ಜೀವನ್ಮುಕ್ತಿಯ ಪುಣ್ಯತಾಣ ಶ್ರೀಮದುಜ್ಜಯಿನಿ ಸದ್ಧರ್ಮ ಪೀಠದ ಆಚರಣೆಯಲ್ಲಿ ಬಹುಮುಖ್ಯವಾದದ್ದು ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ತೈಲಾಭಿಷೇಕ. ಬಹು ವಿಶಿಷ್ಟ ಹಾಗೂ ಅತ್ಯಂತ ವೈಭವಪೂರ್ಣವಾಗಿ ಜರುಗುವ ಈ ಕಾರ್ಯಕ್ರಮ ಭಾವೈಕ್ಯತೆಯ ಬೆಸುಗೆಯಾಗಿದೆ.
ಈ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಮ್ಮ ಪೀಠ ಪರಂಪರೆಯೊಂದಿಗೆ ಜನಪರ ಕಾರ್ಯಶೀಲತೆಯನ್ನು ತಮ್ಮದಾಗಿಸಿಕೊಂಡು ಮಾನವ ಧರ್ಮವನ್ನು ಎತ್ತಿ ಹಿಡಿಯುವ ಕಾರ್ಯವನ್ನು ಅತ್ಯಂತ ಮೌಲಿಕವಾಗಿ ನೆರವೇರಿಸಿಕೊಂಡು ಬರುತ್ತಿದ್ದಾರೆ. ದೇಶ-ವಿಶ್ವ ಕಲ್ಯಾಣ ರಾಷ್ಟ್ರವಾಗಲಿ, ಜನತೆಯ ದುಃಖ ದೂರವಾಗಲಿ, ಸರ್ವರೂ ಸುಖೀಗಳಾಗಿ ಬದುಕಿ-ಬಾಳಲಿ ಎಂಬ ಮಹಾದಾಶಯ ಇಟ್ಟುಕೊಂಡು ಮಹಾರಥೋತ್ಸವ ಕಾರ್ಯ ಕ್ರಮಗಳನ್ನು ನಡೆಸಿಕೊಡುತ್ತಾರೆ.
ಮೇ 6 ರಂದು ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿಯ ಮಹಾರಥೋತ್ಸವ ನಾಡಿನ ಲಕ್ಷಾಂತರ ವಿವಿಧ ಜಾತಿ-ಧರ್ಮ-ಪಂಥ-ಪಂಗಡದವರ ಉಪಸ್ಥಿತಿಯಲ್ಲಿ, ಸಾವಿರಾರು ಶಿವಾಚಾರ್ಯರ ನೇತೃತ್ವದಲ್ಲಿ, ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ನಡೆಯಲಿದೆ. ವಿವಿಧ ಜಾನಪದ ಕಲಾಮೇಳದೊಂದಿಗೆ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ಉತ್ಸವಮೂರ್ತಿ ಹಾಗೂ ಪ್ರಸ್ತುತ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನಿಧ್ಯದಲ್ಲಿ ಸಾಲಾಂಕೃತ ವರ್ಣರಂಜಿತ ಭವ್ಯ ರಥ ಉಜ್ಜಯಿನಿ ಪೀಠದ ಪರಿಸರದಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ಎಳೆಯಲ್ಪಡುತ್ತದೆ. ಅಂದು ಸಂಜೆ ಜಗದ್ಗುರುಗಳ ಸಾನಿಧ್ಯದಲ್ಲಿ ಶ್ರೀ ದಾರುಕಾಚಾರ್ಯರ ಜಯಂತಿ ಯುಗಮಾನೋತ್ಸವ ಅತ್ಯಂತ ಅರ್ಥಪೂರ್ಣವಾಗಿ ಜರುಗುತ್ತದೆ.
ಮೇ 7 ರಂದು ಶನಿವಾರ ಸಂಜೆ ನಾಲ್ಕು ಗಂಟೆಗೆ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೇವಾಲಯದ ಗೋಪುರದ ಶಿಖರಕ್ಕೆ ತೈಲಾಭಿಷೇಕವನ್ನು ನೆರವೇರಿಸಲಾಗುತ್ತದೆ. ನಾಡಿನ ಮೂಲೆ-ಮೂಲೆಗಳಿಂದ ಆಗಮಿಸುವ ಭಕ್ತಾದಿಗಳು ಹಾಗೂ ಜರಿಮಲೆ ರಾಜವಂಶಸ್ಥರಿಂದ ಅತ್ಯಂತ ಶ್ರದ್ಧಾಪೂರ್ವಕವಾಗಿ ಶಿಖರಕ್ಕೆ ತೈಲ ಎರೆಯಲಾಗುತ್ತದೆ.
ಮೇ 8 ಭಾನುವಾರ ಜಂಗಮ ವಟುಗಳಿಗೆ ಹಾಗೂ ವೀರಶೈವ ಧರ್ಮ ಸಂಸ್ಕೃತಿ ಪ್ರಚಾರ ಮಾಡುವ ವೀರಮಾಹೇಶ್ವರರಿಗೆ ನಾಡಿನ ಹರಗುರು ಚರಮೂರ್ತಿಗಳ ಸಮ್ಮುಖ, ಶಿವಾಚಾರ್ಯರ ನೇತೃತ್ವದಲ್ಲಿ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ ಮತ್ತು ಧರ್ಮೋಪದೇಶ ಶಾಸ್ತ್ರೋಕ್ತವಾಗಿ ನೆರವೇರಲಿದೆ.
ಮೇ 10 ಮಂಗಳವಾರ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ಆಘ್ರವಣೆ ನೀಡುವ ಮುಖೇನ ಕಂಕಣ ವಿಸರ್ಜನೆ ಹಾಗೂ ದೇವಾಲಯ ಶುದ್ಧೀಕರಣ ಮಾಡಲಾಗುತ್ತದೆ. ಈ ನಾಡಿನ ರೈತರಿಗೆ ಶ್ರೀ ಮರುಳಸಿದ್ದೇಶ್ವರ ಕೃಪೆ ಇದ್ದರೆ ಮಳೆ-ಬೆಳೆ ಸಮೃದ್ಧವಾಗಿ ಬರುತ್ತದೆ ಎಂಬ ಗಾಢನಂಬಿಕೆ ಬಹಳ ಹಿಂದಿನಿಂದಲೂ ಬಂದಿದೆ. ಅದರಂತೆ ಪ್ರತಿ ವರ್ಷ ಬರುವ ಫಸಲಿನ ದವಸ-ಧಾನ್ಯಗಳನ್ನು ಶ್ರೀ ಸ್ವಾಮಿಗೆ ಅರ್ಪಿಸಿ ನಂತರ ಬಳಸುವುದು ರೈತರ ವಾಡಿಕೆಯಾಗಿದೆ ಆ ಪದ್ಧತಿ ಈಗಲೂ ಮುಂದುವರಿಯುತ್ತಿದೆ.