ಬೆಳ್ತಂಗಡಿ: ಯುದ್ಧಗ್ರಸ್ಥ ಉಕ್ರೇನ್‌ನ ಖಾರ್ಕಿವ್ ನಲ್ಲಿ ಮಂಗಳವಾರ ರಷ್ಯಾ ದಾಳಿಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿ, ವೈದ್ಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಬೆನ್ನಿಗೇ ಅವರಿಗಿಂತ ಕೇವಲ 100 ಮೀಟರ್ ಅಂತರದಲ್ಲಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆಯ ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರೂ ಇದೀಗ ಹಂಗೇರಿ ಕಡೆಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೀನಾ ಫಾತಿಮಾ ಸಹಿತ ಅನೇಕುರು ನಿನ್ನೆಯವರೆಗೆ ಬಂಕರ್ ನಲ್ಲಿ ಆಶ್ರಯ ಪಡೆದಿದ್ದರು. ಕಾರ್ಕೀವ್ ಪ್ರದೇಶದದಿಂದ ಸುಮಾರು 1000 ಕಿ.ಮೀ. ದೂರದ ಲಿವಿವ್ ಪ್ರದೇಶಕ್ಕೆ ರೈಲಿನ ಮೂಲಕ ಇಂದು 12.45 ಕ್ಕೆ ತಲುಪಿದ್ದಾರೆ ಎಂಬ ಮಾಹಿತಿಯನ್ನು ಮನೆಯವರಿಗೆ ನೀಡಿದ್ದಾರೆ.
ಬಿಸ್ಕತ್, ಬನ್, ನೀರು ಕೂಡ ಇಲ್ಲದೆ ಅಷ್ಟು ದೂರ ಕ್ರಮಿಸಿದ್ದಾರೆ. ರೈಲಿನಲ್ಲಿ ಕಾಲಿಡಲು ಜಾಗವಿಲ್ಲದಷ್ಟು ನೂಕುನುಗ್ಗಲಿನ ಪರಿಸ್ಥಿಯ ನಡುವೆ ಜೀವ ಉಳಿಸಿಕೊಳ್ಳುವ ಸಲುವಾಗಿ ಗಡಿ ಪ್ರದೇಶಕ್ಕೆ ತಲುಪಲು ಅಲ್ಲಿನ ಮಂದಿ ಹರಸಾಹಸ ಪಡುತ್ತಿದ್ದಾರೆ. ರೈಲಿನಲ್ಲಿ ಉಕ್ರೇನ್ ಪ್ರಜೆಗಳಿಗೆ ಆಧ್ಯತೆ ನೀಡಿ ಬಳಿಕ ಇತರ ದೇಶದ ಮಹಿಳೆಯರಿಗಷ್ಟೆ ಪ್ರಾಶಸ್ತ್ಯ ನೀಡಲಾಗುತ್ತಿದೆಯಂತೆ. ಪುರುಷರು ಕಾಲ್ನಡಿಗೆಯ ಮೂಲಕ ಬರುವ ಸಾಹಸ ನಡೆಸಬೇಕಿದೆ ಎಂಬುದು ಹೀನಾ ಅವರ ಮಾತಾಗಿದೆ.
ಹೀನಾ ಫಾತಿಮಾ ಲಿವಿವ್ ನಿಂದ ಬಾರ್ಡರ್ ಗೆ ಬಸ್ ಮೂಲಕ ತಲುಪಬೇಕಾಗಿದೆ. ಸದ್ಯದ ಮಾಹಿತಿಯಂತೆ ರೊಮೇನಿಯಾ ಅಥವಾ ಹಂಗೇರಿಯಾಕ್ಕೆ ತಲುಪಬೇಕಿದ್ದು ಅಲ್ಲಿಂದ ವಿಮಾನದ ಮೂಲಕ ಭಾರತ ತಲುಪಬೇಕಿದೆ. ಹೀನಾ ಅವರೊಂದಿಗೆ ಉಳಿದ ಏಳು ಮಂದಿ ಪುಟ್ಟ ಮಕ್ಕಳು ಸಂಚರಿಸುತ್ತಿರುವ ಕುರಿತು ಹೀನಾ ಅವರ ಪರಿಸ್ಥಿತಿ ಕುರಿತು ಅವರ ಮಾವ ಉದ್ಯಮಿ ಆಬಿದ್ ಅಲಿ ಉದಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಉಕ್ರೇನ್ ಸಂಕಷ್ಟ: ಅಪಾಯದ ಸ್ಥಿತಿಯಲ್ಲಿ ಉಜಿರೆಯ ವಿದ್ಯಾರ್ಥಿನಿ ಹೀನಾ ಫಾತಿಮಾ
ಉಜಿರೆಯ ಟಿ.ಬಿ. ಕ್ರಾಸ್ ನಿವಾಸಿ ದಿ. ಯಾಸೀನ್ ಮತ್ತು ಶಹನಾ ದಂಪತಿ ಪುತ್ರಿ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಹೀನಾ ಫಾತಿಮಾ ಅವರನ್ನು ಭೇಟಿಯಾಗಲು ತಾಯಿ ಹಾಗೂ ಓರ್ವ ಅಕ್ಕ ದುಬೈನಲ್ಲಿರುವ ನಿಶಾತ್ ಯಾಸಿನ್ ಹಂಬಲಿಸುತ್ತಿದ್ದಾರೆ.