ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಯುಜಿಸಿಇಟಿ ಮತ್ತು ಯುಜಿನೀಟ್ 2ನೇ ಸುತ್ತಿನ ಸೀಟು ಹಂಚಿಕೆಯನ್ನು ಭಾನುವಾರ ತನ್ನ ವೆಬ್‌ಸೈಟಲ್ಲಿ ಪ್ರಕಟಿಸಿದೆ.
ಇದರೊಂದಿಗೆ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸುಗಳಿಗೆ 2ನೇ ಹಂತದ ಪ್ರವೇಶ ಪ್ರಕ್ರಿಯೆ ಸೋಮವಾರದಿಂದ (ಸೆ.23) ಆರಂಭವಾಗಲಿದೆ.
ಸೀಟು ಹಂಚಿಕೆಯಾದ ಎಂಜಿನಿಯರಿಂಗ್ ಸೇರಿ ಇತರ ಕೋರ್ಸ್‌ಗಳ (ವೈದ್ಯಕೀಯ ಕೋರ್ಸ್ ಹೊರತುಪಡಿಸಿ) ಅಭ್ಯರ್ಥಿಗಳು ಸೆ.23ರಂದು ಚಾಯ್ಸ್ ಆಯ್ಕೆ ಮಾಡಿಕೊಳ್ಳಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ. ಚಾಯ್ಸ್ ಅಥವಾ ಚಾಯ್ಸ್ 2 ನಮೂದಿಸಿದ ಸಿಇಟಿ ಅಭ್ಯರ್ಥಿಗಳು ಮಾತ್ರ ಸೆ.23ರಿಂದ 26ರ ನಡುವಿನ ಬ್ಯಾಂಕ್ ಕೆಲಸದ ಅವಧಿಯಲ್ಲಿ ಶುಲ್ಕ ಪಾವತಿಸಬೇಕು ಎಂದು ತಿಳಿಸಿದ್ದಾರೆ.
ಈ ಮುಂಚೆಯೇ ತಿಳಿಸಿರುವಂತೆ, ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳಿಗೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಯಾವುದೇ ಚಾಯ್ಸ್ ಲಭ್ಯವಿರುವುದಿಲ್ಲ. ಹಂಚಿಕೆಯಾಗಿರುವ ವೈದ್ಯಕೀಯ ಸೀಟು ಬೇಡವೆನಿಸಿದಲ್ಲಿ ಸೆ.25ರ ಸಂಜೆ 5.30 ರೊಳಗೆ ಕೆಇಎ ಕಚೇರಿಗೆ ಬಂದು ರದ್ದುಪಡಿಸಿಕೊಳ್ಳಬೇಕು. ಹೀಗೆ ರದ್ದುಪಡಿಸಿಕೊಂಡವರಿಗೆ ಆನ್‌ಲೈನ್ ಮಾಪ್ ಅಪ್ ರೌಂಡ್ ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.