ಇಂಗ್ಲೆಂಡ್: 2015ರಿಂದ 2016ರಲ್ಲಿ ಇಂಗ್ಲೆಂಡ್ ನ ಚೆಸ್ಟೇರ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಕೆ ಏಳು ನವಜಾತ ಶಿಶುಗಳನ್ನು ಹತ್ಯೆಗೈದಿರುವ ಆಘಾತಕಾರಿ ಘಟನೆ ತಡವಾಗಿ ವರದಿಯಾಗಿದೆ.
ಇದನ್ನೂ ಓದಿ:Australia; ಗಾಯಾಳು ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್ ದ. ಆಫ್ರಿಕಾ ಪ್ರವಾಸಕ್ಕಿಲ್ಲ
33 ವರ್ಷದ ಹಂತಕಿಯನ್ನು ನರ್ಸ್ ಲೂಸಿ ಲೆಟ್ಬೈ ಎಂದು ಗುರುತಿಸಲಾಗಿದೆ. ಈ ನರರೂಪದ ರಾಕ್ಷಸಿ ಐದು ಗಂಡು ಶಿಶು ಹಾಗೂ ಎರಡು ಹೆಣ್ಣು ಕಂದಮ್ಮಗಳ ಜೀವ ತೆಗೆದಿದ್ದಲ್ಲದೇ, ಆರು ಶಿಶುಗಳನ್ನು ಹತ್ಯೆಗೈಯಲು ಯತ್ನಿಸಿದ್ದ ಅಂಶ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ವರದಿಯ ಪ್ರಕಾರ, ನವಜಾತ ಶಿಶುಗಳಿಗೆ ಹಾಲು, ಇಂಜೆಕ್ಷನ್ ಮೂಲಕ ವಿಷವುಣಿಸುವುದು ಸೇರಿದಂತೆ ಹಲವಾರು ತಂತ್ರಗಾರಿಕೆಯಿಂದ ನರ್ಸ್ ಲೂಸಿ ನವಜಾತ ಶಿಶುಗಳ ಪ್ರಾಣ ಹರಣ ಮಾಡಿರುವುದಾಗಿ ವಿವರಿಸಿದೆ.
ನರ್ಸ್ ವಿರುದ್ಧ ಕಾನೂನು ಕ್ರಮ ಜಾರಿಯಲ್ಲಿದ್ದು, ಕೋರ್ಟ್ ದೋಷಿ ಎಂದು ತೀರ್ಪು ನೀಡಿರುವುದಾಗಿ ವರದಿ ತಿಳಿಸಿದ್ದು, ಆಕೆ ಸಹೋದ್ಯೋಗಿಗಳ ಜತೆ ನಡೆಸಿದ ಸಂದೇಶಗಳ ಚಾಟ್ಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವು ಕಳವಳ ಹುಟ್ಟಿಸುವಂತಿದೆ ಎಂದು ವರದಿ ಹೇಳಿದೆ.
ಆಸ್ಪತ್ರೆಯಲ್ಲಿ ಸರಣಿಯಾಗಿ ನವಜಾತ ಶಿಶುಗಳು ಮರಣ ಹೊಂದುತ್ತಿರುವುದನ್ನು ಗಮನಿಸಿ ಕಳವಳ ವ್ಯಕ್ತವಾಗುತ್ತಿದ್ದಂತೆಯೇ ಈ ಬಗ್ಗೆ ಮೊದಲು ಗಮನ ಸೆಳೆದವರು ಬ್ರಿಟನ್ ಸಂಜಾತ ಭಾರತೀಯ ಮೂಲದ ಬ್ರಿಟನ್ ವೈದ್ಯ ಡಾ.ರವಿ ಜಯರಾಮ್. 2015ರಲ್ಲಿ ಮೂರು ನವಜಾತ ಶಿಶುಗಳು ಸಾವನ್ನಪ್ಪಿದ್ದ ಘಟನೆಗೆ ಸಂಬಂಧಿಸಿದಂತೆ ರವಿ ಜಯರಾಮ್ ಅವರು ಬ್ರಿಟನ್ ನ್ಯೂಸ್ ಟೆಲಿವಿಷನ್ ಚಾನೆಲ್ ಐಟಿವಿ ನ್ಯೂಸ್ ಜತೆ ಮಾತನಾಡುತ್ತಾ ವಿಷಯ ಪ್ರಸ್ತಾಪಿಸಿದ್ದರು. ಹೀಗೆ ಆರೋಪಿ ನರ್ಸ್ ಲೂಸಿಯನ್ನು ಬಂಧಿಸುವಲ್ಲಿ ನೆರವು ನೀಡಿರುವುದಾಗಿ ವರದಿ ವಿವರಿಸಿದೆ.