ಬೆಂಗಳೂರು: ವಿಧಾನಸಭೆ ಮೊಗಸಾಲೆಗೆ ಪ್ರವೇಶಿಸಲು ಅಡ್ಡಿಯೊಡ್ಡಿದ ಮಾರ್ಷಲ್‌ಗಳಿಗೆ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವಾಜ್ ಹಾಕಿದ ಪ್ರಕರಣ ನಡೆಯಿತು. ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ವಿಶ್ವಾಸ ಮತ ಯಾಚಿಸಲು ಮುಂದಾಗಿದ್ದರಿಂದ ವಿಧಾನಸಭೆ ಪ್ರವೇಶಕ್ಕೆ ಸಾಕಷ್ಟು ಭದ್ರತೆ ಒದಗಿಸಲಾಗಿತ್ತು.
ವಿಧಾನಸಭೆ ಮೊಗಸಾಲೆಗೂ ಹಾಲಿ ಶಾಸಕರು ಮತ್ತು ಪತ್ರಕರ್ತರನ್ನು ಹೊರತುಪಡಿಸಿ ವಿಧಾನ ಪರಿಷತ್ ಸದಸ್ಯರಿಗೂ ಪ್ರವೇಶ ನಿರಾಕರಿಸಲಾಗಿತ್ತು. ಆದರೆ, ಬಿಜೆಪಿ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಅನಂತಕುಮಾರ್, ಸದಾನಂದಗೌಡ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್ ಕೂಡ ವಿಧಾನಸಭೆ ಮೊಗಸಾಲೆಗೆ ಪ್ರವೇಶಿಸಿ, ಮುಖ್ಯಮಂತ್ರಿ ಕಚೇರಿಯಲ್ಲಿ ಕುಳಿತು ಕಾರ್ಯ ಕಲಾಪ ವೀಕ್ಷಣೆ ಮಾಡುತ್ತಿದ್ದರು.
ಅಲ್ಲದೇ ವಿಶ್ವಾಸ ಮತ ಗಳಿಸುವ ಕಾರ್ಯತಂತ್ರವನ್ನೂ ನಡೆಸುತ್ತಿದ್ದರು. ಇದನ್ನು ಗಮನಿಸಿದ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ವಿಧಾನಸಭೆ ಮೊಗಸಾಲೆಗೆ ಪ್ರವೇಶ ಪಡೆಯಲು ಮುಂದಾದಾಗ ಮಾರ್ಷಲ್‌ಗಳು ಅವರ ಪ್ರವೇಶಕ್ಕೆ ತಡೆಯೊಡ್ಡಿದರು.
ಇದರಿಂದ ಕುಪಿತಗೊಂಡ ವಿ.ಎಸ್.ಉಗ್ರಪ್ಪ ಬಿಜೆಪಿಯ ನಾಯಕರಿಗೆ ಹೇಗೆ ಒಳ ಬರಲು ಅವಕಾಶ ಕಲ್ಪಿಸಿದ್ದೀರಿ, ಅವರಿಗೊಂದು ನಮಗೊಂದು ನೀತಿ ಏಕೆ ಎಂದು ಮಾರ್ಷಲ್‌ಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಮಾರ್ಷಲ್‌ಗಳು ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರನ್ನು ಒಳಗೆ ಬಿಟ್ಟರು.
ಡಿಕೆಶಿ ಹೊಣೆಗಾರಿಕೆ: ಪ್ರಮಾಣ ವಚನ ವೇಳೆ ವಿಧಾನಸಭೆಯಲ್ಲಿ ರೇಷ್ಮೆ ಪಂಚೆ ಹಾಗೂ ಜುಬ್ಬ ಧರಿಸಿ ಬಂದಿದ್ದ ಡಿ.ಕೆ.ಶಿವಕುಮಾರ್ ಇಡೀ ದಿನ ಹೆಡ್ ಮಾಸ್ಟರ್ ರೀತಿಯಲ್ಲಿ ಕಾಂಗ್ರೆಸ್ ಶಾಸಕರನ್ನು ನಿಯಂತ್ರಣದಲ್ಲಿಟ್ಟುಕೊಂಡು ತಮ್ಮ ಹೊಣೆಗಾರಿಕೆ ನಿಭಾಯಿಸಿದರು. ಅವರಿಗೆ ಸಹೋದರ ಡಿ.ಕೆ.ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ಸಾಥ್ ನೀಡಿದರು.