ಬೆಳ್ತಂಗಡಿ: ನಾವು ಕಾವ್ಯವನ್ನು ಅರ್ಥೈಸುವಾಗ ಕವಿಯ ಹಾಗೂ ಆತನ ಸ್ವಭಾವದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಇದರಿಂದ ಅವರ ರಚನೆಯ ನೈಜತೆ ಅರಿತುಕೊಳ್ಳಲು ಸಾಧ್ಯ ಎಂದು ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ| ಪಿ.ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ನಡೆದ ಯಕ್ಷಮಂಗಳ ಪ್ರಚಾರೋಪನ್ಯಾಸದಲ್ಲಿ ‘ಮುದ್ದಣ’ ಕವಿಯ ಕುರಿತು ಮಾತನಾಡಿದರು.
ಎಷ್ಟೋ ಸಂದರ್ಭಗಳಲ್ಲಿ ಕವಿಗಳು ಅಜ್ಞಾತರಾಗಿಯೇ ಉಳಿಯುತ್ತಾರೆ, ಇನ್ನು ಕೆಲವು ಸಂದರ್ಭದಲ್ಲಿ ಬರೆದದ್ದು ಯಾರೋ ಕೀರ್ತಿ ಯಾರಿಗೋ ಸಲ್ಲುತ್ತದೆ. ಹಾಗೆಯೇ ಹಿಂದೆ ಯಕ್ಷಗಾನ ಕ್ಷೇತ್ರದಲ್ಲಿ ಕೂಡ ಇಂತಹ ಹಲವಾರು ಮಹಾನ್ ಕವಿಗಳು ಇದ್ದರೂ ಅಜ್ಞಾತರಾಗಿ ಉಳಿದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಟಿ.ಎನ್. ಕೇಶವ ಅವರು, ಕರಾವಳಿಯ ಜನರಿಗೆ ಯಕ್ಷಗಾನದ ಮೂಲಕ ಪುರಾಣ ಜ್ಞಾನವನ್ನು ಅಂದಿನ ಕಾಲದಲ್ಲೇ ಪಡೆದುಕೊಳ್ಳಲು ಸಾಧ್ಯ. ಸರ್ವಾಂಗೀಣ ಕಲೆ ಎಂದೆನಿಕೊಂಡಿರುವ ಯಕ್ಷಗಾನವು ನಮ್ಮ ಸಾಂಸ್ಕೃತಿಕತೆಯ ಹೆಗ್ಗುರುತಾಗಿದೆ ಎಂದರು.
ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ| ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರವು ಯಕ್ಷಗಾನದ ಉಳಿವಿಗೆ ಈಗಾಗಲೇ ಹಲವು ಯೋಜನೆ ರೂಪಿಸಿಕೊಂಡು ಮುನ್ನಡೆಯುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಡಾ| ಮಾಲಿನಿ, ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ| ಬಿ.ಪಿ. ಸಂಪತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.