ಉಳ್ಳಾಲ: ರಾ.ಹೆ 66ರ ತೊಕ್ಕೊಟ್ಟು ಕಲ್ಲಾಪುವಿನಲ್ಲಿ ರವಿವಾರ ತಡರಾತ್ರಿ ಐದು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿ ಹಲವರು ಗಾಯಗೊಂಡಿದ್ದಾರೆ.
ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಇನ್ನೋವಾ ಕಾರು ವಾಹನವೊಂದನ್ನು ಓವರ್‌ಟೇಕ್ ಮಾಡಲು ಏಕಾಏಕಿ ಎಡಭಾಗಕ್ಕೆ ತಿರುಗಿಸಿದ ಪರಿಣಾಮ ಹಿಂಬದಿಯಲ್ಲಿದ್ದ ಐ20 ಕಾರು ಹಠಾತ್ತನೆ ಬ್ರೇಕ್ ಹಾಕಿದ್ದರಿಂದ ಕಾರು ಒಂದು ಸುತ್ತು ತಿರುಗಿ ಅದೇ ರಸ್ತೆಯಲ್ಲಿ ಬರುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಮಹಿಳೆಯರು, ಮಕ್ಕಳು ಸಹಿತ ಕುಟುಂಬವಿದ್ದ ಐ10 ಕಾರಿಗೆ ಢಿಕ್ಕಿ ಹೊಡೆದಿದೆ.
ಅನಂತರ ರಸ್ತೆ ಬದಿಯಲ್ಲಿ ನಿಂತಿದ್ದ ಸ್ವಿಫ್ಟ್ ಕಾರಿಗೂ ಢಿಕ್ಕಿ ಹೊಡೆದಿದ್ದು ಈ ಸರಣಿ ಅಪಘಾತದಲ್ಲಿ ಸ್ಕೂಟರ್ ಸವಾರ ಕಾಸರಗೋಡು ನಿವಾಸಿ ತರುಣ್ ಗಾಯಗೊಂಡಿದ್ದಾರೆ. ಅಪಘಾತ ನಡೆಸಿದ ಐ20 ಕಾರಿನಲ್ಲಿದ್ದ ಅಲೋಶಿಯಸ್ ಕಾಲೇಜು ವಿದ್ಯಾರ್ಥಿ ಅಮೃತ್ ಕೂಡ ಗಾಯಗೊಂಡಿದ್ದಾರೆ.
ಇನ್ನೊಂದು ಕಾರಿನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳಿಗೂ ಗಾಯಗಳಾಗಿವೆ. ಘಟನ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಗಾಯಾಳುಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸರಣಿ ಅಪಘಾತಕ್ಕೆ ಕಾರಣವಾದ ಇನ್ನೋವಾ ಕಾರು ಪರಾರಿಯಾಗಿದೆ.
ಇನ್ನೋವಾ ಮತ್ತು ವಿದ್ಯಾರ್ಥಿಗಳಿದ್ದ ಕಾರು ಅತೀ ವೇಗದ ಚಾಲನೆಯೇ ಸರಣಿ ಅಪಘಾತಕ್ಕೆ ಕಾರಣವಾಗಿದೆ.