ವಿಜಯಪುರ : ಯುದ್ಧಪೀಡಿತ ಉಕ್ರೇನಿನಿಂದ ವೈದ್ಯಕೀಯ ವಿದ್ಯಾಭ್ಯಾಸ ಮೊಟಕುಗೊಳಿಸಿ ಸ್ವದೇಶಕ್ಕೆ ಆಗಮಿಸಿರುವ ವಿದ್ಯಾರ್ಥಿಗಳ ನೆರವಿಗೆ ಮುಂದಾಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ತಾವು ಅಧ್ಯಕ್ಷರಾಗಿರುವ ಬಿಎಲ್ ಡಿಇ ಸಂಸ್ಥೆಯ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮುಂದುವರೆಸಲು ವ್ಯವಸ್ಥೆ ಕಲ್ಪಿಸಿದ್ದಾರೆ.
ಉಕ್ರೇನಿನಿಂದ ಮರಳಿ ಬದುಕು ಮಂಕಾಗುವ ಆತಂಕದಲ್ಲಿರುವ 17 ವೈದ್ಯ ವಿದ್ಯಾರ್ಥಿಗಳು ಗುರುವಾರ ನಗರದಲ್ಲಿ ಪಾಟೀಲ್ ಅವರನ್ನು ಭೇಟಿ ಮಾಡಿದರು. ತಮ್ಮ ಮುಂದಿನ ಶಿಕ್ಷಣದ ಕುರಿತು ತಮ್ಮ ಪಾಲಕರೊಂದಿಗೆ ಆತಂಕ ತೋಡಿಕೊಂಡಿದ್ದರು.ಅಲ್ಲದೇ ತಮ್ಮ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಬಿಎಲ್ ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ಎಂ.ಬಿ.ಪಾಟೀಲ್ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ್ದಾರೆ.
ಉಕ್ರೇನ್‍ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳ ನೆರವಿಗೆ ಧಾವಿಸುದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭರವಸೆ ನೀಡಿದ್ದರೂ ಈ ವರೆಗೆ ಸ್ಪಷ್ಟ ನೀತಿ ಜಾರಿಗೆ ತಂದಿಲ್ಲ. ಇದರಿಂದಾಗಿ ತಮ್ಮ ಶೈಕ್ಷಣಿಕ ಜೀವನ ಗೊಂದಲಕ್ಕಿಡಾಗಿದ್ದು, ಶೈಕ್ಷಣಿಕವಾಗಿ ಅತಂತ್ರವಾಗಿದ್ದು, ಮನೆಯಲ್ಲೇ ಖಾಲಿ ಕುಳಿತುಕೊಳ್ಳುವುದು ಬೇಡ. ಇಂದಿನಿಂದಲೇ 17 ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಲು ವ್ಯವಸ್ಥೆ ಮಾಡಿದ್ದಾರೆ.
ಇದಲ್ಲದೇ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಚೀನಾದಲ್ಲಿ ಶೀಕ್ಷಣ ಪಡೆಯುತ್ತಿದ್ದ 5 ವಿದ್ಯಾರ್ಥಿಗಳಿಗೂ ಕೂಡ ಪ್ರತ್ಯೇಕ ಕ್ಲಾಸ್ ನೀಡಲು ಸೂಚಿಸಿದ್ದಾರೆ. ಆಸ್ಪತ್ರೆಯಲ್ಲಿ ಎಲ್ಲ ಬೋಧನೆಗಳು ಮತ್ತು ತರಬೇತಿ ನೀಡುವ ಜೊತೆಗೆ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಿದ್ದಾರೆ.
ಈ ಕುರಿತು ಬಿ.ಎಲ್.ಡಿ.ಇ ಸಂಸ್ಥೆಯ ಡೀಮ್ಡ್ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಆರ್.ಎಸ್.ಮುಧೋಳ, ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ್, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಗಮನ ಹರಿಸಲು ವಿಶೇಷ ಉಪನ್ಯಾಸಕರನ್ನು ನಿಯೋಜಿಸಿದ್ದಾರೆ.
ಉಕ್ರೇನ್‍ನಿಂದ ಆಗಮಿಸಿರುವ ವಿದ್ಯಾರ್ಥಿಗಳಲ್ಲಿ ಎಂಬಿಬಿಎಸ್ ಪ್ರಥಮ ವರ್ಷದ 8, ದ್ವಿತೀಯ ವರ್ಷದ 7 ಮತ್ತು ತೃತೀಯ ವರ್ಷದ 2 ವಿದ್ಯಾರ್ಥಿಗಳು ಹಾಗೂ ಚೀನಾದಿಂದ ಮರಳಿರುವ ದ್ವಿತೀಯ ವರ್ಷದ 3, ತೃತೀಯ ವರ್ಷದ 2 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಹೆಸರು ನೋಂದಾಯಿಸಿದ್ದು, ಇಂದಿನಿಂದಲೇ ಅವರು ತರಗತಿಗೆ ಹಾಜರಾಗಿದ್ದಾರೆ.
ಉಕ್ರೇನ್‍ನಿಂದ ಆಗಮಿಸಿರುವ ವೈದ್ಯಕೀಯ ವಿದ್ಯಾರ್ಥಿ ಅಮನ್ ಮಮದಾಪುರ ಅವರ ತಂದೆ ಧರ್ಮರಾಯ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಸಂಕಷ್ಟಕ್ಕೆ ಸಿಲುಕಿದ್ದ ನಮ್ಮ ಮಕ್ಕಳ ಶೈಕ್ಷಣಿಕ ಬದುಕಿಗೆ ಎಂ.ಬಿ.ಪಾಟೀಲ್ ಅವರು ಆಪದ್ಭಾಂಧವರಂತೆ ನೆರವಾಗಿದ್ದಾರೆ. ಅವರ ಮಾನವೀಯ ಕಾಳಜಿಗೆ ಕೃತಜ್ಞರಾಗಿದ್ದೇವೆ. ಅಲ್ಲದೇ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು, ನಮ್ಮ ಮಕ್ಕಳ ಎಂಬಿಬಿಎಸ್ ಶಿಕ್ಷಣದ ಬಗ್ಗೆ ಇತರೆ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸುತ್ತೇವೆ ಎಂದರು.