Advertisement

ಉಘೇ ಉಘೇ ಮಾದಪ್ಪನ ಮಹಾರಥೋತ್ಸವ ವೈಭವ

07:16 AM Mar 08, 2019 | |

ಹನೂರು: ಉಘೇ ಮಾದಪ್ಪ ಉಘೇ ಮಾದಪ್ಪ ಘೋಷವಾಕ್ಯದೊಂದಿಗೆ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಮಲೆ ಮಹದೇಶ್ವರನ ಶಿವರಾತ್ರಿ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು. ಮಲೆ ಮಹದೇಶ್ವರ ಬೆಟ್ಟದ ಮಹಾಶಿವರಾತ್ರಿ ಜಾತ್ರೆಯ ಪ್ರಮುಖ ಆಕರ್ಷಣೀಯವಾದ ಮಹಾರಥೋತ್ಸವ ಗುರುವಾರ ಬೆಳಗ್ಗೆ 8.05 ರಿಂದ 8.20 ಶುಭ ವೇಳೆಯಲ್ಲಿ ಜರುಗಿತು.

Advertisement

ಮಹಾರಥೋತ್ಸವಕ್ಕೂ ಮುನ್ನ ಸಾಲೂರು ಬೃಹನ್ಮಠದ ಪಟ್ಟದ ಗುರುಸ್ವಾಮಿಗಳನ್ನು ಸತ್ತಿಗೆ ಸುರಪಾನಿ ವಾದ್ಯಮೇಳಗಳೊಂದಿಗೆ ದೇವಾಲಯದ ಆವರಣಕ್ಕೆ ಕರೆತರಲಾಯಿತು. ಬಳಿಕ ಬೇಡಗಂಪಣ ಅರ್ಚಕರ ತಂಡದಿಂದ ವಿಧಿವಿಧಾನಗಳೊಂದಿಗೆ ಉತ್ಸವ ಮೂರ್ತಿಗೆ ಪೂಜೆ ನೆರವೇರಿಸಲಾಯಿತು. ಬಳಿಕ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ದೇವಾಲಯದ ಆವರಣದಲ್ಲಿ ವಿವಿಧ ಪುಷ್ಪ, ತಳಿರು ತೋರಣ, ಬಣ್ಣಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗಿದ್ದ ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು.

ರಥೋತ್ಸವಕ್ಕೆ ಚಾಲನೆ: ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ರಥೋತ್ಸವಕ್ಕೂ ಪೂಜಾ ಕೈಂಕರ್ಯಗಳನ್ನು ವಿಧಿವಿಧಾನಗಳೊಂದಿಗೆ ನೆರವೇರಿಸಿ ಬೂದುಗುಂಬಳ ಕಾಯಿಯಿಂದ ಆರತಿ ಬೆಳಗಿ ಚಾಲನೆ ನೀಡಲಾಯಿತು. ಈ ವೇಳೆ ಹಸಿರು ಸೀರೆ ಮತ್ತು ಕುಪ್ಪಸ ಧರಿಸಿದ್ದ 101 ಬೇಡಗಂಪಣ ಹೆಣ್ಣುಮಕ್ಕಳು ರಥೋತ್ಸವಕ್ಕೆ ಆರತಿ ಬೆಳಗಿ ರಂಗು ತಂದರು.

ಮೆರವಣಿಗೆಗೆ ವೀರಗಾಸೆ ಕುಣಿತ, ಸತ್ತಿಗೆ ಸುರಪಾನಿ, ವಾದ್ಯಮೇಳಗಳು ರಂಗು ತಂದವು. ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಭಕ್ತಾದಿಗಳ ಹರ್ಷೋದ್ಘಾರ ಮುಗಿಲು ಮುಟ್ಟುವಂತಿತ್ತು. ಈ ವೇಳೆ ಭಕ್ತಾದಿಗಳು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ದವಸ ಧಾನ್ಯಗಳು, ಚಿಲ್ಲರೆ ನಾಣ್ಯ, ಎಳ್ಳು, ಹೂ-ಹಣ್ಣು, ಹವನ ಎಸೆದು ಭಕ್ತಿ ಸಮರ್ಪಿಸಿದರು. ಹರಕೆ ಹೊತ್ತ ಭಕ್ತರು ಮುಡಿಸೇವೆ, ಉರುಳು ಸೇವೆ, ಪಂಜಿನಸೇವೆ ಸಲ್ಲಿಸಿದರು. ಅಂತರಗಂಗೆಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು ದೇಗುಲದ ಮುಂಭಾಗದಲ್ಲಿ ಧೂಪ ಹಾಕಿ ಸರದಿ ಸಾಲಿನಲ್ಲಿ ದೇವರ ದರ್ಶನ ಪಡೆದರು.

ಅನ್ನಬ್ರಹ್ಮೋತ್ಸವ ಸೇವೆ: ರಥೋತ್ಸವದ ಬಳಿಕ ಬೆಳಗ್ಗೆ 10.30ರಲ್ಲಿ ಗುರುಬ್ರಹ್ಮೋತ್ಸವ ಸೇವೆ ಮತ್ತು 11 ಗಂಟೆಗೆ ಅನ್ನಬ್ರಹ್ಮೋತ್ಸವ ಸೇವೆಗಳನ್ನು ನೆರವೇರಿಸಲಾಯಿತು. ಗುರುವಾರ ತಡರಾತ್ರಿ ಅಭಿಷೇಕ ಪೂಜೆ ಮುಗಿದ ಬಳಿಕ ಕೊಂಡೋತ್ಸವ ಜರುಗಿತು.  ಈ ಮೂಲಕ ಶ್ರೀ ಕ್ಷೇತ್ರದ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು. ಜಾತ್ರಾ ಮಹೋತ್ಸವದ ಪೂಜಾ ಕೈಂಕರ್ಯಗಳಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಗಾಯತ್ರಿ, ಉಪ ಕಾರ್ಯದರ್ಶಿ ರಾಜಶೇಖರ್‌ ಮೂರ್ತಿ, ಬಸವರಾಜು, ಪ್ರಾಧಿಕಾರದ ಸಿಬ್ಬಂದಿ, ಬೇಡಗಂಪಣ ಅರ್ಚಕ ವೃಂದ ಇನ್ನಿತರರು ಹಾಜರಿದ್ದರು.

Advertisement

ಬಿಗಿ ಪೊಲೀಸ್‌ ಪಹರೆ: ಮಹಾರಥೋತ್ಸವದ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದ ಆಯಾ ಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್‌ ಪಹರೆ ಏರ್ಪಡಿಸಲಾಗಿತ್ತು. ರಥೋತ್ಸವದ ವೇಳೆ ರಥ ಎಳೆಯಲು ಭಕ್ತಾದಿಗಳು ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ಹಿನ್ನೆಲೆ ಭಕ್ತರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಇದೇ ವೇಳೆ ಭಕ್ತಾದಿಗಳನ್ನು ನಿಯಂತ್ರಿಸಲು ಪ್ರಾಧಿಕಾರದ ಸಿಬ್ಬಂದಿ ಸೂಕ್ತ ಸ್ಥಳಾವಕಾಶ ಕಲ್ಪಿಸುವಂತೆ ಧ್ವನಿವರ್ಧಕಗಳ ಮೂಲಕ ಮನವಿ ಮಾಡುತ್ತಲೇ ಇದ್ದರು. 

ವಿವಿಧೆಡೆ ಟ್ರಾಫಿಕ್‌ ಜಾಮ್‌: ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಜರುಗಿದ್ದ  ಮಹಾಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳು ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಿದ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದ ತಿರುವು, ತಾಳಬೆಟ್ಟ ಸಮೀಪ, ಕೌದಳ್ಳಿ ಮತ್ತು ಹನೂರು ಪಟ್ಟಣದ ಕಿರಿದಾದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಟ್ರಾಫಿಕ್‌ ಜಾಮ್‌ ನಿರ್ಮಾಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next