Advertisement

ಪ್ರಾಣವನ್ನು ಕೊಟ್ಟೇವು, ಶರಣಾಗೆವು : ರಷ್ಯಾದ ಶರಣಾಗತಿಯ ಆಫ‌ರ್‌ ನಿರಾಕರಿಸಿದ ಉಕ್ರೇನ್‌

12:44 AM Apr 18, 2022 | Team Udayavani |

ಕೀವ್‌: ಉಕ್ರೇನ್‌ನ ಪ್ರಮುಖ ನಗರವಾದ ಮರಿಯುಪೋಲ್‌ನ ದಕ್ಷಿಣ ಭಾಗದಲ್ಲಿ ಉಕ್ರೇನ್‌ನ ಅಳಿದುಳಿದ ಸೈನಿಕರು ರಷ್ಯಾ ವಿರುದ್ಧ ತಮ್ಮ ಹೋರಾಟವನ್ನು ಮುಂದು­ವರಿಸಿವೆ. ಇಲ್ಲಿರುವ ಸೈನಿಕರಿಗೆ ರಷ್ಯಾ ಸರಕಾರ, ಕೆಲವು ಗಂಟೆಗಳ ಕಾಲ ಯುದ್ಧ ನಿಲ್ಲಿಸಲಾಗುತ್ತದೆ. ಆ ಮೂಲಕ ಸೈನಿಕರಿಗೆ ತಮ್ಮ ಪ್ರಾಣ ಉಳಿಸಿಕೊಳ್ಳಲು ಒಂದು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿತ್ತು.
ಆದರೆ ರಷ್ಯಾದ ಆಫ‌ರ್‌ ಅನ್ನು ತಿರಸ್ಕರಿಸಿರುವ ಉಕ್ರೇನ್‌ ಸೈನಿಕರು, ತಮ್ಮ ಪ್ರಾಣವಿರುವ­ವರೆಗೆ ಹೋರಾಡು­ವುದಾಗಿ ಹೇಳಿ, ಕದನ ಮುಂದುವರಿಸಿದ್ದಾರೆ.

Advertisement

ಉಕ್ರೇನ್‌ನ ಪ್ರಧಾನಿ ಡೆನ್ನಿಸ್‌ ಶಿಮಿಹಾಲ್‌ ಈ ವಿಷಯ ತಿಳಿಸಿದ್ದು, ಸೈನಿಕರ ಈ ದೇಶಭಕ್ತಿಯಿಂದಾಗಿ ಮರಿಯುಪೋಲ್‌ ಇನ್ನೂ ರಷ್ಯಾದ ವಶವಾಗದೇ ಉಳಿದಿದೆ. ಸೈನಿಕರಿಗೆ ಬೇಕಾದ ಶಸ್ತ್ರಾಸ್ತ್ರ, ಆಹಾರ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಉಕ್ರೇನ್‌ಗೆ ಹೆಚ್ಚಿನ ಹಣದ ಅಗತ್ಯತೆಯಿದ್ದು ಅದಕ್ಕಾಗಿ, ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಹಾಗೂ ವಿಶ್ವಬ್ಯಾಂಕ್‌ಗಳ ಜತೆಗೆ ಸಭೆ ನಡೆಸುವು­ದಾಗಿ ತಿಳಿಸಿದ್ದಾರೆ.

ಉಕ್ರೇನ್‌ ಕ್ರೈಸ್ತರಿಗೆ ಬೋರಿಸ್‌ ಸಂದೇಶ: ಯುದ್ಧದಿಂದ ಕಂಗಾಲಾಗಿರುವ ಉಕ್ರೇನ್‌ನ ಕ್ರೈಸ್ತ ಸಮುದಾಯಕ್ಕೆ ಯುನೈಟೆಡ್‌ ಕಿಂಗ್‌ಡಮ್‌ನ ಪ್ರಧಾನಿ ಬೋರಿಸ್‌ ಜಾನ್ಸನ್‌ “ಈಸ್ಟರ್‌’ ಹಬ್ಬದ ಶುಭಾಶಯ ರವಾನಿಸಿ­ದ್ದಾರೆ. ಇಂಥ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಉಕ್ರೇನ್‌ನ ಕ್ರೈಸ್ತ ಸಮುದಾಯ ಧೈರ್ಯ ಮತ್ತು ಸಾಹಸಗಳನ್ನು ಪ್ರದರ್ಶಿಸಬೇಕು. ಯಾವುದೇ ಕಾರಣಕ್ಕೂ ಮನಸ್ಸನ್ನು ದುರ್ಬಲ­ಗೊಳಿಸಬಾರದು ಎಂದು ಹೇಳಿದ್ದಾರೆ.

ಖಾರ್ಕಿವ್ ನಲ್ಲಿ ಐವರ ಸಾವು : ಉಕ್ರೇನ್‌ನ ಎರಡನೇ ಅತಿ ದೊಡ್ಡ ನಗರವಾದ ಖಾರ್ಕಿವ್ ಮೇಲೆ ರಷ್ಯಾ ವಾಯುಪಡೆ ರವಿವಾರ ನಡೆಸಿದ ಶೆಲ್‌ ದಾಳಿಯಿಂದ ಐವರು ನಾಗರಿಕರು ಸಾವನ್ನಪ್ಪಿ, ಸುಮಾರು 13 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ನಗರಾಡಳಿತ ತಿಳಿಸಿದೆ. ಗಾಯ­ಗೊಂಡವರನ್ನು ಆಸ್ಪತೆಗೆ ದಾಖಲಿಸಲಾಗಿದ್ದು, ಘಟನೆಯಲ್ಲಿ ಗಾಯಗೊಂಡಿರಬಹುದಾದ ಇನ್ನಿತರ ಗಾಯಾಳುಗಳನ್ನು ಪತ್ತೆ ಹಚ್ಚುವ ಕಾರ್ಯ ಆರಂಭಿಸಲಾಗಿದೆ ಎಂದು ನಗರದ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಝೆಲೋಟ್‌ನಲ್ಲಿ ಎರಡು ಸಾವು: ಉಕ್ರೇನ್‌ ಪೂರ್ವ ಭಾಗದಲ್ಲಿರುವ ಲುಹಾನ್‌ಸ್ಕ್ ಪ್ರಾಂತ್ಯದ ಝೊಲೊಟ್‌ ಎಂಬ ಸಣ್ಣ ಪಟ್ಟಣದ ಮೇಲೆ ರಷ್ಯಾ ಪಡೆಗಳು ನಡೆಸಿದ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ.

Advertisement

ಪೋಪ್‌ ಕಿವಿಮಾತು
ಈಸ್ಟರ್‌ ಸಂದರ್ಭದಲ್ಲಿ ಕ್ರೈಸ್ತರ ಪರಮೋತ್ಛ ಗುರು ಪೋಪ್‌ ಫ್ರಾನ್ಸಿಸ್‌, ರಷ್ಯಾಕ್ಕೆ ಪರೋಕ್ಷವಾಗಿ ಕಿವಿಮಾತು ಹೇಳಿದ್ದಾರೆ. ಸೇಂಟ್‌ ಪೀಟರ್ಸ್‌ಬರ್ಗ್‌ನ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್‌ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್‌ನ ಜನರು ಶಾಂತಿ, ನೆಮ್ಮದಿಯ ಬದುಕಿಗಾಗಿ ಮೊರೆ ಇಡುತ್ತಿದ್ದು, ಜನರ ಮೊರೆಯನ್ನು ಆಲಿಸಬೇಕು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next