ನವದೆಹಲಿ/ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಮಾರ್ಚ್ 07) ಉಕ್ರೇನ್ ಅಧ್ಯಕ್ಷ ವೋಲೋಡಿಮಿರ್ ಝೆಲೆನ್ ಸ್ಕಿ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ನಂತರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜತೆಯೂ ಸುಮಾರು 50 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತುಕತೆ ನಡೆಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಉಕ್ರೇನ್ ಮೇಲೆ ಯುದ್ಧ: ರಷ್ಯಾದ ದಾಳಿಯನ್ನು ನಾವು ಖಂಡಿಸುವುದಿಲ್ಲ: ಚೀನಾ
ಪ್ರಧಾನಿ ಮೋದಿ ಹಾಗೂ ಪುಟಿನ್ ನಡುವೆ ಯುದ್ಧಗ್ರಸ್ತ ಉಕ್ರೇನ್ ಪರಿಸ್ಥಿತಿಯ ಕುರಿತು ಚರ್ಚೆ ನಡೆದಿದ್ದು, ಈ ಸಂದರ್ಭದಲ್ಲಿ ಪುಟಿನ್ ಅವರು ಉಕ್ರೇನ್ ಹಾಗೂ ರಷ್ಯಾ ಅಧಿಕಾರಿಗಳ ನಡುವಿನ ಚರ್ಚೆಯ ವಿವರವನ್ನು ಪ್ರಧಾನಿ ಮೋದಿ ಅವರಿಗೆ ವಿವರಿಸಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಉಕ್ರೇನ್ ಅಧ್ಯಕ್ಷ ವೋಲೋಡಿಮಿರ್ ಝೆಲೆನ್ ಸ್ಕಿ ಅವರ ಜತೆ ನೇರವಾಗಿ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಪುಟಿನ್ ಗೆ ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ ಮಾನವೀಯತೆ ನೆಲೆಯಲ್ಲಿ ಉಕ್ರೇನ್ ನ ಹಲವು ಭಾಗಗಳಲ್ಲಿ ಕದನ ವಿರಾಮ ಘೋಷಿಸಿರುವ ರಷ್ಯಾದ ಕ್ರಮದ ಬಗ್ಗೆ ಪ್ರಧಾನಿ ಮೋದಿ ಶ್ಲಾಘಿಸಿರುವುದಾಗಿ ಮೂಲಗಳು ತಿಳಿಸಿವೆ.
ಯುದ್ಧಗ್ರಸ್ತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ನೆರವು ನೀಡುವುದಾಗಿಯೂ ರಷ್ಯಾ ಅಧ್ಯಕ್ಷ ಪುಟಿನ್ ಈ ವೇಳೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಭರವಸೆ ನೀಡಿರುವುದಾಗಿ ಮೂಲಗಳು ಹೇಳಿವೆ.