ನವದೆಹಲಿ: ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್ ಮೋದಿಯ ಜಾಮೀನು ಅರ್ಜಿಯನ್ನು ಯುಕೆ(ಯುನೈಟೆಡ್ ಕಿಂಗ್ ಡಮ್) ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಗುಜರಾತ್ ಮೂಲದ ವಜ್ರದ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ 13,500 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಡಿಪಾರು ವಿಚಾರದಲ್ಲಿ ಯುಕೆ ಕೋರ್ಟ್ ಮೆಟ್ಟಿಲೇರಿದ್ದು, ಅದರ ವಿಚಾರಣೆ ನಡೆಯುತ್ತಿದೆ.
ಮಾರ್ಚ್ 19ರಂದು ಸ್ಕಾಟ್ ಲ್ಯಾಂಡ್ ಯಾರ್ಡ್ ಅಧಿಕಾರಿಗಳು ಹಾಗೂ ಸೆಂಟ್ರಲ್ ಲಂಡನ್ ಪೊಲೀಸರಿಗೆ ಸೆರೆ ಸಿಕ್ಕಿದ್ದ ನೀರವ್ ಮೋದಿ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾನೆ. ಅರ್ಜಿಯ ಮುಂದಿನ ವಿಚಾರಣೆಯನ್ನು ಮೇ 24ರಂದು ನಡೆಸುವುದಾಗಿ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ಸ್ ಕೋರ್ಟ್ ತಿಳಿಸಿದ್ದು, ಈ ನಿಟ್ಟಿನಲ್ಲಿ ನೀರವ್ ಮೋದಿ ಮೇ 24ರವರೆಗೆ ಜೈಲಿನಲ್ಲಿ ಕಾಲಕಳೆಯಬೇಕಾಗಿದೆ. ಮೇ 30ರಂದು ಪೂರ್ಣ ಪ್ರಮಾಣದ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ.
ನೀರವ್ ಮೋದಿಯ ಜಾಮೀನು ಅರ್ಜಿಯನ್ನು ಕೋರ್ಟ್ ಮೂರು ಬಾರಿ ತಿರಸ್ಕರಿಸಿದೆ. ಮಾರ್ಚ್ 20ರಂದು ನೀರವ್ ಮೋದಿ ಕುರಿತ ವಿಚಾರಣೆ ವೇಳೆ ಡಿಸ್ಟ್ರಿಕ್ಟ್ ಜಡ್ಜ್ ಮಾರೈ ಮಾಲ್ಲೊನ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದರು.