Advertisement

ಮುಕ್ತ ವಿವಿಗೆ 2023ರವರೆಗೂ ಯುಜಿಸಿ ಮಾನ್ಯತೆ

10:20 AM Jul 02, 2019 | Suhan S |

ಚಿಕ್ಕಮಗಳೂರು: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯುಜಿಸಿ 2023ರವರೆಗೂ ಮಾನ್ಯತೆ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡುತ್ತಿದ್ದು, ದೂರ ಶಿಕ್ಷಣ ಇತಿಹಾಸದಲ್ಲೇ ಮೊದಲ ಬಾರಿಗೆ ಮುಕ್ತ ವಿವಿಯಲ್ಲಿ ಪ್ಲೇಸ್‌ಮೆಂಟ್ ವಿಭಾಗ ರಚಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ವಿದ್ಯಾಶಂಕರ್‌ ತಿಳಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಜಿಸಿ ಒಟ್ಟು 32 ಕೋರ್ಸ್‌ಗಳಿಗೆ ಮಾನ್ಯತೆ ನೀಡಿದೆ. ವಿಶ್ವವಿದ್ಯಾಲಯದಲ್ಲಿರುವ ಇತರ ಕೋರ್ಸ್‌ಗಳು ಸೇರಿ 50 ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲಾಗಿದೆ ಎಂದರು.

ವಿದ್ಯಾರ್ಥಿಗಳು ಮುಕ್ತ ವಿವಿಯಲ್ಲಿ ಓದಿದರೆ ಹಿಂದೆ ಆದಂತೆ ಪದವಿ ಸರ್ಟಿಫಿಕೇಟ್ ದೊರೆಯದೇ ಇರಬಹುದು ಎಂಬ ಆತಂಕವಿಲ್ಲದೆ ಪ್ರವೇಶ ಪಡೆಯಲು ಮುಂದಾಗಬಹುದು. ಒಡಿಯಲ್ ನಿಯಂತ್ರಣ ನಿಯಮಾವಳಿಗಳ ಅನ್ವಯ ಇಡೀ ದೇಶದಲ್ಲಿ 5 ವರ್ಷಗಳ ಕಾಲ ಮಾನ್ಯತೆ ಪಡೆದ ಏಕೈಕ ವಿಶ್ವವಿದ್ಯಾಲಯ ಇದಾಗಿದೆ. 2018-19ನೇ ಸಾಲಿನಲ್ಲಿ ಪ್ರವೇಶಾತಿ ಆರಂಭವಾದ ನಂತರ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. ವಿವಿಯಲ್ಲಿ ಪ್ಲೇಸ್‌ಮೆಂಟ್ ವಿಭಾಗಕ್ಕೆ ವಿಶೇಷ ಅಧಿಕಾರಿ ನೇಮಿಸಲಾಗಿದೆ. ಉನ್ನತ ಶಿಕ್ಷಣವನ್ನು ವಿವಿಯಲ್ಲಿ ಪಡೆದ ವಿದ್ಯಾರ್ಥಿಗಳ ನೌಕರಿ ಸಂಬಂಧಿತ ಯೋಜನೆ ರೂಪಿಸಲಾಗಿದೆ. ಕೈಗಾರಿಕಾ ಸಂಸ್ಥೆಗಳ ಜತೆ ಮಾತುಕತೆ ನಡೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಎಎಸ್‌ ಸೇರಿದಂತೆ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಗುಮಾಸ್ತ ಹುದ್ದೆ ಸೇರಿದಂತೆ ಬ್ಯಾಂಕಿಂಗ್‌ ಪರೀಕ್ಷೆಗೂ ತರಬೇತಿ ನೀಡಲು ಆಲೋಚಿಸಲಾಗಿದೆ. ತಜ್ಞ ಸಂಪನ್ಮೂಲ ವ್ಯಕ್ತಿಗಳ ನೆರವು ಪಡೆಯಲಾಗುವುದು ಎಂದು ತಿಳಿಸಿದರು. ವಿವಿಯಲ್ಲಿ ಹಲವು ನೂತನ ಯೋಜನೆಗಳನ್ನು ಆರಂಭಿಸಲಾಗಿದೆ.

ಪ್ರಮುಖವಾಗಿ ಕೌಶಲ್ಯಾಭಿವೃದ್ಧಿಗಾಗಿಯೇ ಪ್ರತ್ಯೇಕ ವಿಭಾಗ ರಚನೆ, ರಾಜ್ಯದ ಎಲ್ಲೆಡೆ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರಗಳ ಆಯೋಜನೆ, ಕೇಂದ್ರ ಪರೀಕ್ಷಾ ವಿಭಾಗದ ಪ್ರತಿ ವಿಭಾಗಕ್ಕೂ ವಿಶೇಷ ಅಧಿಕಾರಿ ನೇಮಕ, ಪ್ರಾದೇಶಿಕ ಕೇಂದ್ರಗಳಲ್ಲೂ ಪ್ರತ್ಯೇಕ ಗ್ರಂಥಾಲಯ ಸ್ಥಾಪನೆ, ತಿಂಗಳಿಗೊಮ್ಮೆ ಪ್ರಾದೇಶಿಕ ಕೇಂದ್ರಗಳಲ್ಲಿ ಕುಲಪತಿಗಳು, ಪ್ರಾದೇಶಿಕ ನಿರ್ದೇಶಕರು ವೀಡಿಯೋ ಕಾನ್ಫರೆನ್ಸ್‌ ನಡೆಸುವುದನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲೂ ಪ್ರವೇಶಾತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.ವಿವಿಯು ತನ್ನ ಪ್ರಾದೇಶಿಕ ಕೇಂದ್ರಗಳಲ್ಲಿ 70ಕ್ಕೂ ಹೆಚ್ಚು ಕಲಿಕಾರ್ಥಿ ಸಹಾಯ ಕೇಂದ್ರಗಳನ್ನು ಹೊಂದಿರುತ್ತದೆ. ಯಾವುದೇ ಸ್ನಾತಕೋತ್ತರ ಕೋರ್ಸ್‌ಗಳ ಜೊತೆ ಡಿಪ್ಲೋಮಾ ಅಥವಾ ಸರ್ಟಿಫಿಕೇಟ್ ಕೋರ್ಸ್‌ ಅನ್ನು ಏಕ ಕಾಲದಲ್ಲಿ ವ್ಯಾಸಂಗ ಮಾಡಬಹುದಾಗಿದೆ ಎಂದು ಹೇಳಿದರು.

ವಿಶ್ವವಿದ್ಯಾನಿಲಯದಲ್ಲಿ 4ಸಾವಿರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಸೇರಿದಂತೆ ವಿವಿಧ ಸರ್ಟಿಫಿಕೇಟ್‌ಗಳನ್ನು ನೀಡುವ ಕಾರ್ಯ ಬಾಕಿಯಿದ್ದು, ಈಗ ಪ್ರತಿ ದಿನ 200 ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ. 2013-14ರಿಂದ ಯುಜಿಸಿ ಮಾನ್ಯತೆ ರದ್ದಾದ ಹಿನ್ನೆಲೆಯಲ್ಲಿ ಪದವಿ ಪಡೆಯಲು ಪ್ರವೇಶ ಪಡೆದಿದ್ದ 95 ಸಾವಿರ ವಿದ್ಯಾರ್ಥಿಗಳಿಗೆ ಈವರೆಗೂ ಪದವಿ ಪ್ರಮಾಣ ಪತ್ರ ನೀಡಲಾಗಿಲ್ಲ. ಇದರ ವಿರುದ್ಧ ಕೆಲವು ವಿದ್ಯಾರ್ಥಿಗಳು ನ್ಯಾಯಾಲಯಕ್ಕೆ ಹೋಗಿದ್ದಾರೆ. ಇತ್ಯರ್ಥದ ನಂತರ ಕ್ರಮ ಕೈಗೊಳ್ಳಲಾಗುವುದು. ಸಹಭಾಗಿತ್ವದಲ್ಲಿ ಪ್ರವೇಶ ಪಡೆದವರಿಗೆ ವಿಶ್ವವಿದ್ಯಾನಿಲಯ ಯಾವ ರೀತಿಯಲ್ಲೂ ಸಹಾಯ ಮಾಡಲು ಸಾಧ್ಯವಿಲ್ಲ ಎಂದರು.

Advertisement

ಸುದ್ದಿಗೋಷ್ಠಿಯಲ್ಲಿ ಪ್ರಾದೇಶಿಕ ನಿರ್ದೇಶಕ ಜಗದೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next