“ಇಡೀ ಚಿತ್ರದಲ್ಲಿ ರೂಪಕಗಳು ಜಾಸ್ತಿ ಇರುತ್ತದೆ. ಇದೊಂದು ಪಕ್ಕಾ ಮನರಂಜನೆಯ ಸಿನಿಮಾ..’ – ಹೀಗೆ ಹೇಳಿ ನಕ್ಕರು ಉಪೇಂದ್ರ. ಅದಕ್ಕೆ ಕಾರಣ “ಯು-ಐ’ ಸಿನಿಮಾ.
ನಿರ್ದೇಶಕರಾಗಿ ಉಪೇಂದ್ರ ಹೊಸದನ್ನು ನೀಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಅವರ ನಿರ್ದೇಶನದ ಸಿನಿಮಾಗಳು ಕಣ್ಣ ಮುಂದಿವೆ. ಈಗ ಮತ್ತೆ ಅವರ ನಿರ್ದೇಶನದ “ಯು-ಐ’ ತೆರೆಗೆ ಬರಲು ಸಿದ್ಧವಾಗಿದೆ.
ಇತ್ತೀಚೆಗೆ ಚಿತ್ರದ ವಾರ್ನರ್ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದಾಗ ಉಪೇಂದ್ರ 2040ರ ಭಾರತದ ಕಥೆ ಹೇಳಿರುವುದು ಕಾಣುತ್ತದೆ. ಈ ಹಿಂದೆ ಅವರದ್ದೇ ನಿರ್ದೇಶನದ “ಸೂಪರ್’ ಚಿತ್ರದಲ್ಲಿ 2030ರ ಭಾರತದ ಬಗ್ಗೆ ಹೇಳಿದ್ದರು. ಈ ಮೂಲಕ ಮತ್ತೂಮ್ಮೆ ಭವಿಷ್ಯದ ಸಮಾಜವನ್ನು ತಮ್ಮದೇ ಶೈಲಿಯಲ್ಲಿ ಹೇಳಲು ಹೊರಟಿದ್ದಾರೆ.
ಈ ಕುರಿತು ಮಾತನಾಡುವ ಉಪೇಂದ್ರ,”ಇದು ಸೂಪರ್ ಚಿತ್ರದ ಮುಂದುವರೆದ ಭಾಗವಲ್ಲ. 2040ರ ಹೊತ್ತಿಗೆ ಏನಾಗಬಹುದು ಎಂದು ಸಾಂಕೇತಿಕವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಅದರ ಜೊತೆಗೆ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಅದನ್ನು ಪ್ರೇಕ್ಷಕರು ಹೇಗೆ ಅರ್ಥೈಸುತ್ತಾರೆ ಎಂಬುದನ್ನು ಅವರವರಿಗೆ ಬಿಟ್ಟಿದ್ದು. ಈ ಚಿತ್ರದ ಮೂಲಕ ಪ್ರತಿಯೊಬ್ಬರೂ ತಮ್ಮನ್ನು ತಾವು ನೋಡಿಕೊಳ್ಳುತ್ತಾರೆ’ ಎನ್ನುತ್ತಾರೆ.
“ಯು-ಐ’ ಕೇವಲ ನನ್ನೊಬ್ಬನ ಕಥೆಯಲ್ಲ. ನಮ್ಮ ನಿಮ್ಮೆಲ್ಲರ ಕಥೆ ಎನ್ನಲು ಉಪೇಂದ್ರ ಮರೆಯುವುದಿಲ್ಲ. “ಇದು ಒಬ್ಬ ಹೀರೋನ ಕಥೆಯಾದರೂ, ನಮ್ಮ-ನಿಮ್ಮೆಲ್ಲರ ಕಥೆ ಆಗಿರುತ್ತದೆ. ಇಲ್ಲಿ ಪ್ರತಿಯೊಬ್ಬರೂ ಅವರನ್ನು ಆ ಪಾತ್ರದಲ್ಲಿ ನೋಡಿಕೊಳ್ಳಬೇಕು. ಈ ಚಿತ್ರದ ಮೂಲಕ ಕೋಟ್ಯಂತರ ಹೀರೋ ಸೃಷ್ಟಿ ಮಾಡುವ ಪ್ರಯತ್ನ ನನ್ನದು. ಒಂದು ಮನರಂಜನಾತ್ಮಕ ಕಥೆಯ ಜೊತೆಗೆ ಬೇರೊಂದು ಹೇಳುವ ಪ್ರಯತ್ನ ಮಾಡಿದ್ದೇನೆ. ಚಿತ್ರದಲ್ಲಿ ಸಾಕಷ್ಟು ಅಚ್ಚರಿಗಳಿವೆ. ಅದು ಜನರಿಗೆ ಅರ್ಥವಾಗುತ್ತದೆ, ಇಷ್ಟವಾಗುತ್ತದೆ ಎಂಬ ನಂಬಿಕೆಯೂ ಇದೆ. ಜನರನ್ನು ಖುಷಿಪಡಿಸುವುದಷ್ಟೇ ನಮ್ಮ ಉದ್ದೇಶ. ಅದಕ್ಕಾಗಿ ಇಡೀ ನಮ್ಮ ತಂಡ ಸಾಕಷ್ಟು ಶ್ರಮಪಟ್ಟಿದೆ’ ಎನ್ನುವುದು ಉಪೇಂದ್ರ ಮಾತು.
ಈ ಚಿತ್ರವನ್ನು ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್‌ಟೈನರ್ಸ್ ಸಂಸ್ಥೆಗಳಡಿ ಜಿ. ಮನೋ ಹರನ್ ಮತ್ತು ಶ್ರೀಕಾಂತ್ ಕೆ.ಪಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ, ನಿಧಿ ಸುಬ್ಬಯ್ಯ, ರವಿಶಂಕರ್ ಮುಂತಾದವರು ನಟಿಸಿದ್ದಾರೆ.
ರಜಾ ದಿನ ಮುಖ್ಯ
ಉಪೇಂದ್ರ ಅವರ “ಯು-ಐ’ ಡಿಸೆಂಬರ್ 20ಕ್ಕೆ ತೆರೆಕಂಡರೆ ಸುದೀಪ್ ಅವರ “ಮ್ಯಾಕ್ಸ್’ ಡಿ.25ಕ್ಕೆ ತೆರೆಕಾಣುತ್ತಿದೆ. 5 ದಿನ ಅಂತರದಲ್ಲಿ 2 ಸಿನಿಮಾ ಬರುವುದರ ಬಗ್ಗೆಯೂ ಉಪೇಂದ್ರ ಮಾತನಾಡಿದ್ದಾರೆ. “ರಜಾ ದಿನಗಳನ್ನು ಎಲ್ಲರೂ ಬಯಸುತ್ತಾರೆ. ಆ ಸಮಯದಲ್ಲಿ ಹೆಚ್ಚು ಸಿನಿಮಾ ಬರೋದು ಸಹಜ. ಎರಡು ಸಿನಿಮಾ ಅಲ್ಲ, ಮೂರು ಸಿನಿಮಾ ಬಂದ್ರು ತಡೆದುಕೊಳ್ಳುತ್ತದೆ ಎಂಬ ನಂಬಿಕೆ ಅಷ್ಟೇ. ಇಲ್ಲಿ ಕ್ಲಾಶ್ ಅನ್ನೋದು ಬರೋದಿಲ್ಲ.
ಟೀಸರ್, ಟ್ರೇಲರ್ ಇಲ್ಲದೇ ಸಿನಿಮಾ ಬಿಡಬೇಕು!
ಉಪೇಂದ್ರ ಅವರಿಗೊಂದು ಆಸೆ ಇದೆಯಂತೆ. ಅದು ಸಿನಿಮಾದ ಯಾವುದೇ ತುಣುಕುಗಳನ್ನು ಕೂಡಾ ಪ್ರೇಕ್ಷಕರಿಗೆ ತೋರಿಸದೇ ನೇರವಾಗಿ ಸಿನಿಮಾ ರಿಲೀಸ್ ಮಾಡಬೇಕೆಂಬುದು. ಮುಂದಿನ ಚಿತ್ರದಲ್ಲೇ ಅದನ್ನು ಮಾಡುವ ಪ್ರಯತ್ನ ಮಾಡುತ್ತಾರಂತೆ. ಈ ಕುರಿತು ಮಾತನಾಡುವ ಉಪೇಂದ್ರ, “ಇವತ್ತಿನ ಟ್ರೆಂಡ್‌ಗೆ ನಾವು ಟೀಸರ್, ಹಾಡು, ಟ್ರೇಲರ್ ಬಿಡುಗಡೆ ಮಾಡಿ ಜನರನ್ನು ಸೆಳೆಯಬೇಕಿದೆ. ಆದರೆ, ವೈಯಕ್ತಿಕವಾಗಿ ನನಗೆ ಇದು ಇಷ್ಟವಿಲ್ಲ. ಸಿನಿಮಾದ ಯಾವುದೇ ತುಣುಕು ತೋರಿಸದೇ ನೇರವಾಗಿ ಚಿತ್ರಮಂದಿರದಲ್ಲೇ ಎಲ್ಲವನ್ನು ತೋರಿಸಬೇಕು. ಮುಂದಿನ ಚಿತ್ರದಲ್ಲೇ ಇದನ್ನು ಮಾಡುವ ಆಸೆ ನನಗಿದೆ’ ಎನ್ನುತ್ತಾರೆ ಉಪೇಂದ್ರ.
ಎ ಸಿನಿಮಾ ಡಬ್ಟಾಅಂದ್ರು…
ಚಿತ್ರವೊಂದರ ಸೋಲು-ಗೆಲುವನ್ನು ನಿರ್ಧರಿಸೋದು ಪ್ರೇಕ್ಷಕನೇ ಹೊರತು ಬೇರಾರು ಅಲ್ಲ ಎನ್ನುವುದು ಉಪೇಂದ್ರ ಮಾತು. ಇದು ಅವರ ಅನುಭವದ ಮಾತು ಕೂಡಾ. ಈ ಕುರಿತಾಗಿ ಮಾತನಾಡುವ ಅವರು, “ನಾನು “ಎ’ ಸಿನಿಮಾ ಮಾಡಿದಾಗ ಚಿತ್ರವನ್ನು ಎಲ್ಲರೂ ಬೈದಿದ್ದರು. ನರ್ತಕಿ ಚಿತ್ರಮಂದಿರದ ಗೇಟ್ ಕೀಪರ್ ಕೂಡಾ “ಹೋಗಿ ಸಾರ್, ಎರಡು ದಿನಾನೂ ಓಡಲ್ಲ, ಯಾಕೆ ಈ ಥಿಯೇಟರ್’ ಎಂದಿದ್ದ. ಇಡೀ ಗಾಂಧಿನಗರ ಈ ಚಿತ್ರವನ್ನು ಡಬ್ಬ ಚಿತ್ರ ಎಂದಿತು. ಆದರೆ, ಚಿತ್ರ ಗೆದ್ದಿತು. ಅಂತಿಮವಾಗಿ ಪ್ರೇಕ್ಷಕ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾನೆ ಅನ್ನೋದಷ್ಟೇ ಮುಖ್ಯವಾಗುತ್ತದೆ’ ಎನ್ನುವುದು ಉಪೇಂದ್ರ ಕಂಡುಕೊಂಡ ಸತ್ಯ ರವಿಪ್ರಕಾಶ್ ರೈ