ಕಾಪು : ಶೇಂದಿ ತೆಗೆಯಲು ಮರ ಹತ್ತಿದ್ದಾಗ ತೆಂಗಿನ ಮರದಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಜೂ. 21 ರಂದು ನಡೆದಿದೆ.
ಉಳಿಯಾರಗೋಳಿ ಗ್ರಾಮದ ತಾಳಿ ತೊಟ ನಿವಾಸಿ ವಿನೋದರ ಎ. ಸನಿಲ್ (55) ಮೃತ ವ್ಯಕ್ತಿ.
ಸಾಂಪ್ರಧಾಯಿಕ ಶೈಲಿಯ ಶೇಂದಿ ತೆಗೆಯುವ ಕೆಲಸ ಮಾಡುತ್ತಿದ್ದ ವಿನೋಧರ ಸನಿಲ್ ಅವರು ಜೂ. 4 ರಂದು ತೆಂಗಿನ ಮರದಿಂದ ಶೇಂದಿ ತೆಗೆಯಲು ತೆಂಗಿನ ಮರಕ್ಕೆ ಹತ್ತಿದ್ದು, ತೆಂಗಿನ ಕೊಂಬನ್ನು ಕತ್ತಿಯಿಂದ ತುಂಡು ಮಾಡುವಾಗ ಆಕಸ್ಮಿಕವಾಗಿ ಅವರ ಎಡಕೈ ಮಣಿಗಂಟಿಗೆ ತಾಗಿ ರಕ್ತ ಗಾಯವಾಗಿ ಮರದಿಂದ ಕೆಳಗೆ ಬಿದ್ದಿದ್ದರು. ಅವರ ಮಗ ಮತ್ತು ಇತರರು ಸೇರಿಕೊಂಡು ಅವರನ್ನು ಚಿಕಿತ್ಸೆಗಾಗಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಮ್.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಕೈಗೆ ಜೂ. 11ರಂದು ಶಸ್ತ್ರ ಚಿಕಿತ್ಸೆ ನಡೆಸಿದ್ದು ನಂತರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಜೂ. 18ರಂದು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಜೂ. 21ರಂದು ಮುಂಜಾನೆ 2.45ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮೃತರ ಮಗ ನಿತಿನ್ ನೀಡಿರುವ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಕಳೆದ 25 ವರ್ಷಗಳಿಂದ ಸಾಂಪ್ರಧಾಯಿಕ ಶೈಲಿಯಲ್ಲಿ ಶೇಂದಿ ತೆಗೆಯುವ ಕಾಯಕ ಮಾಡುತ್ತಿದ್ದ ಅವರು ಕೃಷಿ ಕಾಯಕ ನಡೆಸುತ್ತಿದ್ದರು.