ಲಕ್ನೋ: ರಾಜಕೀಯ ಕಾರಣಗಳಿಗಾಗಿ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ತನ್ನ ಹೆಸರನ್ನು ಸೇರಿಸಲಾಗಿದೆ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಆರೋಪಿಸಿದ್ದಾರೆ.
ಲಕ್ನೋದಲ್ಲಿರುವ ಸಿಬಿಐಯ ವಿಶೇಷ ಕೋರ್ಟ್‌ಗೆ ಗುರುವಾರ ಖುದ್ದು ಹಾಜರಾಗಿ ನೀಡಿದ ಹೇಳಿಕೆಯಲ್ಲಿ ಕೇಂದ್ರದ ಮಾಜಿ ಸಚಿವೆ ಈ ಅಂಶ ಪ್ರಸ್ತಾವಿಸಿದ್ದಾರೆ.
ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ರಾಜಕೀಯ ಸೇಡು ತೀರಿಸಿಕೊಳ್ಳಲಾಗುತ್ತಿದೆ. ಕೇಂದ್ರ ತನಿಖಾ ಸಂಸ್ಥೆ ಮಸೀದಿ ಧ್ವಂಸ ಪ್ರಕರಣದಲ್ಲಿ ತನ್ನ ವಿರುದ್ಧ ಸಾಕ್ಷ್ಯವಿದೆ ಎಂದಿರುವುದೇ ಸುಳ್ಳು ಎಂದು ದೂರಿದರು.
ತಾನು ರಾಮ ಭಕ್ತೆ ಎಂದು ಹೇಳಿಕೊಂಡ ಅವರು, ಭಕ್ತಿಯಿಂದ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡದ್ದಾಗಿ ತಿಳಿಸಿದರು.
ಬಿಜೆಪಿ ನಾಯಕರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ, ಕಲ್ಯಾಣ್ ಸಿಂಗ್ ಕೂಡಾ ಹೇಳಿಕೆ ದಾಖಲಿಸಬೇಕಾಗಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ವಕೀಲರು ವಿಶೇಷ ಕೋರ್ಟ್ ನ್ಯಾಯಾಧೀಶರಿಗೆ ಅರಿಕೆ ಮಾಡಿಕೊಂಡಿದ್ದಾರೆ.