ಬೆಳಗಾವಿ: ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳವರೆಗೆ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2.27 ಲಕ್ಷ ಉಜ್ವಲ ಯೋಜನೆ ಫಲಾನುಭವಿಗಳು ಇದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಜನರು ಸಂಕಷ್ಟ ಪಡಬಾರದು ಎಂಬ ಉದ್ದೇಶದಿಂದ ಉಚಿತ ಸಿಲಿಂಡರ್ ವಿತರಿಸಲು ನಿರ್ಣಯಿಸಿದೆ. ಫಲಾನುಭವಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮಹಾಮಾರಿ ಕೋವಿಡ್ 19 ಭೀತಿ ಮಧ್ಯೆಯೂ ಮನೆ ಮನೆಗೆ ಸಿಲಿಂಡರ್ ಪೂರೈಸುತ್ತಿರುವ ಕಾರ್ಮಿಕರಿಗೆ ಸಂಕಷ್ಟ ಸ್ಥಿತಿಯಲ್ಲಿ 5ಲಕ್ಷ ರೂ. ನೆರವು ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಸಿಲಿಂಡರ್ ಪೂರೈಸುವ ಕಾರ್ಮಿಕರಿಗೆ ನೆರವಾಗಲು ಈ ಯೋಜನೆ ಇದೆ. ಕೋವಿಡ್ 19 ವಾರಿಯರ್ಸ್ ಆಗಿ ದುಡಿಯುತ್ತಿರುವ ಇಂಥವರ ನೆರವಿಗೆ ನಿಂತು ಕೆಲಸ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಹೀಗಾಗಿ ಇಂಥ ಯೋಜನೆ ರೂಪಿಸಿದೆ ಎಂದರು.
ಹೆಸ್ಕಾಂ ಸಿಬ್ಬಂದಿ ಹಗಲಿರುಳು ಎನ್ನದೇ ಕೋವಿಡ್ 19 ಭೀತಿ ಮಧ್ಯೆಯೂ ಕೆಲಸ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಹೆಸ್ಕಾಂ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಟ್ರಾನ್ಸ್‌ಫಾರ್ಮರ್ ಜೋಡಿಸುವ ಕೆಲಸದಲ್ಲಿ ನಿರತರಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಲಾಕ್‌ಡೌನ್ ಅವ ಧಿಯಲ್ಲಿಯೂ ಹೆಸ್ಕಾಂ ಸಿಬ್ಬಂದಿ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.
ಕೋವಿಡ್ 19 ಲಾಕ್‌ಡೌನ್ ವೇಳೆ ದೇಶಾದ್ಯಂತ ಅಗತ್ಯ ಇರುವ ಇಲಾಖೆಗಳ ಸಿಬ್ಬಂದಿ ಪರಸ್ಪರ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸುವುದರ ಜತೆಗೆ ಕೋವಿಡ್ 19 ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ ಎಂದರು.