ತುಮಕೂರು: ಯುದ್ಧ ಪೀಡಿತ ಉಕ್ರೇನ್ ದೇಶದಿಂದ ರಾಜ್ಯಕ್ಕೆ ಮರಳಿ ಬಂದಿರುವ ವೈದ್ಯಕೀಯ ವಿದ್ಯಾರ್ಥಿ ಗಳಿಗೆ ದೇಶ ಮತ್ತು ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಸೆಮಿಸ್ಟರ್‌ಗೆ ಅನುಗುಣವಾಗಿ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಉಕ್ರೇನ್‌ನಿಂದ ವಾಪಸ್ ಆಗಿರುವ ಜಿಲ್ಲೆಯ 26 ವಿದ್ಯಾರ್ಥಿಗಳು ಹಾಗೂ ಪಾಲಕರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮುಖೇನ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದು, ಸದ್ಯ ವಿದ್ಯಾ ಭ್ಯಾಸದಿಂದ ವಂಚಿತರಾಗಿದ್ದಾರೆ. ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಮಾನವೀಯ ಆಧಾರದ ಮೇಲೆ ರಾಜ್ಯ ಮತ್ತು ದೇಶದ ಯಾವುದಾದರೂ ವೈದ್ಯಕೀಯ ಕಾಲೇಜಿನಲ್ಲಿ ಸೆಮಿಸ್ಟರ್‌ಗೆ ಅನುಗುಣವಾಗಿ ದಾಖಲಾತಿ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು, ಭವಿಷ್ಯದ ಹಿತದೃಷ್ಟಿಯಿಂದ ನಮಗೆಲ್ಲ ಮುಂದಿನ ವಿದ್ಯಾಭ್ಯಾಸವನ್ನು ರಾಜ್ಯದಲ್ಲಿ ಮುಂದುವರೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪ್ರವೇಶಾತಿಗೆ ಅವಕಾಶ ಮಾಡಿ: ಅತಂತ್ರ ಸ್ಥಿತಿಯ ಯಲ್ಲಿರುವ ನಾವುಗಳು ಮೊದಲನೇ ವರ್ಷದಿಂದ ಆರನೇ ವರ್ಷದವರೆಗೂ ವ್ಯಾಸಂಗ ಮಾಡುತ್ತಿರು ವುದರಿಂದ ನಮಗೆ ಆಯಾ ವರ್ಷಕ್ಕೆ ಅನುಗುಣವಾಗಿ (ಸೆಮಿಸ್ಟರ್ ವೈಸ್) ವಿದ್ಯಾಭ್ಯಾಸಕ್ಕೆ ಅನುಮತಿ ಮಾಡಿಕೊಡಬೇಕು. ನಮಗೆ ಪ್ರಮಾಣ ಪತ್ರ ಒದಗಿಸಿ ವಿಶೇಷ ಸೌಲಭ್ಯದ ಅಡಿಯಲ್ಲಿ ಪ್ರವೇಶಾತಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಅರ್ಪಿಸಿದರು.
ಮಾಹಿತಿ ರವಾನಿಸುವೆ: ವಿದ್ಯಾರ್ಥಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್ .ಪಾಟೀಲ್, ಜಿಲ್ಲೆಯ 26 ವಿದ್ಯಾರ್ಥಿಗಳು ಉಕ್ರೇನ್ ನಿಂದ ವಾಪಸ್ ಬಂದಿದ್ದು, ಈ ವಿದ್ಯಾರ್ಥಿಗಳು ಮತ್ತು ಪೋಷಕರು ಸೆಮಿಸ್ಟರ್‌ಗೆ ತಕ್ಕಂತೆ ಕರ್ನಾಟಕದ ಯಾವು ದಾದರೂ ಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಇವರ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ, ಸರ್ಕಾರದಿಂದ ಬರುವ ಮಾಹಿತಿಯನ್ನು ವಿದ್ಯಾರ್ಥಿಗಳು ಪೋಷಕರಿಗೆ ರವಾನಿಸುವುದಾಗಿ ಹೇಳಿದರು.
ಜಿಲ್ಲೆಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದ ಸಂದರ್ಭದಲ್ಲಿ ಪಾಲಕರು ಸಂಯಮದಿಂದ ವರ್ತಿಸುತ್ತಾ ಜಿಲ್ಲಾಡಳಿತಕ್ಕೆ ಸಹಕಾರ ನೀಡಿದ್ದಾರೆ. ಇವರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು. ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಕಷ್ಟದಲ್ಲಿದ್ದಾಗ ಜಿಲ್ಲಾಡಳಿತ ಸದಾ ಅವರ ಪರವಾಗಿ ಇರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಅಮೃತ, ಅಜಯಕುಮಾರ್, ದಾಸ್ ನಚಿಕೇತ್, ಗಣೇಶ್, ಗೋಕುಲ್, ಹಾಲ್ ಕುರ್, ಮೇಘಾ, ನಿಹಾರಿಕ, ಪ್ರಜ್ವಲ್, ಪವಿತ್ರ ಸೇರಿದಂತೆ 26 ಮಂದಿ ವಿದ್ಯಾರ್ಥಿಗಳು ಮತ್ತು ಪೋಷಕರು ಪಾಲ್ಗೊಂಡಿದ್ದರು.