ಹೊಸದಿಲ್ಲಿ : ತಾವು ಪ್ರಕೃತ ವಾಸವಾಗಿರುವ ಸ್ಥಳದ ಸೂಕ್ತ ಪುರಾವೆ ಹೊಂದಿಲ್ಲದ ಆಧಾರ್ ಕಾರ್ಡ್‌ದಾರರು ತಮ್ಮ ಹಾಲಿ ವಾಸ್ತವ್ಯದ ವಿಳಾಸವನ್ನು ಅಪ್ ಡೇಟ್ ಮಾಡುವುದಕ್ಕೆ ಆಧಾರ್ ಪ್ರಾಧಿಕಾರ ನೀಡುವ, ಸೀಕ್ರೆಟ್ ಪಿನ್ ಹೊಂದಿರುವ, ಪತ್ರವನ್ನು ಬಳಸಿಕೊಂಡು ಅಪ್‌ಡೇಟ್ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲೇ ಪೂರ್ಣಗೊಳಿಸುವ ಸುಲಭ ವ್ಯವಸ್ಥೆ ಮುಂದಿನ ವರ್ಷ ಎಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು ಆಧಾರ್ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಪ್ರಕಟನೆ ತಿಳಿಸಿದೆ.
ಪ್ರಾಯೋಗಿಕವಾಗಿ ಈ ವಿಧಾನವನ್ನು 2019ರ ಜನವರಿ 1ರಿಂದಲೇ ಆರಂಭಿಸಲಾಗುವುದು ಎಂದು ಆಧಾರ್ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.
ಬ್ಯಾಂಕುಗಳು ಹಾಗೂ ಕ್ರೆಡಿಟ್ ಕಾರ್ಡ್ ಕಂಪೆನಿಗಳ ಯುಐಡಿಎಐ ವೆಬ್ ಸೈಟ್ ಮೂಲಕ ಆಧಾರ್ ಕಾರ್ಡ್‌ದಾರರು ರಹಸ್ಯ ಪಿನ್ ಇರುವ ಆಧಾರ್ ಪತ್ರಕ್ಕೆ ಕೋರಿಕೆ ಸಲ್ಲಿಸಬೇಕು; ಆ ಬಳಿಕ ಅವರು ಪಡೆಯುವ ಪತ್ರದಲ್ಲಿನ ಆಧಾರ್ ರಹಸ್ಯ ಪಿನ್ ಬಳಸಿಕೊಂಡು ತಮ್ಮ ಹೊಸ ವಾಸ್ತವ್ಯದ ವಿಳಾಸವನ್ನು ಆನ್‌ಲೈನ್‌ನಲ್ಲೇ ಅಪ್ ಡೇಟ್ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.
ಈಗ ಚಾಲ್ತಿಯಲ್ಲಿರುವ ಕ್ರಮದ ಪ್ರಕಾರ ಆಧಾರ್ ಕಾರ್ಡ್‌ದಾರರು ತಮ್ಮ ಈಗಿನ ವಾಸ್ತವ್ಯದ ವಿಳಾಸವನ್ನು ಅಪ್ ಡೇಟ್ ಮಾಡಲು ನಮೂದಿತ 35 ದಾಖಲೆ ಪತ್ರಗಳ ಪೈಕಿ ಯಾವುದಾದರೂ ಒಂದನ್ನು ಬಳಸಿಕೊಂಡು ನಿರ್ದಿಷ್ಟ ಅರ್ಜಿಯನ್ನು ತುಂಬಿ, ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಈ 35 ದಾಖಲೆ ಪತ್ರಗಳ ಪೈಕಿ ಪಾಸ್ ಪೋರ್ಟ್, ಬ್ಯಾಂಕ್ ಪಾಸ್ ಬುಕ್, ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್, ನೋಂದಾಯಿತ ಬಾಡಿಗೆ ಕರಾರು ಪತ್ರ, ಮದುವೆ ಸರ್ಟಿಫಿಕೇಟ್‌ಗಳು ಸೇರಿವೆ.