡಿದರು. ಉಮೇಶ ತಾಲೂಕಿನ ಗಡಿಭಾಗದಲ್ಲಿ ಜನಿಸಿದ್ದರೂ ಸತತ ಪ್ರಯತ್ನ ಹಾಗೂ ಆತ್ಮವಿಶ್ವಾಸದಿಂದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಕ್ಕೆ ಆಯ್ಕೆಯಾಗಿರುವುದು ಇತರ ಕ್ರೀಡಾ ಪಟುಗಳಿಗೆ ಮಾದರಿಯಾಗಿ ಜಿಲ್ಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

Advertisement

ನನ್ನ ಹಾಗೆ ಕೋಹಿನೂರ ಗ್ರಾಮದ ಸುತ್ತಮುತ್ತ ಕ್ರೀಡಾಪಟುಗಳು ಇದ್ದಾರೆ. ಆದರೆ ಅವರಿಗೆ ಯಾವುದೇ ಸೌಕರ್ಯ ಇಲ್ಲದ ಕಾರಣ ಪ್ರತಿಭೆ ತೋರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರ ಕೋಹಿನೂರ ಗ್ರಾಮದಲ್ಲಿ ಗರಡಿ ಮನೆ ನಿರ್ಮಿಸಿದರೆ ಇನ್ನೂ ಹೆಚ್ಚು ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ.
 ಉಮೇಶ ಜಮಾದಾರ್‌,
 ಕುಸ್ತಿ ಕ್ರೀಡಾಪಟು

ಗದಲೇಗಾಂವ್‌, ಬಟಗೇರವಾಡಿ, ಸಿರಗಾಪೂರ, ಹಾರಕೂಡ ಗ್ರಾಮದಲ್ಲಿ ಉಮೇಶ ಜಮಾದಾರ್‌ ಅಂತಹ ಕುಸ್ತಿ ಆಡುವ ಕ್ರೀಡಾಪಟುಗಳು ಸಾಕಷ್ಟು ಜನ ಇದ್ದಾರೆ. ಆದರೆ ಅವರಿಗೆ ಬೇಕಾದ ಸೌಕರ್ಯಗಳು ಇಲ್ಲ. ಹಾಗಾಗಿ ಜನಪ್ರತಿನಿಧಿಗಳು ಕುಸ್ತಿ ಕ್ರೀಡೆಗಾಗಿ ಬೇಕಾಗುವ ಸೌಕರ್ಯಗಳನ್ನು ಒದಗಿಸಿ ಕೊಟ್ಟರೆ ಉತ್ತಮ.
 ರತಿಕಾಂತ, ಕೋಹಿನೂರ ಗ್ರಾಪಂ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next