Advertisement

ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬಿಎಸ್ ವೈ ಕ್ರಮಗಳಿಗೆ ಇಂಗ್ಲೆಂಡಿನ ಸಚಿವರ ಮೆಚ್ಚುಗೆ

12:49 PM Apr 27, 2020 | keerthan |

ಬೆಂಗಳೂರು: ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಲಾಕ್ ಡೌನ್ ಅನುಷ್ಠಾನದ ಮೂಲಕ ಕೋವಿಡ್ 19ರ ಪರಿಣಾಮಕಾರಿ ನಿಯಂತ್ರಣದ ಕುರಿತು ಇಂಗ್ಲೆಂಡಿನ ಲಾರ್ಡ್ ಚಾನ್ಸಲರ್ ಮತ್ತು ಕಾನೂನು ಸಚಿವ ರಾಬರ್ಟ್ ಬಕ್ಲೆಂಡ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಮುಖ್ಯಮಂತ್ರಿ ಬಿಎಸ್ ವೈ ಶನಿವಾರ ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಬರ್ಟ್ ಬಕ್ಲೆಂಡ್ ಅವರು ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಕುರಿತು ಮಾಹಿತಿ ಪಡೆದುಕೊಂಡರು. ಅವರ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಲಾಕ್ ಡೌನ್ ನ ಪರಿಣಾಮಕಾರಿ ಅನುಷ್ಠಾನ, ಅಬಾಧಿತ ಆಹಾರ ಮತ್ತಿತರ ಅಗತ್ಯ ವಸ್ತುಗಳ ಪೂರೈಕೆ ವ್ಯವಸ್ಥೆ ಮತ್ತು ಯಾರೂ ಹಸಿದುಕೊಂಡಿರಬಾರದು ಎಂಬ ಸರ್ಕಾರದ ಕಾಳಜಿಯಿಂದಾಗಿ ಜನರೂ ಸಹಕರಿಸುತ್ತಿದ್ದಾರೆ ಎಂದು ವಿವರಿಸಿದರು.

ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ಆರ್ಥಿಕ ಚಟುವಟಿಕೆಗಳನ್ನು ಹಂತ ಹಂತವಾಗಿ ಮರು ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ 19 ಸೋಂಕು ಹರಡದೆ ಇರುವ ಬಗ್ಗೆ ಬಕ್ಲೆಂಡ್ ಅವರು ಸಮಾಧಾನ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕನ್ನಡಿಗರೊಂದಿಗೆ ಸಂವಾದ ನಡೆಸಿದ ಮುಖ್ಯಮಂತ್ರಿಗಳು, ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು, ತಮ್ಮ ಹೆತ್ತವರು, ಪೋಷಕರ ಕುರಿತು ಆತಂಕ ಪಡಬೇಕಾಗಿಲ್ಲ. ಸರ್ಕಾರದ ಸಹಾಯವಾಣಿಗಳಿಗೆ ಸಂಪರ್ಕಿಸಿದರೆ, ಕೂಡಲೇ ಅವರಿಗೆ ವೈದ್ಯಕೀಯ ಅಥವಾ ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಶೈಕ್ಷಣಿಕ ಸಾಲ ಪಡೆದು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಾಲ ಮರು ಪಾವತಿ ಸಮಸ್ಯೆಗಳ ಕುರಿತು ಕೋವಿಡ್ 19 ನಿಯಂತ್ರಣಕ್ಕೆ ಬಂದ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿದೇಶಗಳಲ್ಲಿ ಸಿಲುಕಿಕೊಂಡ ಕನ್ನಡಿಗರನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಅಂತರರಾಷ್ಟ್ರೀಯ ವಿಮಾನ ಸಂಚಾರ ಪ್ರಾರಂಭವಾದ ನಂತರ ಭಾರತ ಸರ್ಕಾರದೊಂದಿಗೆ ಸಮನ್ವಯ ವಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು

Advertisement

Udayavani is now on Telegram. Click here to join our channel and stay updated with the latest news.

Next