Advertisement

ಉಕ್ರೇನ್‌ ನಗರಗಳಿಗೆ “ಮಾನವೀಯ ರಹದಾರಿ’

11:53 PM Mar 07, 2022 | Team Udayavani |

ಯುದ್ಧಪೀಡಿತ ಉಕ್ರೇನ್‌ನ ಪ್ರಮುಖ ನಗರಗಳಲ್ಲಿನ ನಾಗರಿಕರಿಗೆ ಸಹಾಯ ಮಾಡುವ ಸಲುವಾಗಿ ಆ ನಗರಗಳಿಗೆ ಮಾನವೀಯ ರಹದಾರಿಗಳನ್ನು (ಹ್ಯುಮ್ಯಾನಿಟೇರಿಯನ್‌ ಕಾರಿಡಾರ್‌) ಕಲ್ಪಿಸುವುದಾಗಿ ರಷ್ಯಾ ಘೋಷಿಸಿದೆ. ಈ ಹಿನ್ನೆಲೆಯಲ್ಲಿ, ಕದನ ವಿರಾಮ ಘೋಷಿಸಲಾಗಿದೆ. ಇಂಥ ರಹದಾರಿಗಳ ಅವಶ್ಯಕತೆ, ಉಪಯೋಗಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Advertisement

ರಹದಾರಿಗಳ ಉಪಯೋಗವೇನು?
ಯುದ್ಧಪೀಡಿತ ಪ್ರದೇಶಗಳಿಗೆ ಆಹಾರ ಮತ್ತು ಔಷಧಿ ವಿತರಣೆ, ನಾಗರಿಕರ ತೆರವು ಕಾರ್ಯಾಚರಣೆಗೆ ಇದನ್ನು ಬಳಸಲಾಗುತ್ತದೆ. ಗುಂಡಿನ ದಾಳಿ ಅಥವಾ ಬಾಂಬ್‌ ದಾಳಿಯಿಂದ ಗಾಯಗೊಂಡಿದ್ದ ಹಲವಾರು ಜನರಿಗೆ ಈ ಅವಧಿಯಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ.

ಸೇವೆ ನೀಡುವವರು ಯಾರು?
ಬಹುತೇಕ ಸಂದರ್ಭಗಳಲ್ಲಿ ವಿಶ್ವಸಂಸ್ಥೆಯೇ ಈ ನೆರವಿನ ವ್ಯವಸ್ಥೆ ಮಾಡುತ್ತದೆ. ಕೆಲವೊಮ್ಮೆ ಸ್ಥಳೀಯ ಸರ್ಕಾರೇತರ ಸಂಸ್ಥೆಗಳು ಅಥವಾ ಇನ್ನಿತರ ಸಂಘ-ಸಂಸ್ಥೆಗಳು ಇಂಥ ನೆರವನ್ನು ನೀಡುತ್ತವೆ. ಇಂಥ ಸಂದರ್ಭಗಳಲ್ಲಿ ಪತ್ರಕರ್ತರಿಗೆ ಯುದ್ಧಪೀಡಿತ ಪ್ರದೇಶಗಳ ಚಿತ್ರಣ ನೀಡಲು ಅವಕಾಶ ಕಲ್ಪಿಸಲಾಗುತ್ತದೆ.

ಉಕ್ರೇನ್‌ನಲ್ಲಿ ಸಿದ್ಧವಾಗಿರುವ ರಹದಾರಿ ಎಂಥದ್ದು?
ಕೀವ್‌ನಿಂದ ಬೆಲಾರಸ್‌ವರೆಗೆ ಇಂಥದ್ದೊಂದು ರಹದಾರಿ ಕಲ್ಪಿಸಲಾಗಿದೆ. ಖಾರ್ಕಿವ್‌, ಮರಿಯುಪೋಲ್‌, ಸುಮಿ ನಗರಗಳಿಂದ ಸದ್ಯದಲ್ಲೇ ಇಂಥ ರಹದಾರಿಗಳು ತೆರೆಯಲ್ಪಡಲಿವೆ. ಫ್ರಾನ್ಸ್‌ನ ಪ್ರಧಾನಿ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌ ಅವರ ಮನವಿ ಮೇರೆಗೆ ಈ ರಹದಾರಿಗಳನ್ನು ತೆರೆಯಲಾಗಿದೆ.

ಉಕ್ರೇನ್‌ನಲ್ಲಿ ಇದರ ಅವಶ್ಯಕತೆಯಿತ್ತೇ?
ಕೀವ್‌, ಖಾರ್ಕಿವ್‌, ಮರಿಯುಪೋಲ್‌, ವೊಲ್ನೊವಾಖಾ ನಗರಗಳಲ್ಲಿ ಅತೀವ ಶೆಲ್‌ ದಾಳಿ ನಡೆಯುತ್ತಿರುವ ಕಾರಣ ಅಲ್ಲಿದ್ದ ನಾಗರಿಕರಿಗೆ ನೆರವು ನೀಡಲು ಅಥವಾ ಅವರನ್ನು ಬೇರೆಡೆಗೆ ಸ್ಥಳಾಂತರಗೊಳಿಸಲು ಕಷ್ಟವಾಗಿತ್ತು. ಆ ಹಿನ್ನೆಲೆಯಲ್ಲಿ ಮಾನವೀಯ ರಹದಾರಿಗಳನ್ನು ತೆರೆಯಲು ನಿರ್ಧರಿಸಲಾಯಿತು.

Advertisement

ದುರ್ಬಳಕೆಯಾಗುವ ಸಾಧ್ಯತೆ
ಮಾನವೀಯ ದೃಷ್ಟಿಯಿಂದ ಕಲ್ಪಿಸಲಾಗುವ ರಹದಾರಿ ಸೌಲಭ್ಯಗಳು ಕೆಲವೊಮ್ಮೆ ದುರ್ಬಳಕೆಯಾಗುವ ಸಾಧ್ಯತೆಗಳಿರುತ್ತವೆ. ಶಸ್ತ್ರಾಸ್ತ್ರಗಳ ಅಥವಾ ಮಾದಕ ವಸ್ತುಗಳ ಕಳ್ಳಸಾಗಣೆ ಮಾಡಲು ಇಂಥ ದಾರಿಗಳನ್ನು ಬಳಸಬಹುದು. ಶತ್ರುರಾಷ್ಟ್ರವನ್ನು ಬುಡಮೇಲು ಮಾಡಲೂ ಇಂಥ ದಾರಿಗಳನ್ನು ಕೆಲವು ದೇಶಗಳು ದುರುಪಯೋಗ ಮಾಡಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next