Advertisement

ಉಳ್ಳಾಲ: ಗುಂಡು ಹಾರಾಟ ಪ್ರಕರಣ: ಹಲವರ ಬಂಧನ

11:56 AM Sep 23, 2019 | Naveen |

ಉಳ್ಳಾಲ: ಉಳ್ಳಾಲದ ಮುಕ್ಕಚ್ಚೇರಿ ಸಮೀಪದ ಕಡಪರ ಎಂಬಲ್ಲಿ ರವಿವಾರ ತಡರಾತ್ರಿ ಎರಡು ತಂಡಗಳ ನಡುವಿನ ಹೊಡೆದಾಟ ಹಾಗೂ ಗುಂಡು ಹಾರಾಟ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

Advertisement

ವಾಟ್ಸ್ ಆ್ಯಪ್‌ನಲ್ಲಿ ಹರಡಿದ ಸಂದೇಶದ ವಿಚಾರವಾಗಿ ಸುಹೈಲ್ ಕಂದಕ್ ಮತ್ತು ಕಡಪರ ನಿವಾಸಿ ಸಲ್ಮಾನ್ ಎಂಬವರ ತಂಡಗಳ ನಡುವೆ ಈ ಹೊಡೆದಾಟ ನಡೆದಿದ್ದು, ಘಟನೆಯಲ್ಲಿ ಸುಹೈಲ್ ಕಂದಕ್ ಹಾಗೂ ಕಡಪರ ನಿವಾಸಿ ಇರ್ಶಾದ್(20) ಎಂಬವರು ಗಾಯಗೊಂಡಿದ್ದಾರೆ.

ಆರಂಭದಲ್ಲಿ ವಾಟ್ಸ್ ಆ್ಯಪ್ ಸಂದೇಶದ ವಿಚಾರವಾಗಿ ಸುಹೈಲ್ ಕಂದಕ್ ಮತ್ತು ಸಲ್ಮಾನ್ ನಡುವೆ ಮೊಬೈಲ್ ಫೋನ್ ಮೂಲಕ ಮಾತಿನ ಚಕಮಕಿ ನಡೆದಿದೆ. ಇದು ತಾರಕಕ್ಕೇರಿದ್ದು, ಅತ್ತಾವರ ನಿವಾಸಿಯಾಗಿರುವ ಸುಹೈಲ್ ಕಂದಕ್ ಮತ್ತು ತಂಡ ರಾತ್ರಿ 11:30 ರ ಸುಮಾರಿಗೆ ಕಡಪರಕ್ಕೆ ತೆರಳಿದ್ದು, ಅಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವೇಳೆ ಸುಹೈಲ್ ಕಂದಕ್ ಗುಂಡು ಹಾರಾಟ ನಡೆಸಿದ್ದು, ಇದರಿಂದ ಇರ್ಶಾದ್ ಕಾಲಿಗೆ ಗಾಯಗಳಾಗಿವೆ. ಇದೇವೇಳೆ ಸಲ್ಮಾನ್ ಮತ್ತು ತಂಡ ಸುಹೈಲ್ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದೆ. ಇದರಿಂದ ಅವರು ಕೂಡಾ ಗಾಯಗೊಂಡಿದ್ದಾರೆ. ಶೂಟೌಟ್ ನಡೆಸಿದ ಆಯುಧವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿ, ದೂರು, ಪ್ರತಿದೂರುಗಳು ದಾಖಲಾಗಿವೆ. ಇರ್ಶಾದ್ ನೀಡಿರುವ ದೂರಿನನ್ವಯ ಬಶೀರ್, ಸುಹೈಲ್ ಕಂದಕ್ ಮತ್ತು ತಂಡದ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಹಲವರನ್ನು ಬಂಧಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಸುಹೈಲ್ ಕಂದಕ್ ನೀಡಿರುವ ದೂರಿನ್ವಯ ಸಲ್ಮಾನ್ ಮತ್ತು 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಹಲವರನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next