Advertisement

ಉಕ್ರೇನ್‌ ಯುದ್ಧ ಮಧ್ಯೆಯೇ ಕರೆಯುತ್ತಿವೆ ಕಾಲೇಜುಗಳು ; ಗೊಂದಲದಲ್ಲಿ ವಿದ್ಯಾರ್ಥಿಗಳು

10:17 AM Aug 22, 2022 | Team Udayavani |

ಮಂಗಳೂರು : ಉಕ್ರೇನ್‌ನಲ್ಲಿ ಇನ್ನೂ ಯುದ್ಧ ಪರಿಸ್ಥಿತಿ ಸುಧಾರಿಸಿಲ್ಲ, ಆಗಲೇ ಅಲ್ಲಿನ ಹಲವು ವಿಶ್ವವಿದ್ಯಾನಿಲಯಗಳು ಭಾರತವೂ ಸೇರಿದಂತೆ ವಿವಿಧ ದೇಶಗಳಿಂದ ತಮ್ಮಲ್ಲಿ ನೋಂದಾಯಿಸಿಕೊಂಡ ವಿದ್ಯಾರ್ಥಿಗಳನ್ನು ಮರಳಿ ಬರುವಂತೆ ಸೂಚಿಸಿವೆ.

Advertisement

ಸರಕಾರದ ನೆರವು ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು ಈಗ ಏನು ಮಾಡುವುದು ಎಂಬ ಕಳವಳಕ್ಕೆ ಸಿಲುಕಿದ್ದಾರೆ. ಕಾರಣ ಉಕ್ರೇನ್‌ನಲ್ಲಿ ಪರಿಸ್ಥಿತಿ ಸುಧಾರಣೆಯೇ ಆಗಿಲ್ಲ. ಮನೆಯಲ್ಲೇ ಕುಳಿತು ಆನ್‌ಲೈನ್‌ ಕ್ಲಾಸ್‌ಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳು ಸರಕಾರದ ಮೇಲೆ ಇರಿಸಿದ್ದ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಅನೇಕ ಮಂದಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್‌ ಈಗಾಗಲೇ ಅಂತಿಮ ವರ್ಷದ ಮೆಡಿಕಲ್‌ ವಿದ್ಯಾರ್ಥಿಗಳಿಗೆ ಭಾರತದಲ್ಲೇ ಎರಡು ವರ್ಷ ಇಂಟರ್ನ್ಶಿಪ್‌ ಪೂರ್ಣಗೊಳಿಸುವುದಕ್ಕೆ ಅನುಮತಿ ಕೊಡಿಸುವಲ್ಲಿ ಯಶಸ್ವಿಯಾಗಿದೆ, ಹಾಗಾಗಿ ಇತರ ವರ್ಷಗಳ ವಿದ್ಯಾರ್ಥಿಗಳಿಗೂ ಭಾರತದಲ್ಲೇ ಶಿಕ್ಷಣ ಮುಂದುವರಿಸಲು ಅವಕಾಶ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದಾರೆ.

ಒಮ್ಮೆ ಜೀವ ಸಹಿತ ಬಂದಿದ್ದೇವೆ, ಅಲ್ಲಿನ ವಿಶ್ವವಿದ್ಯಾನಿಲಯಗಳು ಹೇಗಾದರೂ ಮಾಡಿ ಬನ್ನಿ ಎಂದು ಹೇಳುತ್ತಿದ್ದಾರೆ, ಇನ್ನೂ ಉಕ್ರೇನ್‌ನ ವಿಮಾನ ನಿಲ್ದಾಣಗಳು ಕಾರ್ಯಾರಂಭಿಸಿಲ್ಲ, ನಾವು ಹತ್ತಿರದ ದೇಶಗಳಿಗೆ ಹೋಗಿ, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ತೆರಳಬೇಕಾಗುತ್ತದೆ, ಅವರಿಗೆ ಅವರ ಸಂರಕ್ಷಣೆಯೇ ಸಾಧ್ಯವಾಗುತ್ತಿಲ್ಲ, ಇನ್ನು ನಮ್ಮ ರಕ್ಷಣೆ ಹೇಗೆ ಸಾಧ್ಯ ಎನ್ನುತ್ತಾರೆ ಮಂಗಳೂರಿನಲ್ಲಿರುವ ಉಕ್ರೇನ್‌ ವೈದ್ಯಕೀಯ ವಿದ್ಯಾರ್ಥಿ ಪೃಥ್ವಿರಾಜ್‌.

ಇದನ್ನೂ ಓದಿ : ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಕಾಮಗಾರಿ : ಕಲ್ಲಡ್ಕ-ಮೆಲ್ಕಾರ್‌ನಲ್ಲಿ ಟ್ರಾಫಿಕ್‌ ಜಾಮ್‌

ಹೆತ್ತವರಿಗೂ ಮಕ್ಕಳನ್ನು ಪುನಃ ಕಳುಹಿಸುವ ಧೈರ್ಯ ಇಲ್ಲ. ಸದ್ಯ ಆನ್‌ಲೈನ್‌ ತರಗತಿ ಮುಂದುವರಿಸಬೇಕಷ್ಟೆ. ನಾವು ಕೇಳಿದ ಪ್ರಶ್ನೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಉತ್ತರಗಳನ್ನು ಕೊಟ್ಟಿದೆ. ಆದರೆ ನಮ್ಮೆಲ್ಲ ಆಕಾಂಕ್ಷೆಗಳಿಗೂ ಅದು ವಿರುದ್ಧವಾಗಿದೆ ಎನ್ನುತ್ತಾರೆ ಪೃಥ್ವಿ.

Advertisement

ಉಕ್ರೇನ್‌ನಲ್ಲಿ ಅಂತಿಮ ವರ್ಷ ಪೂರೈಸಿದ್ದ ವಿದ್ಯಾರ್ಥಿಗಳು ಭಾರತದಲ್ಲಿ ಎರಡು ವರ್ಷ ಇಂಟರ್ನ್ ಶಿಪ್‌ ಮಾಡಿ ಬಳಿಕ ಇಲ್ಲಿ ಎಫ್‌ಎಂಜಿಇ (ಫಾರಿನ್‌ ಮೆಡಿಕಲ್‌ ಗ್ರಾಜ್ಯುಯೇಟ್‌ ಎಕ್ಸಾಂ) ಬರೆಯಲು ಅವಕಾಶ ಸಿಕ್ಕಿದೆ, ಆದರೆ 2ರಿಂದ 5 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮಾತ್ರ ಯಾವುದೇ ಆಯ್ಕೆ ಸದ್ಯ ಇಲ್ಲ.

ಕೆಲವರು ವರ್ಗ, ಕೆಲವರು ಅತಂತ್ರ
ಮನೆಯಲ್ಲಿರುವ ವಿದ್ಯಾರ್ಥಿಗಳಲ್ಲಿ ಕೆಲವರು ಕೋರ್ಟ್‌ ಮೇಲೆ ನಿರೀಕ್ಷೆ ಇರಿಸಿಕೊಂಡು ಆನ್‌ಲೈನ್‌ ಶಿಕ್ಷಣವನ್ನೇ ಮುಂದುವರಿಸುವ ಇರಾದೆ ಹೊಂದಿದ್ದಾರೆ. ಕೆಲವರು ಸಾಕಷ್ಟು ಕಾದದ್ದಾಯಿತು, ಇನ್ನು ಬೇರೆ ದೇಶಕ್ಕೆ ವರ್ಗಾವಣೆ ಪಡೆಯುತ್ತೇವೆ ಎಂದು ಆ ದಾರಿ ಹಿಡಿಯುತ್ತಿದ್ದಾರೆ.

ನಾನು ನಮ್ಮ ಏಜೆನ್ಸಿ ಮೂಲಕ ಜಾರ್ಜಿಯಾ ದೇಶಕ್ಕೆ ಟ್ರಾನ್ಸ್‌ಫರ್‌ ಪಡೆಯುವ ಪ್ರಯತ್ನದಲ್ಲಿದ್ದೇನೆ ಎನ್ನುತ್ತಾರೆ ಖಾರ್ಕಿವ್‌ ವಿ.ವಿ.ನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿನಿಯಾಗಿದ್ದ ಉಜಿರೆಯ ಹೀನಾ ಫಾತಿಮಾ.

ಖಾರ್ಕಿವ್‌ ನ್ಯಾಶನಲ್‌ ಯುನಿವರ್ಸಿಟಿಯ ತೃತೀಯ ವರ್ಷದ ಎಂಬಿಬಿಎಸ್‌ನ ಅನೈನಾ ಅನ್ನಾ ಅವರಿಗೆ ವಿಶ್ವವಿದ್ಯಾನಿಲಯದಿಂದ ಸಿಕ್ಕಿರುವ ಮಾಹಿತಿಯಂತೆ ಟರ್ಕಿ ದೇಶದಲ್ಲಿ ಪ್ರಾಕ್ಟಿಕಲ್‌ ತರಗತಿ ನಡೆಸುವ ಸಾಧ್ಯತೆ ಇದೆ.

ಮೊದಲ ವರ್ಷದವರ ಸ್ಥಿತಿ ಮಾತ್ರ ಅತಂತ್ರ. ಯಾಕೆಂದರೆ 2021ರ ನವೆಂಬರ್‌ 18ರೊಳಗೆ ಪ್ರವೇಶ ಪಡೆದವರಿಗೆ ಎಂದರೆ 2ನೇ ಹಾಗೂ ಮೇಲ್ಪಟ್ಟ ವರ್ಷಗಳ ವಿದ್ಯಾರ್ಥಿಗಳಿಗೆ ಬೇರೆ ದೇಶದ ಕಾಲೇಜಿಗೆ ವರ್ಗಾವಣೆ ಅವಕಾಶವನ್ನು ಎನ್‌ಎಂಸಿ ನೀಡಿದೆ. ಆದರೆ 1ನೇ ವರ್ಷದವರಿಗೆ ಇದಕ್ಕೆ ಅವಕಾಶವಿಲ್ಲ. ಅವರು ಯುದ್ಧ ಮುಗಿಯುವವರೆಗೆ ಕಾಯಬೇಕು, ಅಥವಾ ಅಪಾಯದ ಮಧ್ಯೆಯೇ ಉಕ್ರೇನ್‌ಗೆ ತೆರಳಬೇಕು.

ನಮ್ಮನ್ನು ಕಷ್ಟಪಟ್ಟು ತಾಯ್ನಾಡಿಗೆ ಕರೆತಂದಿದ್ದಾರೆ, ಈಗ ಅಲ್ಲಿ ಯುದ್ಧ ನಡೆಯುತ್ತಿದೆ, ಹಾಗಿರುವಾಗ ನಮಗೆ ಮಾತ್ರ ಟ್ರಾನ್ಸ್‌ಫರ್‌ ಸೌಲಭ್ಯ ಇಲ್ಲ, ನಾವು ಈಗ ಮತ್ತೆ ಅಪಾಯಕರ ಸನ್ನಿವೇಶದಲ್ಲೇ ಅಲ್ಲಿಗೆ ತೆರಳುವ ಪರಿಸ್ಥಿತಿಯನ್ನು ಸರಕಾರ ತಂದಿರುವುದು ಸರಿಯಲ್ಲ ಎನ್ನುತ್ತಾರೆ ಖಾರ್ಕಿವ್‌ ನ್ಯಾಶನಲ್‌ ಯುನಿವರ್ಸಿಟಿಯ ಮೊದಲ ವರ್ಷ ವಿದ್ಯಾರ್ಥಿನಿ ಮೂಡುಬಿದಿರೆಯ ನೈಮಿಷಾ.

ಪ್ರಮುಖ ಬೇಡಿಕೆಯೇನು?
- ಸರಕಾರ ಕನಿಷ್ಠ ಪ್ರ್ಯಾಕ್ಟಿಕಲ್‌ ಮುಂದುವರಿಸುವುದಕ್ಕಾದರೂ ಇಲ್ಲಿನ ವಿದ್ಯಾಸಂಸ್ಥೆಗಳಲ್ಲಿ ಅವಕಾಶ ಕೊಡಬೇಕು
– ಬೇರೆ ದೇಶಕ್ಕೆ ವರ್ಗಾವಣೆಗೆ ಅವಕಾಶ ಕೊಟ್ಟರೂ ಆಗಬಹುದು
– ವರ್ಗಾವಣೆಗೆ ಬೇಕಾಗುವ ಟ್ರಾನ್ಸ್‌ಕ್ರಿಪ್ಟ್ ಒಟ್ಟಿಗೇ ಎಲ್ಲ ವಿದ್ಯಾರ್ಥಿಗಳಿಗೆ ಒದಗಿಸಿಕೊಡಬೇಕು.

ಉಭಯ ಜಿಲ್ಲೆಯ 25 ಮಂದಿ
ಉಕ್ರೇನ್‌ನ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 25 ಮಂದಿ ಮೆಡಿಕಲ್‌ ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ ದ.ಕ.ದ 18 ಮತ್ತು ಉಡುಪಿ ಜಿಲ್ಲೆಯ 7 ಮಂದಿ ಇದ್ದಾರೆ.

– ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next