Advertisement

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

01:58 AM Nov 23, 2024 | Team Udayavani |

ಮಂಗಳೂರು: ತ್ರಿವಳಿ ತಲಾಖ್‌ ಹೇಳಿ ಪತ್ನಿಯನ್ನು ಮನೆಯಿಂದ ಹೊರಹಾಕಿದ ಘಟನೆ ಉಳ್ಳಾಲ ಸಮ್ಮರ್‌ ಸ್ಯಾಂಡ್‌ ಬಳಿ ನಡೆದಿದ್ದು, ಆರೋಪಿ ಮೊಹಮ್ಮದ್‌ ದಿಲ್ಫಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್‌ ದಿಲ್ಫಾಜ್‌ ವಿರುದ್ಧ ಪತ್ನಿ ಹೀನಾ ಫಾತಿಮಾ ಅವರು ಮಂಗಳೂರಿನ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

Advertisement

ದೂರಿನ ವಿವರ
“2019ರ ಎ.20ರಂದು ದಿಲ್ಫಾಜ್‌ ಪ್ರೀತಿಸಿ ಮದುವೆಯಾಗಿದ್ದು ಆತನಿಗೆ ಮದುವೆಯ ಸಮಯದಲ್ಲಿ ನನ್ನ ತಂದೆ 22 ಪವನ್‌ ಚಿನ್ನ ಹಾಕಿದ್ದರು. ಅಲ್ಲದೆ ವಾಚ್‌ ಖರೀದಿಸಲು ದಿಲ್ಫಾಜ್‌ 50 ಸಾ. ರೂ.ಗಳನ್ನು ಕೇಳಿ ಪಡೆದುಕೊಂಡಿದ್ದ. ಮದುವೆಯಾದ ಬಳಿಕ ನನ್ನ ಜತೆ ಸ್ವಲ್ಪ ಕಾಲ ಚೆನ್ನಾಗಿದ್ದ. ಬಳಿಕ ಅನ್ಯ ಮಹಿಳೆಯರ ಜತೆಯಲ್ಲಿ ಅನೈತಿಕ ಸಂಬಂಧ ಹೊಂದಲು ಪ್ರಾರಂಭಿಸಿದ್ದ.

ಈ ಬಗ್ಗೆ ಕೇಳಿದಾಗ ದೈಹಿಕ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದೇನೆ. ಈ ಬಗ್ಗೆ ಕುಟುಂಬದ ಹಿರಿಯರು ರಾಜಿ ಮಾತುಕತೆ ನಡೆಸಿ ದಿಲ್ಫಾಜ್‌ನಿಗೆ ಬುದ್ಧಿಮಾತು ಹೇಳಿದ್ದರು. ಆದರೂ ಆತ ತನ್ನ ಚಾಳಿಯನ್ನು ಮುಂದುವರಿಸಿದ್ದ. ನ. 8ರಂದು ನನ್ನ ತಂದೆ ದಿಲ್ಫಾಜ್‌ನಲ್ಲಿ ಈ ಬಗ್ಗೆ ವಿಚಾರಿಸಿದಾಗ ದಿಲ್ಫಾಜ್‌ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ.

ತಂದೆಯನ್ನು ಮನೆಗೆ ಬರಲು ಹೇಳಿ ತಂದೆಯ ಎದುರಿನಲ್ಲಿ 3 ಬಾರಿ ತಲಾಖ್‌ ಹೇಳಿ, ಇನ್ನು ಮುಂದಕ್ಕೆ ನೀನು ನನ್ನ ಹೆಂಡತಿಯಲ್ಲ ಎಂದು ಮನೆಯಿಂದ ಹೊರಗೆ ಹಾಕಿದ್ದಾನೆ. ದಿಲ್ಫಾಜ್‌ನ ತಂದೆ ಉಮರಬ್ಬ ಸರಿಯಾದ ವರದಕ್ಷಿಣೆ ಸಿಗಲಿಲ್ಲ ಎಂದು ಆಗಾಗ ಮಾನಸಿಕ ಕಿರುಕುಳ ನೀಡುತ್ತಿದ್ದರು. ನನ್ನ ಅಜ್ಜಿ ನನ್ನ ಹೆಸರಿನಲ್ಲಿ ಹೂಡಿಕೆ ಮಾಡಿ, ಅದು ಮೆಚೂರ್‌ ಆದ ಅನಂತರ ಬರುವ 8 ಲ.ರೂ.ಗಳನ್ನು ನೀಡಬೇಕೆಂದು ಕಿರುಕುಳ ನೀಡಿದ್ದಾರೆ’ ಎಂಬುದಾಗಿ ಹೀನಾ ನೀಡಿರುವ ದೂರಿನಂತೆ ಎಫ್ಐಆರ್‌ ದಾಖಲಾಗಿತ್ತು.

3 ಕಾಯಿದೆಗಳಡಿ ಪ್ರಕರಣ
ಆರೋಪಿ ವಿರುದ್ಧ ವರದಕ್ಷಿಣೆ ನಿಷೇಧ ಕಾಯಿದೆ ಮತ್ತು ಮುಸ್ಲಿಂ ಮಹಿಳೆಯರ(ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next