Advertisement

ಉಳ್ಳಾಲ: ಕಡಲಬ್ಬರಕ್ಕೆ ಸಿಲುಕಿವೆ 80ಕ್ಕೂ ಹೆಚ್ಚು ಮನೆಗಳು

06:00 AM Apr 23, 2018 | Team Udayavani |

ಉಳ್ಳಾಲ: ಮಳೆಗಾಲದಲ್ಲಿ ಸಮುದ್ರ ಬಿರುಸು ಸಾಮಾನ್ಯ. ಆದರೆ ಈಗಲೇ ಕಡಲು ಅಬ್ಬರಿಸಲಾರಂಭಿಸಿದ್ದು, ಉಳ್ಳಾಲ ಪರಿಸರದ 80ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗುತ್ತಿದೆ. ಓಖೀ ಚಂಡಮಾರುತದ ಸಂದರ್ಭದಲ್ಲೂ ಈ ಪ್ರಮಾಣದಲ್ಲಿ ನೀರು ಮೇಲಕ್ಕೆ ಬಂದಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಉಳ್ಳಾಲ, ಉಚ್ಚಿಲ ಪ್ರದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಮುದ್ರ ಈ ರೀತಿ ಕಡಲು ಪ್ರಕ್ಷಬ್ಧಗೊಂಡಿದ್ದು ತೀರದ ಜನರು ಭಯಭೀತರಾಗಿದ್ದಾರೆ. ಉಚ್ಚಿಲದಲ್ಲಿ ಮೂರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

Advertisement

ಉಳ್ಳಾಲದಲ್ಲಿ ಕಳೆದೆರಡು ದಿನಗಳಿಂದ ಸಮುದ್ರ ಅಲ್ಪ ಪ್ರಮಾಣದಲ್ಲಿ ಬಿರುಸುಗೊಂಡಿತ್ತು. ಆದರೆ ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಏರಿಕೆ ಕಂಡು ಬಂದಿದ್ದು 12 ಗಂಟೆಗೆ ಅಲೆ ಅಪ್ಪಳಿಸಿ ಪ್ರವಾಹದಂತೆ ಮನೆಗಳಿಗೆ ನುಗ್ಗಿತ್ತು. ಉಚ್ಚಿಲ ಮತ್ತು ಉಳ್ಳಾಲ ತೀರದಲ್ಲಿ ನೀರಿನ ಪ್ರಮಾಣ ಹಿಂದೆಂದಿಗಿಂತಲೂ ಹೆಚ್ಚಾಗಿತ್ತು. ಅಪಾಯದಲ್ಲಿದ್ದ ಬೀಚ್‌ ರೋಡ್‌ನ‌ ಮನೋಹರ್‌ ಉಚ್ಚಿಲ್‌, ರಾಮಚಂದ್ರ, ಸುಧೀರ್‌ ಕುಟುಂಬವನ್ನು ಸ್ಥಳಾಂತರಿಸಲಾಗಿದೆ.

ಉಚ್ಚಿಲದಲ್ಲಿ 50ಕ್ಕೂ ಹೆಚ್ಚು ಮನೆ ಜಲಾವೃತ ಸೋಮೇಶ್ವರ ಉಚ್ಚಿಲದಲ್ಲಿ ಪೆರಿಬೈಲ್‌, ಬಟ್ಟಪ್ಪಾಡಿ, ನ್ಯೂ ಉಚ್ಚಿಲ ಪ್ರದೇಶದಲ್ಲಿ ಸುಮಾರು 50ಕ್ಕು ಅಧಿಕ ಮನೆಗಳು ಜಲಾವೃತಗೊಂಡಿವೆ. ಉಚ್ಚಿಲ ಬೀಚ್‌ ರಸ್ತೆಯ ವರೆಗೆ ನೀರು ಬಂದು ಜನರು ಭಯಭೀತರಾದರು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬಂದಿಗಳು, ಪೊಲೀಸರು ಆಗಮಿಸಿದ್ದು, ರಾತ್ರಿಯೂ ಬೀಡುಬಿಟ್ಟಿದ್ದಾರೆ.

ಉಳ್ಳಾಲದ ಮೊಗವೀರಪಟ್ಣ, ಕೈಕೋ, ಸೀ ಗ್ರೌಂಡ್‌, ಮುಕ್ಕಚ್ಚೇರಿಯಲ್ಲಿ 20ಕ್ಕೂ ಅಧಿಕ ಮನೆ ಗಳಿಗೆ ನೀರು ಹರಿದಿದೆ. ಉಳ್ಳಾಲ ಕೋಟೆಪುರ ದಲ್ಲಿ ಮೀನಿನ ತೈಲ ಸಂಸ್ಕರಣಾ ಘಟಕದ ಬಳಿ ಸಮುದ್ರದ ಅಲೆಗಳು ಹೆಚ್ಚಾಗಿ ರಸ್ತೆ ಸಂಪೂರ್ಣ ನೀರು ತುಂಬಿದೆ. ರವಿವಾರ ಪ್ರವಾಸಿಗರು ಹೆಚ್ಚಾಗಿರುವುದರಿಂದ ಸ್ಥಳೀಯ ಶಿವಾಜಿ ಜೀವರಕ್ಷಕ ಸಂಘ, ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು, ಕರಾವಳಿ ನಿಯಂತ್ರಣ ದಳದ ಸಿಬಂದಿ ಪ್ರವಾಸಿಗರು ಸಮುದ್ರದ ಬಳಿಗೆ ತೆರಳದಂತೆ ನಿಯಂತ್ರಿಸಿದರು.

ಮೀನುಗಾರರು ವಾಪಸ್‌
ಉಳ್ಳಾಲ ಪ್ರದೇಶದಿಂದ ಮೀನುಗಾರಿಕೆಗೆ ತೆರಳಿದ್ದ ಹಲವಾರು ಪರ್ಸಿನ್‌ ಬೋಟ್‌ಗಳು ವಾಪಸ್‌ ಆಗಿವೆ. 

Advertisement

ಮಲ್ಪೆ: ಸಮುದ್ರದ ಪಕ್ಷುಬ್ದಗೊಂಡಿರುವ ಹಿನ್ನೆಲೆಯಲ್ಲಿ ರವಿವಾರ ಮಧ್ಯಾಹ್ನದಿಂದ ಭಾರಿ ಗಾತ್ರದ ಅಲೆಗಳು ಏಳುತ್ತಿದ್ದು ಕರಾವಳಿ ತೀರದ ಕೆಲವಡೆ ಸಮುದ್ರದ ನೀರು ರಸ್ತೆಗೆ ಅಪ್ಪಳಿಸಲಾರಂಭಿಸಿದೆ. ಉದ್ಯಾವರ ಮಟ್ಟು ಕೊಪ್ಲ, ಕನಕೋಡ ಭಾಗದಲ್ಲಿ ಸಮುದ್ರದ ನೀರು ರಸ್ತೆಯನ್ನು ದಾಟಿ ಮೇಲೆ ಬರುತ್ತಿವೆ. ಸಮುದ್ರತಟದಲ್ಲಿ ನಿಲ್ಲಿಸಲಾಗಿದ್ದ ಸಣ್ಣ ದೋಣಿಗಳನ್ನು ಮೀನುಗಾರರು  ಮೇಲೆ ಎಳೆದು ಇಡುತ್ತಿದ್ದಾರೆ. ಯಾವುದೇ ಹಾನಿ ಸಂಭವಿಸಿಲ್ಲ.

ಉಳ್ಳಾಲದಲ್ಲಿ ಅಕಾಲಿಕವಾಗಿ ಸಮುದ್ರದ ನೀರು ನುಗ್ಗಿದ್ದರಿಂದ ಉಳ್ಳಾಲದ ಜನರು ಆತಂಕಕ್ಕೀಡಾಗಿದ್ದಾರೆ. ಕಡಲ್ಕೊರೆತಕ್ಕೆ ಸಂಬಂಧಿಸಿದ ಕಾಮಗಾರಿ ನಡೆದರೂ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸಿದ್ದು, ಈ ಪ್ರದೇಶದಲ್ಲಿ ಹಾಕಿರುವ ಎರಡು ರೀಫ್‌ಗಳ ನಡುವೆ ಸುಮಾರು 1,070 ಮೀಟರ್‌ ಅಂತರ ಮತ್ತು ಅವೈಜ್ಞಾನಿಕ ಬಮ್ಸ್‌ì ರಚನೆಯಿಂದ ಸಮಸ್ಯೆಯಾಗಿದ್ದು, ಮೊಗವೀರಪಟ್ಣದ ನಿವಾಸಿಗಳು ಮುಂದಿನ ಮಳೆಗಾಲದಲ್ಲಿ ಕಡಲ್ಕೊರೆತ ಇನ್ನಷ್ಟು ಹೆಚ್ಚಾಗುವ ಭಯಭೀತಿಯಲ್ಲಿದ್ದಾರೆ.
ಭರತ್‌ ಕುಮಾರ್‌ ಉಳ್ಳಾಲ ಅಧ್ಯಕ್ಷ ಉಳ್ಳಾಲ ಮೊಗವೀರ ಸಂಘ

ಕಡಲ್ಕೊರೆತ ತಡೆಗೆ ಶಾಶ್ವತ ಕಾಮಗಾರಿ ಪ್ರಾರಂಭಗೊಂಡಿಲ್ಲ. ಮುಂದಿನ ಮಳೆಗಾಲ ಸಂದರ್ಭ ಇನ್ನಷ್ಟು ಮನೆಗಳನ್ನು ಕಳೆದುಕೊಳ್ಳವ ಭಯದಲ್ಲಿ ಉಚ್ಚಿಲದ ಜನರಿದ್ದಾರೆ.
ಚಂದ್ರ ಉಚ್ಚಿಲ, ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next