Advertisement

ಪಾಸ್‌ಪೋರ್ಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾದ ಮಂಗಳೂರು ವಿದ್ಯಾರ್ಥಿನಿ

08:27 AM Mar 02, 2022 | Team Udayavani |

ಮಂಗಳೂರು: ಉಕ್ರೇನ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 18 ಮಂದಿ ಸಿಲುಕಿಕೊಂಡಿರುವ ಮಾಹಿತಿ ಜಿಲ್ಲಾಡಳಿತಕ್ಕೆ ಲಭಿಸಿದ್ದು ಅವರಲ್ಲಿ ಕೆಲವರು ಬಸ್‌, ರೈಲಿನ ಮೂಲಕ ಉಕ್ರೇನ್‌ ತೊರೆದು ಮಾಲ್ಡೋವಾ, ಹಂಗೇರಿ ಮೊದ  ಲಾದೆಡೆ ಪ್ರಯಾಣ ಬೆಳೆಸಿದ್ದಾರೆ. ಉಕ್ರೇನ್‌ ಮೇಲೆ ದಾಳಿ ಮುಂದು ವರಿದಿರುವುದರಿಂದ ಮತ್ತು ಕೆಲವು ಮಂದಿ ನೇರ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಊರಿನಲ್ಲಿರುವ ಅವರ ಹೆತ್ತವರ ಆತಂಕ ಮುಂದುವರಿದಿದೆ.

Advertisement

ಪ್ರಧಾನಿಗೆ ಮನವಿ
ತೀವ್ರ ದಾಳಿಗೊಳಗಾದ ಖಾರ್ಕಿವ್‌ನಲ್ಲಿದ್ದ ವಿದ್ಯಾರ್ಥಿನಿ ದೇರೆಬೈಲ್‌ನ ಅನೈನಾ ಅನ್ನಾ ಮಂಗಳವಾರ ರೈಲಿನಲ್ಲಿ ಪೋಲಂಡ್‌ ಕಡೆಗೆ ಹೊರಟಿದ್ದಾರೆ. ಆಕೆಯ ಪಾಸ್‌ಪೋರ್ಟ್‌ ಏಜೆಂಟ್‌ನ ಬಳಿ ಇದ್ದು ಇನ್ನಷ್ಟು ತೊಂದರೆಗೆ ಸಿಲುಕಿ ದ್ದಾರೆ. ಈ ಬಗ್ಗೆ ಪ್ರಧಾನಿಯವರಿಗೆ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

“ನಮ್ಮ ಯುನಿವರ್ಸಿಟಿ ಕಟ್ಟಡದ ಪಕ್ಕದಲ್ಲೇ ಮಂಗಳವಾರ ಕಟ್ಟಡವೊಂದನ್ನು ಸ್ಫೋಟಿಸಲಾಯಿತು. ಹಾಗಾಗಿ ಬಂಕರ್‌ ಬಿಟ್ಟು ರೈಲು ಹತ್ತಿದ್ದೇನೆ. ಆದರೆ ನನ್ನ ಪಾಸ್‌ಪೋರ್ಟ್‌ ಏಜೆಂಟ್‌ ಒಬ್ಬರ ಬಳಿ ಇದೆ. ಅವರಿಗೆ ಕರೆ ಮಾಡಿದರೆ ಅವರಿರುವಲ್ಲಿಗೆ ಬಂದು ಪಡೆಯುವಂತೆ ಹೇಳುತ್ತಿದ್ದಾರೆ. ಆದರೆ ನಾವಿರುವ ಸ್ಥಳದ ಸುತ್ತಲೂ ದಾಳಿ ನಡೆಯುತ್ತಿದ್ದು ಹೋಗಲು ಸಾಧ್ಯವಾಗುತ್ತಿಲ್ಲ. ದಿಕ್ಕು ತೋಚದೆ ರೈಲಿನಲ್ಲಿ ಹೊರಟಿದ್ದೇನೆ. ನನಗೆ ಸಹಾಯ ಮಾಡಿ’ ಎಂದು ಅನೈನಾ ಮಂಗಳವಾರ “ಉದಯವಾಣಿ ಜತೆ ಹೇಳಿಕೊಂಡಿದ್ದಾರೆ.

ಸ್ಲೊವಾಕಿಯಾದಲ್ಲಿ ತಡೆ?
ಝಾಪೊರಿಝಿಯಾ ನಗರದಲ್ಲಿ ವಾಸ ವಿದ್ದ ಮಂಗಳೂರು ಬಿಕರ್ನಕಟ್ಟೆಯ ಪೃಥ್ವಿ ರಾಜ್‌ ರವಿವಾರವೇ ರೈಲಿನಲ್ಲಿ ಸ್ಲೊವಾಕಿ ಯಾಕ್ಕೆ ಹೊರಟಿದ್ದು ಇನ್ನೂ ಅಲ್ಲಿಗೆ ತಲುಪಿದ ಮಾಹಿತಿ ಮನೆಯ ವರಿಗೆ ಸಿಕ್ಕಿಲ್ಲ. ಪೃಥ್ವಿರಾಜ್‌ ಮತ್ತು ನಾವು ರೈಲಿನಲ್ಲೇ ಇದ್ದೇವೆ ಎಂದು ಸಹಪಾಠಿ ಯೋರ್ವರು ಇನ್‌ಸ್ಟಾಗ್ರಾಂ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ರೈಲನ್ನು ಸ್ಲೊವಾಕಿಯಾದಲ್ಲಿ ಮಿಲಿಟರಿ ಯವರು ತಡೆದಿದ್ದಾರೆ ಎಂಬ ಸುದ್ದಿಗಳು ಬರುತ್ತಿವೆ. ನಮಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ ಎಂದು ಪೃಥ್ವಿರಾಜ್‌ ಸಹೋದರಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಕೀವ್‌ ನಗರದಲ್ಲಿರುವ ಟವರ್‌ ಧ್ವಂಸ; ಎಲ್ಲ ಟಿವಿ ಚಾನೆಲ್‌ ಬಂದ್‌

Advertisement

ರಾಯಭಾರ ಕಚೇರಿಯಿಂದ ಬಸ್‌
ಮಂಗಳೂರಿನ ವಿದ್ಯಾರ್ಥಿಗಳಾದ ಸಾಕ್ಷಿ ಸುಧಾಕರ್‌ ಮಾಲ್ಡೋವಾಕ್ಕೆ ಬಸ್‌ನಲ್ಲಿ ಹೊರಟಿದ್ದಾರೆ. ಕ್ಲೇಟನ್‌ ಮತ್ತು ಅನ್ಶಿತಾ ಅವರನ್ನು ಭಾರತೀಯ ರಾಯಭಾರ ಕಚೇರಿಯವರು ಗಡಿಯತ್ತ ಕರೆದೊಯ್ಯುತ್ತಿದ್ದಾರೆ ಎಂದು ಅವರ ಮನೆಯವರು ತಿಳಿಸಿದ್ದಾರೆ. ಅವರು ಸ್ಲೊವಾಕಿಯಾಕ್ಕೆೆ ಹೋಗಿ ಅಲ್ಲಿಂದ ವಿಮಾನವೇರುವ ಸಾಧ್ಯತೆ ಇದೆ.

ಮಾಲ್ಡೋವಾದತ್ತ ಲಾಯ್ಡ ಪಿರೇರಾ
ಗುರುಪುರ-ಕೈಕಂಬದ ಲಾಯ್ಡ ಪಿರೇರಾ ಉಕ್ರೇನ್‌ನ ಮಿಕಲೈವ್‌ ನಗರದ ಹಾಸ್ಟೆಲ್‌ನಿಂದ ಬಸ್‌ನಲ್ಲಿ ಮಾಲ್ಡೋವಾದತ್ತ ಹೊರಟಿದ್ದಾರೆ. “ನಾವೇ ಬಸ್‌ ವ್ಯವಸ್ಥೆ ಮಾಡಿಕೊಂಡು ಹೊರಟಿದ್ದೇವೆ. ಕೆಲವು ಮಂದಿ ಬಸ್‌ ಇಲ್ಲದೆ ಬಾಕಿಯಾಗಿದ್ದಾರೆ. ನಮ್ಮ ಬಸ್‌ ಸಾಗುವಾಗಲೂ ಕೆಲವು ಕಡೆ ದಾಳಿ ನಡೆಯುತ್ತಿರುವುದು ಕಾಣಿಸಿದೆ. ಮಾಲ್ಡೋವ್‌ನಲ್ಲಿ ವಿಮಾನ ವ್ಯವಸ್ಥೆ ಇದೆಯೇ ಎಂಬುದು ಸ್ಪಷ್ಟವಾಗಿಲ್ಲ’ ಎಂದು ಲಾಯ್ಡ “ಉದಯವಾಣಿ’ಗೆ ತಿಳಿಸಿದ್ದಾರೆ.

12 ಮಂದಿ ನೇರ ಸಂಪರ್ಕದಲ್ಲಿ: ಡಿಸಿ
ಉಕ್ರೇನ್‌ನಲ್ಲಿ ಸದ್ಯ ದ.ಕ. ಜಿಲ್ಲೆಯ 18 ಮಂದಿ ಸಿಲುಕಿರುವ ಮಾಹಿತಿ ಲಭಿಸಿದೆ. 12 ಮಂದಿ ಹಾಗೂ ಅವರ ಕುಟುಂಬಸ್ಥರು ಜಿಲ್ಲಾಡಳಿತದೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ಉಳಿದ 6 ಮಂದಿ ಸ್ಟೇಟ್‌ ಏಜೆನ್ಸಿಯ ಜತೆ ಸಂಪರ್ಕದಲ್ಲಿದ್ದಾರೆ. ಹಲವರು ರೈಲು, ಬಸ್‌ಗಳ ಮೂಲಕ ಗಡಿಯತ್ತ ಪ್ರಯಾಣ ಬೆಳೆಸಿದ್ದಾರೆ. ಎಲ್ಲರನ್ನೂ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕ ಮಾಡಿಸಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲೆಯಲ್ಲಿರುವ ಈ ವಿದ್ಯಾರ್ಥಿಗಳ ಹೆತ್ತವರಿಗೆ ಧೈರ್ಯ ತುಂಬಲು ತಹಶೀಲ್ದಾರರನ್ನು ಕಳುಹಿಸಿಕೊಡಲಾಗಿದೆ. ಎಲ್ಲ ಪೋಷಕರೊಂದಿಗೆ ವರ್ಚುವಲ್‌ ಸಭೆ ಆಯೋಜಿಸಿ ಜಿಲ್ಲಾಡಳಿತದಿಂದ ಧೈರ್ಯ ತುಂಬುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next