Advertisement

ಉಕ್ರೇನ್ ಸಂಕಷ್ಟ:  ಅಪಾಯದ ಸ್ಥಿತಿಯಲ್ಲಿ ಉಜಿರೆಯ ವಿದ್ಯಾರ್ಥಿನಿ ಹೀನಾ ಫಾತಿಮಾ

10:52 AM Mar 03, 2022 | Team Udayavani |

ಬೆಳ್ತಂಗಡಿ: ಯುದ್ಧಗ್ರಸ್ಥ ಉಕ್ರೇನ್‌ನ ಖಾರ್ಕಿವ್ ನಲ್ಲಿ ಮಂಗಳವಾರ ರಷ್ಯಾ ದಾಳಿಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿ, ವೈದ್ಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಬೆನ್ನಿಗೇ ಅವರಿಗಿಂತ ಕೇವಲ 100 ಮೀಟರ್ ಅಂತರದಲ್ಲಿ ಉಜಿರೆಯ ನಿವಾಸಿನಿ, ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರೂ ಬಂಕರ್ ನಲ್ಲಿ ಅಡಗಿಕೊಂಡಿದ್ದು ಅಪಾಯದ ಸ್ಥಿತಿಯಲ್ಲಿದ್ದಾರೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

Advertisement

ಉಜಿರೆಯ ಟಿ.ಬಿ. ಕ್ರಾಸ್ ನಿವಾಸಿ ದಿ. ಯಾಸೀನ್ ಮತ್ತು ಶಹನಾ ದಂಪತಿ ಪುತ್ರಿ ಹೀನಾ ಫಾತಿಮಾ ಅವರೇ ಯುದ್ಧಗ್ರಸ್ಥ ಉಕ್ರೇನ್ ನಾಡಿನಲ್ಲಿ ಪ್ರಾಣಾಪಾಯ ಎದುರಿಸುತ್ತಿರುವ ವಿದ್ಯಾರ್ಥಿನಿ.

ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಹೀನಾ ಅವರು ನಿನ್ನೆ ದಿನ ಮೃತಪಟ್ಟ ನವೀನ್ ಅವರ ಬ್ಯಾಚ್ ನಲ್ಲೇ ಕಲಿಯುತ್ತಿದ್ದಾರೆ ಎಂದು ಅವರ ಮಾವ, ಉದ್ಯಮಿ ಆಬಿದ್ ಅಲಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನವೀನ್ ಸಾವಿಗೆ ಕಾರಣವಾದ ರಷ್ಯಾ ನಡೆಸಿದ ಗಂಭೀರ ಸ್ಪೋಟ ಇವರು ಇರುವ ಕಟ್ಟಡಕ್ಕಿಂತ ಕೇವಲ 100 ಮೀ. ದೂರದಲ್ಲಿ ಇತ್ತೆಂದು ತಿಳಿದುಬಂದಿದೆ. ಕಟ್ಟಡವೊಂದರ ತಳಹಂತದ ಬಂಕರ್‌ನಲ್ಲಿ‌ ಹೀನಾ ಫಾತಿಮಾ ಸೇರಿದಂತೆ ಒಟ್ಟು 7 ಮಂದಿ ಕನ್ನಡಿಗ ವಿದ್ಯಾರ್ಥಿಗಳು ತಮ್ಮನ್ನು ರಕ್ಷಿಸಿಕೊಂಡಿದ್ದರು.

ವಿದೇಶಾಂಗ ಇಲಾಖೆ ಅವರನ್ನು ಸಂಪರ್ಕಿಸಿದ್ದು, ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದೆ. ಅಲ್ಲಿಂದ ಬುಧವಾರ ಅವರನ್ನು ಹೊರಬರುವಂತೆ ನಿರ್ದೇಶಿದ್ದು, ರೈಲು ಮಾರ್ಗದ ಮೂಲಕ 1000 ಕಿ‌.ಮೀ. ದೂರದಲ್ಲಿರುವ ಲಿವಿನ್ ಎಂಬ ಗಡಿ ಪ್ರದೇಶಕ್ಕೆ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದೆ ಎಂಬ ಮಾಹಿತಿ ಇದೆ. ಒಂದು ದಿನ ಪ್ರಯಾಣ ನಡೆಸಿ ಗಡಿ ಸೇರಿದರೆ ಅಲ್ಲಿಂದ ವಿಮಾನದ ಮೂಲಕ ಅವರನ್ನು ಭಾರತಕ್ಕೆ ಕರೆ ತರುವ ಬಗ್ಗೆ ಎಂಬೆಸ್ಸಿ ಯೋಜನೆ ರೂಪಿಸಿದೆ.

Advertisement

ಹೀನಾ ಫಾತಿಮಾ ಅವರ ಜತೆ ಚಿಕ್ಕಮಗಳೂರು, ಬೆಂಗಳೂರಿನ ಇತರ ಆರು ಮಂದಿ ಇದ್ದಾರೆ ಎಂದು ಮಾಹಿತಿ ಇದೆ.

ಯುದ್ಧ ಆರಂಭವಾದ ದಿನಗಳಲ್ಲಿ ಅವರಿಗೆ ಬಿಸ್ಕೆಟ್ ಮತ್ತು ಬ್ರೆಡ್ ಖರೀದಿಗೆ ಹೊರಹೋಗಲು ಅನುಮತಿಸಲಾಗುತ್ತಿತ್ತು. ಆದರೆ ಮಂಗಳವಾರ ಕನ್ನಡಿಗ ನವೀನ್ ಸಾವನ್ನಪ್ಪುತ್ತಿರುವಂತೆ ಅಪಾಯದ ಸೂಚನೆ ರವಾನಿಸಿದೆ. ಇದೀಗ ರೈಲು ಪ್ರಯಾಣದ ವೇಳೆಯೂ ಅವರ ಜೀವಾಪಾಯದ ಬಗ್ಗೆ ಸರಕಾರ ಖಾತ್ರಿ ನೀಡಿಲ್ಲ ಎನ್ನಲಾಗಿದೆ‌. ಆದರೆ ವಿದೇಶಾಂಗ ಕಚೇರಿಯಿಂದ ಅವರನ್ನು ಮತ್ತು ಅವರ ಕುಟುಂಬ ವರ್ಗದವರನ್ನು ಸಂಪರ್ಕಿಸಲಾಗಿದ್ದು, ಹೇಗಾದರೂ ಮಾಡಿ ಊರಿಗೆ ಮರಳಿ‌ ತರುವುದಾಗಿ ಭರವಸೆ ನೀಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಹೀನಾ ಅವರ ಮಾವ ಆಬಿದ್ ಅಲಿ ಮೂಲಕ‌ ಅವರ ಮನೆಯವರನ್ನು ಡಿಸಿ ಕಚೇರಿಯಿಂದ ಮತ್ತು ಬೆಳ್ತಂಗಡಿ ತಹಶಿಲ್ದಾರ್ ಕಚೇರಿಯಿಂದ ಸಂಪರ್ಕಿಸಲಾಗುತ್ತಿದೆ.

ಇದನ್ನೂ ಓದಿ:ಅಂಕೋಲಾ ಬಸ್ ಸ್ಟ್ಯಾಂಡ್ ಶೌಚಾಲಯದಲ್ಲಿ ಒಂದೂವರೆ ಗಂಟೆ ಮಲಗಿದ ಮಂಗಳೂರಿನ ವ್ಯಕ್ತಿ

ತಾಲೂಕು ಕಚೇರಿಯಿಂದ ಉಪತಹಶೀಲ್ದಾರ್ ಮಲ್ಲಪ್ಪ ನಡುಗಡ್ಡಿ, ಉಜಿರೆ ಗ್ರಾಮ ಕರಣಿಕ ಪ್ರದೀಪ್ ಅವರು ಹೆತ್ತವರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ‌.

ಪ್ರತಿಭಾನ್ವಿತೆಯಾಗಿರುವ ಹೀನಾ ಫಾತಿಮಾ ಅವರು ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮುಗಿಸಿದ್ದರು‌. ಬಳಿಕ ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಕಲಿಕೆಗೆ ಪ್ರವೇಶಾಹರ್ತೆ ಪಡೆದು ಉಕ್ರೇನ್ ಗೆ ತೆರಳಿದ್ದರು.

ಹೀನಾ ಅವರ ಮನೆಯಲ್ಲಿ ಇಬ್ಬರು ಮಾತ್ರ ಹೆಣ್ಣು ಮಕ್ಕಳಿದ್ದು, ತಂದೆ ಈಗಾಗಲೇ ಮೃತರಾಗಿದ್ದಾರೆ. ಹೀನಾ ಅವರ ಅಕ್ಕ ನಿಶಾ ಫಾತಿಮಾ ಅವರು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪದವಿ ಮುಗಿಸಿ ದುಬಾಯಿಯ ಕಂಪೆನಿಯೊಂದರಲ್ಲಿ ಎಕೌಂಟೆಂಟ್ ಆಗಿದ್ದಾರೆ.

ಮನೆ ತಲುಪುವವರೆಗೆ ಭಯ ಇದೆ

ಹೀನಾ ಫಾತಿಮಾ ಅವರು ನನ್ನ ಅಕ್ಕನ ಮಗಳಾಗಿದ್ದು, ಅವಳು ಮನೆ ತಲುಪುವವರೆಗೆ ನಮಗೆ ಭಯ ಕಾದಿದೆ. ಇದೀಗ 1000 ಕಿ.‌ಮೀ ನಷ್ಟು ಅವರು ರೈಲಿನ ಮೂಲಕ ಪ್ರಯಾಣ ಮಾಡಿ ಗಡಿ ತಲುಪಬೇಕಿದೆ. ಪ್ರಯಾಣದ ವೇಳೆ ಅವರು ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಪ್ರಯಾಣದ ದಾರಿ ಬಗ್ಗೆ ಸರಕಾರ ಕೂಡ ಖಾತ್ರಿ ನೀಡಿಲ್ಲ. ಯುದ್ಧಪೀಡಿತ ಪ್ರದೇಶಗಳ ಮೂಲಕ ರೈಲು ಹಾದು ಬರಲಿರುವುದರಿಂದ ಏನಾಗುತ್ತದೋ ಏನೋ ಎಂದು‌ ಕ್ಷಣ ಕ್ಷಣ ಭಯ ಇದೆ. ಆದರೂ ದೃತಿಗೆಡದೆ ಮನೆಯವರಿಗೆ ಧೈರ್ಯ ತುಂಬುತ್ತಿದ್ದೇವೆ. – ಆಬಿದ್ ಅಲಿ, ಉದ್ಯಮಿಗಳು, (ಹೀನಾ ಫಾತಿಮಾ ಅವರ  ಮಾವ)

Advertisement

Udayavani is now on Telegram. Click here to join our channel and stay updated with the latest news.

Next