Advertisement

ಉಳ್ಳಾಲ: ಕೊಂಡಾಣ ಕ್ಷೇತ್ರ- ಭಂಡಾರ ಮನೆ ಕಟ್ಟಡ ಧ್ವಂಸ; ಮೂವರ ಸೆರೆ

06:00 PM Mar 04, 2024 | Team Udayavani |

ಉಳ್ಳಾಲ: ಇಲ್ಲಿನ ಕೋಟೆಕಾರು ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕೊಂಡಾಣ ಶ್ರೀ ಪಿಲಿಚಾಮುಂಡಿ ಬಂಟ, ವೈದ್ಯನಾಥ
ಪರಿವಾರ ದೈವಗಳ ಕ್ಷೇತ್ರಕ್ಕೆ ತಾಗಿಕೊಂಡು ನೂತನವಾಗಿ ನಿರ್ಮಿಸಿದ್ದ ಭಂಡಾರ ಮನೆಯನ್ನು ಜೆಸಿಬಿಯಿಂದ ರವಿವಾರ ನೆಲಸಮಗೊಳಿಸಿದ ಘಟನೆ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕೋಟೆಕಾರು ನಿವಾಸಿಗಳಾದ ಮುತ್ತಣ್ಣ ಶೆಟ್ಟಿ, ಧೀರಜ್‌ ಮತ್ತು ಶಿವರಾಜ್‌ ಬಂಧಿತರು. ತಾವೇ ಈ ಕೃತ್ಯವನ್ನು ಎಸಗಿದ್ದೇವೆ ಎಂದು
ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಕೋಟೆಕಾರು ಪ. ಪಂ. ಮುಖ್ಯಾಧಿಕಾರಿ ಆನಂದ್‌ ದೂರಿನಂತೆ ಮೂವರು ಆರೋಪಿಗಳ ವಿರುದ್ಧ ಉಳ್ಳಾಲ ಠಾಣೆ ಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಜರಾಯಿ ಇಲಾಖೆಗೆ ಒಳಪಡುವ ಈ ದೈವಸ್ಥಾನಕ್ಕೆ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ದಾನಿಗಳ ಸಹಕಾರದಿಂದ ನಿರ್ಗಮಿತ
ವ್ಯವಸ್ಥಾಪನ ಸಮಿತಿಯ ನೇತೃತ್ವದಲ್ಲಿ ನೂತನ ಭಂಡಾರ ಮನೆಯ ಕಟ್ಟಡದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿತ್ತು. ಎರಡು ದಿನಗಳ ಹಿಂದೆ ವ್ಯವಸ್ಥಾಪನ ಸಮಿತಿ ಅಧಿಕಾರವನ್ನು ಆಡಳಿತಾಧಿಕಾರಿಗೆ ಹಸ್ತಾಂತರಿಸಿದ್ದು, ಅಧಿಕಾರ ಹಸ್ತಾಂತರ ನಡೆದ ಎರಡೇ ದಿನಗಳಲ್ಲಿ ಈ ಘಟನೆ ನಡೆದಿದೆ.

ರವಿವಾರ ಬೆಳಗ್ಗೆ ಜೆಸಿಬಿಯನ್ನು ಸ್ಥಳಕ್ಕೆ ತಂದ ಅಪರಿಚಿತ ವ್ಯಕ್ತಿಗಳು ಕೆಲವೇ ನಿಮಿಷಗಳಲ್ಲಿ ನೂತನ ಭಂಡಾರ ಮನೆಯನ್ನು ನೆಲಸಮಗೊಳಿಸಿದರು ಎಂದು ಸ್ಥಳೀಯರು ದೂರಿದ್ದಾರೆ.

ಖಾಸಗಿ ಒಡೆತನದಲ್ಲಿ ಭಂಡಾರಮನೆ:

Advertisement

ಈ ಕ್ಷೇತ್ರದ ಹಿಂದಿನ ಭಂಡಾರಮನೆ ಖಾಸಗಿ ಗುತ್ತಿನಮನೆಯ ಒಡೆತನದಲ್ಲಿತ್ತು. ಅದರಲ್ಲಿ ಕ್ಷೇತ್ರದ ದೈವಗಳ ಬೆಲೆಬಾಳುವ ಒಡವೆಗಳಿದ್ದವು. ಭಂಡಾರ ಮನೆಯನ್ನೂ ಮುಜರಾಯಿ ಇಲಾಖೆಗೆ ಸೇರಿಸಲು ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್‌ ಪ್ರಯತ್ನಿಸಿದ್ದರು. ಇದಕ್ಕೆ ಗುತ್ತಿನ ಮನೆಯವರ ಸಮ್ಮತಿ ಇರಲಿಲ್ಲ. ಈ ವಿವಾದ ಕಳೆದ ಒಂದೂವರೆ ದಶಕಗಳಿಂದ ನಡೆಯುತ್ತಿದ್ದು, ಈ ಹಿಂದೆಯೂ ದೈವಸ್ಥಾನದಲ್ಲಿ ಎರಡು ಗುಂಪಿನ ನಡುವೆ ತಿಕ್ಕಾಟಗಳು ನಡೆದಿತ್ತು. ಮೂರು ತಿಂಗಳ ಹಿಂದೆ ದೈವಸ್ಥಾನದಲ್ಲಿ ಇಡಲಾಗಿದ್ದ ಪ್ರಶ್ನಾ ಚಿಂತನೆಯಲ್ಲಿ ಶ್ರೀ ಕ್ಷೇತ್ರಕ್ಕೆ ಬೇರೆಯೇ ಭಂಡಾರಮನೆ ನಿರ್ಮಿಸಬೇಕು ಎಂದು ಕಂಡುಬಂದಿತ್ತು. ಬಳಿಕ ಕ್ಷೇತ್ರದ ಪಕ್ಕದ ಜಮೀನನ್ನು ಖರೀದಿಸಿ ಅಲ್ಲಿ ನೂತನ ಭಂಡಾರ ಮನೆ ನಿರ್ಮಿಸಲು ಜನವರಿಯಲ್ಲಿ ಶಿಲಾನ್ಯಾಸ ಮಾಡಲಾಗಿತ್ತು. ದಾನಿಗಳ ದೇಣಿಗೆಯಿಂದ ಭಂಡಾರ ಮನೆ ಬಹುತೇಕ ಪೂರ್ಣಗೊಂಡಿತ್ತು.

ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್‌ ಎರಡು ದಿನಗಳ ಹಿಂದಷ್ಟೇ ಆಡಳಿತವನ್ನು ಮುಜರಾಯಿ
ಇಲಾಖೆಗೆ ಹಸ್ತಾಂತರಿಸಿದ್ದರು. ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ ನಿರ್ಮಾಣ ಹಂತದಲ್ಲಿದ್ದ ಭಂಡಾರ ಮನೆಯನ್ನು ನೆಲಸಮಗೊಳಿಸಲಾಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಆರೋಪಿಗಳ ವಿರುದ್ಧ ಅಕ್ರಮ ಕೂಟ ರಚನೆ, ಮಾರಕಾಸ್ತ್ರ ಬಳಸಿ ದಾಂಧಲೆ ಸೃಷ್ಟಿ, ಧಾರ್ಮಿಕ ಸ್ಥಳ ಧ್ವಂಸಗೊಳಿಸಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವುದು, ಸೊತ್ತು ನಾಶ ಸಂಬಂಧ ವಿವಿಧ ಸೆಕ್ಷನ್‌ಗಳಡಿ ಹಾಗೂ ಕರ್ನಾಟಕ ಸ್ವತ್ತು ನಾಶ ಮತ್ತು ಆಸ್ತಿ ಹಾನಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್‌ ಪುಟ್ಟರಾಜು, ಕೋಟೆಕಾರು ಪ. ಪಂ. ಮುಖ್ಯಾಧಿಕಾರಿ ಆನಂದ್‌, ಸಹಾಯಕ ಪೊಲೀಸ್‌ ಕಮಿಷನರ್‌ ಧನ್ಯಾ ನಾಯಕ್‌, ಉಳ್ಳಾಲ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಎಚ್‌.ಎನ್‌. ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ಮತ್ತು ಭಕ್ತರು ಘಟನಾ ಸ್ಥಳದಲ್ಲಿ ಸೇರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನೂತನ ಭಂಡಾರ ಮನೆ ನಿರ್ಮಿಸಲಿ: ನೂತನ ಭಂಡಾರ ಮನೆಯ ಕಟ್ಟಡವನ್ನು ಕೆಡವಿರುವ ಪ್ರದೇಶದಲ್ಲೇ ಮತ್ತೆ ನೂತನ ಭಂಡಾರದ ಮನೆಯನ್ನು ನಿರ್ಮಿಸಬೇಕು. ಯಾರು ಈ ಭಂಡಾರ ಮನೆಯನ್ನು ಕೆಡವಿದ್ದಾರೊ, ಅವರಿಂದಲೇ ಅದರ ವೆಚ್ಚ ಭರಿಸಬೇಕು. ಖಾಸಗಿ ಒಡೆತನದಲ್ಲಿರುವ ಭಂಡಾರ ಮನೆಯಲ್ಲಿ ಇಟ್ಟಿರುವ ದೈವಗಳ ಕೋಟ್ಯಂತರ ರೂ. ಬೆಲೆ ಬಾಳುವ ಒಡವೆಗಳನ್ನು ಲಾಕರ್‌ನಲ್ಲಿ ಭದ್ರವಾಗಿ ಇಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಯು.ಟಿ. ಖಾದರ್‌ ಖೇದ :

ಕೊಂಡಾಣ ಕ್ಷೇತ್ರದ ಭಂಡಾರ ಮನೆಯ ನೂತನ ಕಟ್ಟಡ ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಶಾಸಕರೂ ಆಗಿರುವ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಖೇದ ವ್ಯಕ್ತ ಪಡಿಸಿದ್ದಾರೆ. “ಈ ಘಟನೆಯು ಇಡೀ ಜಿಲ್ಲೆಗೆ ಕಪ್ಪು ಚುಕ್ಕೆ. ಇದು ಅತ್ಯಂತ ನೋವಿನ ವಿಚಾರ. ಈ ಘಟನೆಯ ಕುರಿತಾಗಿ ಯಾವುದೇ ರೀತಿಯ ಧಾರ್ಮಿಕ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದ್ದೇನೆ’ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅಕ್ರಮವಾಗಿ ನಿರ್ಮಾಣ
ಈ ದೈವಸ್ಥಾನಕ್ಕೆ 16 ಗುರಿಕಾರರು ಇದ್ದಾರೆ. ಹೊಸ ಭಂಡಾರ ಮನೆ ನಿರ್ಮಿಸುವ ಬಗ್ಗೆ ಎಲ್ಲ ಗುರಿಕಾರರ ಸಮ್ಮತಿ ಇರಲಿಲ್ಲ. ಅವರ ಒಪ್ಪಿಗೆ ಇಲ್ಲದೆಯೇ ಹೊಸ ಭಂಡಾರದ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಈ ಬಗ್ಗೆ ತಹಶೀಲ್ದಾರ್‌ ಹಾಗೂ ಉಪವಿಭಾಗಾಧಿಕಾರಿಗೆ ದೂರು ನೀಡಿದ್ದರೂ ಕ್ರಮಕೈಗೊಂಡಿರಲಿಲ್ಲ. ಹಾಗಾಗಿ ಭಂಡಾರ ಮನೆಯನ್ನು ಒಡೆದುಹಾಕಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next