ಉಳ್ಳಾಲ: ಗಾಂಜಾ ಮಾಫಿಯಾ ವಿರುದ್ಧ ಹೋರಾಡಿದ ಮುಕ್ಕಚ್ಚೇರಿಯ ಜುಬೈರ್ ಹತ್ಯೆಯಾಗಿದ್ದು, ಜನಪ್ರತಿನಿಧಿಗಳ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಪೊಲೀಸರು ವೈಯಕ್ತಿಕಕಾರಣವೆಂದು ಜುಬೈರ್ ಪ್ರಕರಣದ ಹಾದಿಯನ್ನೇ ತಪ್ಪಿಸುತ್ತಿದ್ದಾರೆ ಎಂದು ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅಭಿಪ್ರಾಯಪಟ್ಟರು.
ಡಿವೈಎಫ್‌ಐ ಉಳ್ಳಾಲ ವಲಯ ಸಮಿತಿ ವತಿಯಿಂದ ಜುಬೈರ್ ಕುಟುಂಬಕ್ಕೆ ಗರಿಷ್ಟ ಪರಿಹಾರಕ್ಕೆ ಆಗ್ರಹಿಸಿ, ಗಾಂಜಾ ಮಾರಾಟ ಜಾಲದ ವಿರುದ್ಧ ಮುಕ್ಕಚ್ಚೇರಿ ಜಂಕ್ಷನ್‌ನಿಂದ ಉಳ್ಳಾಲ ನಗರದ ಮೈದಾನದವರೆಗೆ ಹಮ್ಮಿಕೊಂಡ ಪ್ರತಿರೋಧ ಮೆರವಣಿಗೆಯಲ್ಲಿ ಭಾಗವಹಿಸಿ, ಮಾತನಾಡಿದರು. ಸಂಸದ ನಳಿನ್ ಕಟೀಲ್ ಅವರು ಚುನಾವಣೆ ಉದ್ದೇಶವನ್ನು ಮುಂದಿಟ್ಟುಕೊಂಡು ಜುಬೈರ್ ಮನೆಗೆ ಭೇಟಿ ನೀಡಿದ್ದಾರೆ. ಮೊದಲು ದಕ್ಷ ಅಧಿಕಾರಿಯನ್ನು
ನೇಮಿಸುವ ಕೆಲಸ ಮಾಡುವ ಮೂಲಕ ಜನಪ್ರತಿನಿಧಿಯ ಜವಾಬ್ದಾರಿಯನ್ನು ಇಲ್ಲಿನ ಶಾಸಕ ಯು.ಟಿ.ಖಾದರ್ ಮಾಡಲಿ ಎಂದರು.
ಡಿವೈಎಫ್‌ಐ ಉಳ್ಳಾಲ ವಲಯ ಅಧ್ಯಕ್ಷ ಜೀವನರಾಜ್ ಕುತ್ತಾರ್ ಮಾತನಾಡಿ, ಜುಬೈರ್ ಕುಟುಂಬಕ್ಕೆ ಗರಿಷ್ಠ 25 ಲಕ್ಷ ರೂ. ಪರಿಹಾರ ಮತ್ತು ಆರು ಮಂದಿ ಮಕ್ಕಳ ವಿದ್ಯಾಭ್ಯಾಸ ಸರಕಾರ ನೀಡಬೇಕು. ಗಾಂಜಾ ಮಾಫಿಯಾ ಉಳ್ಳಾಲ ಭಾಗದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ ಅನ್ನುವುದಕ್ಕೆ ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಮೃತಪಟ್ಟವನ ಸ್ಕೂಟರ್‌ನಲ್ಲಿ ಗಾಂಜಾ ಸಿಕ್ಕಿರುವುದು ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷ ಸಭೆ ನಡೆಸಿ ಗಾಂಜಾ ಮುಕ್ತ ಗೊಳಿಸಲು ಚರ್ಚಿಸಬೇಕಿದೆ ಎಂದರು. ಈ ವೇಳೆ ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೊಷ್ ಬಜಾಲ್, ಕಾರ್ಯದರ್ಶಿ ರಝಾಕ್ ಮೊಂಟೆಪದವು, ಸಮುದಾಯ ಸಂಘಟನೆಯ ಮುಖಂಡ ವಾಸುದೇವ ಉಚ್ಚಿಲ್, ಕಾರ್ಮಿಕ ಮುಖಂಡರಾದ ಪದ್ಮಾವತಿ ಶೆಟ್ಟಿ, ಜುಬೈರ್ ಸಹೋದರರಾದ ಆಸೀಫ್, ಪುತ್ರ ನಿಹಾಲ್, ಸಾಲಿ ಪಾವೂರು, ಸಂತೋಷ್ ಪಿಲಾರ್, ಜತೆ ಕಾರ್ಯದರ್ಶಿ ಅಶ್ರಫ್ ಕೆ., ಸುಹೈಲ್ ಅಳೇಕಲ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುನಿಲ್ ತೇವುಲ ನಿರೂಪಿಸಿದರು. ನಿತಿನ್ ಕುತ್ತಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ರಫೀಕ್ ಹರೇಕಳ ವಂದಿಸಿದರು.