ಕೀವ್: ಉಕ್ರೇನ್‌ನಲ್ಲಿ ರಷ್ಯಾ ಪಡೆಗಳ ಅಟ್ಟಹಾಸ ಮುಂದುವರಿದಿರುವಂತೆಯೇ, ಉಕ್ರೇನ್‌ಗೆ ಈ ಯುದ್ಧದಲ್ಲಿ ಪರೋಕ್ಷವಾಗಿ ಸಹಾಯ ಮಾಡಲು ಅಮೆರಿಕ ಮುಂದಾಗಿದೆ.
ಅದರಂತೆ ಉಕ್ರೇನ್‌ಗೆ ಇನ್ನಷ್ಟು ಸಮರವಿಮಾನಗಳನ್ನು ಪೂರೈಸುವ ನಿಟ್ಟಿನಲ್ಲಿ ಪೋಲೆಂಡ್ ಜತೆ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಸಿದ್ಧತೆ ನಡೆಸಿದೆ.
ಅದರಂತೆ ಪೋಲೆಂಡ್ ಸರಕಾರವು ಉಕ್ರೇನ್‌ಗೆ ಮಿಗ್-29 ಹಾಗೂ ಎಸ್‌ಯು-25 ಯುದ್ಧ ವಿಮಾನಗಳನ್ನು ಪೂರೈಸಲಿದೆ. ಅದಕ್ಕೆ ಪ್ರತಿಯಾಗಿ ಪೋಲೆಂಡ್‌ಗೆ ಅಮೆರಿಕವು ಎಫ್-16 ಸಮರ ವಿಮಾನಗಳನ್ನು ನೀಡಲಿದೆ.
ಈ ಒಪ್ಪಂದದ ಕುರಿತು ಪೋಲೆಂಡ್ ಮತ್ತು ವಾಷಿಂಗ್ಟನ್ ನಡುವೆ ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲೇ ಅಂತಿಮವಾಗಲಿದೆ ಎಂದು ಹೇಳಲಾಗಿದೆ.
ರಷ್ಯಾ ವಿರುದ್ಧ ಪ್ರತಿರೋಧ ಒಡ್ಡುತ್ತಿರುವ ಉಕ್ರೇನ್ ಸೇನೆಗೆ ನಿಮ್ಮಿಂದ ಸಾಧ್ಯವಾದಷ್ಟು ಶಸ್ತ್ರಾಸ್ತ್ರಗಳನ್ನು ಒದಗಿಸಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪಾಶ್ಚಾತ್ಯ ದೇಶಗಳಿಗೆ ಒತ್ತಾಯಿಸುತ್ತಲೇ ಇದ್ದಾರೆ. ಇದರ ಬೆನ್ನಲ್ಲೇ ಅಮೆರಿಕ ಈ ಚಿಂತನೆ ನಡೆಸಿದೆ.