Advertisement

ಪ್ಲವದಲ್ಲಿ ಸಂಕಷ್ಟ ದಾಟುವ ನಿರೀಕ್ಷೆ

12:42 AM Apr 13, 2021 | Team Udayavani |

ಈ ಬ್ರಹ್ಮಾಂಡದಲ್ಲಿ ಚತುರ್ಮುಖ ಬ್ರಹ್ಮನು ಸೃಷ್ಟಿಯನ್ನು ಆರಂಭಿಸಿದ ದಿನವೇ ಮೇಷ ಮಾಸದ ಮೊದಲ ದಿನವೂ ಆಗಿದ್ದ ಚೈತ್ರ ಶುಕ್ಲ ಪ್ರತಿಪತ್‌. ಸೃಷ್ಟಿಯ ಆದಿಯಲ್ಲಿ ಸೂರ್ಯಚಂದ್ರರಿಬ್ಬರೂ ಮೇಷಾದಿಯಲ್ಲಿದ್ದುದರಿಂದ ಸೌರಮಾಸದ ಮೊದಲ ದಿನ ಹಾಗೂ ಚಾಂದ್ರಮಾಸದ ಮೊದಲ ದಿನ ಅದುವೇ ಆಗಿತ್ತು. ಆದ್ದರಿಂದ ಸೌರಮಾನದಂತೆ ಮೇಷಮಾಸದ ಮೊದಲ ದಿನ ಅಂದರೆ ಮೇಷ ಸಂಕ್ರಾಂತಿಯ ಮರುದಿನ ಯುಗಾದಿಯಾದರೆ, ಚಾಂದ್ರಮಾನದಂತೆ ಚೈತ್ರ ಶುಕ್ಲ ಪ್ರತಿಪದೆಯಂದು ಯುಗಾದಿ. ಸೂರ್ಯನ ಮೇಷಾದಿರಾಶಿಚಲನೆಗೆ ಅನುಗುಣವಾಗಿ ಲೆಕ್ಕಾಚಾರ ಸೌರಮಾನವೆನಿಸಿದರೆ, ಚಂದ್ರನ ತಿಥಿಯನ್ನು ಅನುಸರಿಸಿ ಚಾಂದ್ರಮಾನವಾಗುತ್ತದೆ. ಒಂದು ಸೌರವರ್ಷದಲ್ಲಿ 365 1/4 ದಿನಗಳಾದರೆ, ಒಂದು ಚಾಂದ್ರ ವರ್ಷದಲ್ಲಿ ಸುಮಾರು 354 ದಿನಗಳಿರುತ್ತವೆ. ಹೀಗಾಗಿ 33 ತಿಂಗಳುಗಳಿ ಗೊಮ್ಮೆ ಮೂವತ್ತು ದಿನಗಳ ವ್ಯತ್ಯಾಸವು ಅಧಿಕ ಮಾಸವಾಗಿ ಸೇರಿಕೊಂಡು ಚಾಂದ್ರಮಾನವು ಸೌರಮಾನವನ್ನು ಅನುಸರಿಸುತ್ತದೆ. ನವೀನರ ಲೆಕ್ಕಾಚಾರವು ಸೌರಮಾನವಾಗಿರುವುದರಿಂದ ಸೌರ ಯುಗಾದಿಯು ಪ್ರತಿವರ್ಷ ಎಪ್ರಿಲ್‌ ತಿಂಗಳ 14 ಅಥವಾ 15 ನೇ ತಾರೀಖೀನಂದೇ ಬರುವುದು. ಆದರೆ ಚಾಂದ್ರ ಯುಗಾದಿಯು ಮಾರ್ಚ್‌ ತಿಂಗಳ ಮಧ್ಯಭಾಗದಿಂದ ಎಪ್ರಿಲ್‌ ಮಧ್ಯಭಾಗದವರೆಗೆ ಯಾವಾಗಲೂ ಬರಬಹುದು. ಸೌರಯುಗಾದಿಗೂ ಚಾಂದ್ರಯುಗಾದಿಗೂ ಇರುವ ಅಂತರ ಅಧಿಕ ಮಾಸ ಇರುವ ವರ್ಷ ಕಡಿಮೆ ಇದ್ದು, ಕ್ರಮೇಣ 29 ದಿನಗಳವರೆಗೂ ಹೆಚ್ಚುವುದು. ಪ್ರಕೃತ ಈ ವರ್ಷ ಒಂದೇ ದಿನದ ಅಂತರ ಇರುವುದು. ಈ ರೀತಿ ಒಂದೇ ದಿನದ ಅಂತರದಲ್ಲಿ ಚಾಂದ್ರ, ಸೌರಯುಗಾದಿಗಳು ಬರುವುದು ಬಹಳ ಅಪರೂಪ ಎಂದೇ ಹೇಳಬಹುದು.

Advertisement

ಸೌರಮಾನ, ಚಾಂದ್ರಮಾನಗಳಲ್ಲಿ ಯಾವುದು ಶ್ರೇಷ್ಠ? ಯಾವುದು ಕನಿಷ್ಠ? ಎಂಬ ಚಿಂತನೆ ಶಾಸ್ತ್ರಗ್ರಂಥಗಳಲ್ಲಿ ಕಂಡುಬರುವುದಿಲ್ಲ. ಎರಡೂ ಮಾನಗಳನ್ನು ಶಾಸ್ತ್ರಕಾರರಾದ ಮುನಿಗಳು ಅಂಗೀಕರಿಸಿ ಆಚರಣೆಗೆ ತಂದಿದ್ದಾರೆ. ದೇವಕಾರ್ಯ- ಪಿತೃಕಾರ್ಯಗಳಲ್ಲಿ ಸೌರಮಾನ ಅನುಷ್ಠಾನ ಮಾಡುವ ಸಂಪ್ರದಾಯದವರಿಗೆ ಮೇಷ ಸಂಕ್ರಾಂತಿಯ ಮರುದಿನವೇ ಯುಗಾದಿಯಾದರೆ ಚಾಂದ್ರಮಾನದ ಅನುಷ್ಠಾನವುಳ್ಳವರಿಗೆ ಚೈತ್ರ ಶುಕ್ಲ ಪ್ರತಿಪದೆಯಂದೇ ಯುಗಾದಿ. ಇದರಲ್ಲಿ ಯಾವುದೇ ವಿರೋಧ ವಿಪರ್ಯಾ ಸಗಳಿಲ್ಲ. ಜನ್ಮದಿನಾಂಕರೀತ್ಯಾ, ಜನ್ಮನಕ್ಷತ್ರರೀತ್ಯಾ ಎರಡು ಹುಟ್ಟುಹಬ್ಬ ಬರುವಂತೆ ಎರಡು ಯುಗಾದಿಗಳೂ ಸರಿಯಾದುವೇ ಆಗಿವೆ. ಕರಾವಳಿ ಪ್ರದೇಶದ ಪರಶುರಾಮ ಕ್ಷೇತ್ರದ ಜನರಿಗೆ ಸೌರಮಾನದ ಅನುಷ್ಠಾನ ಸಂಪ್ರದಾಯಗತವಾಗಿದೆ. ಘಟ್ಟದ ಮೇಲ್ಭಾಗದಲ್ಲಿ ಚಾಂದ್ರಮಾನ ಆಚರಣೆಯ ಪರಂಪರೆ ಇದೆ. ಯುಗಾದಿಯ ಆಚರಣೆಯನ್ನು ಒಂದೇ ಶ್ಲೋಕದಲ್ಲಿ ಸಂಗ್ರಹಿಸಿ ಪಂಚಾಂಗಗಳಲ್ಲಿ ಬರೆದಿದ್ದಾರೆ.

ಪ್ರಾಪ್ತೆ ನೂತನವತ್ಸರೇ ಪ್ರತಿಗೃಹಂ ಕುರ್ಯಾಧ್ವಜಂ ತೋರಣಂ
ಸ್ನಾನಂ ಮಂಗಲಮಾಚರೇದ್ದ್ವಿಜವರಾನ್‌ ಸಂಪೂಜ್ಯ ಭಕ್ತ್ಯ ಹರಿಮ್‌ | ವೃದ್ಧಾಂಶೆòವ ಗುರೂನ್‌ ಪ್ರಣಮ್ಯ ಮಹಿಲಾಬಾಲಾನ್‌ ಸ್ವಯಂಭೂಷಿತೋ= ಲಂಕೃತ್ಯಾಂಬರಭೂಷಣೈಶ್ಚ ಶೃಣುಯಾತ್‌ ಪುಣ್ಯಂ ಫ‌ಲಂ ವಾರ್ಷಿಕಮ್‌ ||

ಯುಗಾದಿ ಹಬ್ಬದ ಆಚರಣೆಗಾಗಿ ಹಿಂದಿನ ದಿನವೇ ಮನೆಯನ್ನು ಸಂಪೂರ್ಣ ಸ್ವತ್ಛಗೊಳಿಸಿ ಮಾವಿನ ತಳಿರುತೋರಣ, ಧ್ವಜಾದಿಗಳಿಂದ ಸಿಂಗರಿಸಬೇಕು. ಹಿಂದಿನ ದಿನ ರಾತ್ರಿಯೇ ದೇವರ ಮುಂದೆ “ಕಣಿ’ಯನ್ನು ಅಲಂಕರಿಸಿಡಬೇಕು. ದೇವರೆದುರು ರಂಗೋಲಿಯನ್ನು ಬರೆದು ಹರಿವಾಣದಲ್ಲಿ ಅಕ್ಕಿ, ಸಿಪ್ಪೆ ಇರುವ ಹಸಿ ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ವಸಂತ ಋತುವಿನ ಪೀರೆ, ನೀರುಸೌತೆ, ಹಸಿಗೋಡಂಬಿ ಮೊದಲಾದ ತರಕಾರಿಗಳನ್ನು ಹರಡಿ ಇದರ ಮೇಲೆ ಹೂವಿನ ಹಾರ ಹಾಗೂ ಬಂಗಾರದ ಹಾರವನ್ನು ಹಾಕಬೇಕು. ಇದಕ್ಕೆ ಒರಗಿ ಒಂದು ಕನ್ನಡಿಯನ್ನು ದೇವರಿಗೆ ಅಭಿಮುಖವಾಗಿ ನೋಡುವಾಗ ನಮ್ಮ ಪ್ರತಿಬಿಂಬ ಕಾಣುವಂತೆ ಇಡಬೇಕು. ಇದರ ಜತೆಗೆ ಹೊಸವರ್ಷದ ಪಂಚಾಂಗ, ಕುಂಕುಮ ಹಾಗೂ ದೀಪವನ್ನು ಇಡಲಾಗುತ್ತದೆ. ಧವಸಧಾನ್ಯಗಳ ಸಮೃದ್ಧಿಯನ್ನು ಸೂಚಿಸುವ ಈ ಜೋಡಣೆಯನ್ನೇ ವಿಷುಹಬ್ಬ ಎಂದು ಕರೆಯಲ್ಪಡುವ ಸೌರ ಯುಗಾದಿಯ “ಕಣಿ’ ಎಂದು ಕರೆಯುತ್ತಾರೆ.

ಯುಗಾದಿಯಂದು ಬೆಳಗ್ಗೆ ಉಷಃಕಾಲದಲ್ಲಿ ಎದ್ದು (ಸೂರ್ಯೋದಯಕ್ಕಿಂತ 2 ಗಂಟೆ ಮೊದಲು ಅಂದರೆ ಅಂದಾಜು ಗಂಟೆ ಮುಂಜಾನೆ 4:30ಕ್ಕೆ ) ಮುಖವನ್ನು ತೊಳೆದು ಬಂದು ದೇವರಿಗೆ ನಮಿಸಿ ಮೊದಲು ಕಣಿಯ ದರ್ಶನವನ್ನು ಮಾಡಬೇಕು. ಫ‌ಲ, ಧಾನ್ಯ, ಸುವರ್ಣಾದಿಗಳನ್ನು ನೋಡಿ ದೀಪದ ಬೆಳಕಿನಲ್ಲಿ ಕನ್ನಡಿಯಲ್ಲಿ ಮುಖವನ್ನು ನೋಡಿ ಹಣೆಗೆ ಕುಂಕುಮವನ್ನು ಹಚ್ಚಿಕೊಂಡು ದೇವರಿಗೆ ಪುನಃ ನಮಿಸಿ ಮನೆಯ ಹಿರಿಯರಿಗೆಲ್ಲ ಪುನಃ ನಮಿಸಬೇಕು. ಕಣಿಯನ್ನು ನೋಡುವಾಗ ಮಂಗಲಂ ಭಗವಾನ್‌ ವಿಷ್ಣುಃ ……….. ಸರ್ವಮಂಗಲಮಾಂಗಲ್ಯೇ…… ಶ್ಲೋಕಗಳನ್ನು ಹೇಳುವುದು ಉತ್ತಮ.

Advertisement

ಆ ಬಳಿಕ ಮನೆಯ ಎಲ್ಲ ಸದಸ್ಯರೂ ತೈಲಾಭ್ಯಂಗ ಸ್ನಾನವನ್ನು ಮಾಡಬೇಕು. ದೀಪಾವಳಿಯ ನರಕಚತುರ್ದಶಿಯಂತೆ ಯುಗಾದಿಯ ದಿನವೂ ತೈಲಾಭ್ಯಂಗ ಎಲ್ಲರಿಗೂ ಅವಶ್ಯ ಕರ್ತವ್ಯವೆಂದು ಶಾಸ್ತ್ರನಿರ್ದೇಶ. ಹೀಗೆ ಚೆನ್ನಾಗಿ ಎಣ್ಣೆಹಚ್ಚಿ ಸ್ನಾನವನ್ನು ಮಾಡಿ ನಿತ್ಯಾನುಷ್ಠಾನ ಮುಗಿಸಿ ನೂತನ ವಸ್ತ್ರಧಾರಣೆ ಮಾಡಬೇಕು. ಹೊಸವಸ್ತ್ರ ಧರಿಸಿ ದೇವರಿಗೂ ಗುರುಹಿರಿಯರಿಗೂ ವಂದಿಸಬೇಕು. ಆ ಬಳಿಕ ಪಂಚಾಂಗಶ್ರವಣ ಮಾಡಬೇಕು.

ದೇವರೆದುರು ಕಣಿಯಲ್ಲಿಟ್ಟಿದ್ದ ಹೊಸವರ್ಷದ ಪಂಚಾಂಗವನ್ನು ತೆಗೆದು ವಂದಿಸಿ ಪಂಚಾಂಗದ ಆರಂಭದ ಪುಟಗಳಲ್ಲಿ ಬರೆದ ಸಂವತ್ಸರಫ‌ಲ, ಹೊಸ ವರ್ಷದ ರಾಜ, ಮಂತ್ರಿ, ಅವರ ಫ‌ಲ, ಮೊದಲಾದ ವಿಷಯವನ್ನೂ ಓದಿ (ಸಂಸ್ಕೃತ ಶ್ಲೋಕಗಳನ್ನು ಓದಲು ಆಗದಿದ್ದರೆ ಅದನ್ನು ಬಿಟ್ಟು ಕನ್ನಡದ್ದು ಮಾತ್ರ ಓದಬಹುದು) ಹೊಸ ಸಂವತ್ಸರದ ಗ್ರಹಣ, ಗುರುಶುಕ್ರಾಸ್ತ, ಅಧಿಕಮಾಸಾದಿ ವಿಶೇಷಗಳನ್ನೂ ಗಮನಿಸಬೇಕು. ಕೊನೆಯಲ್ಲಿ ಯುಗಾದಿ ದಿನದ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳೆಂಬ ಪಂಚಾಂಗವನ್ನು ಪಠನ ಮಾಡಬೇಕು. ಈ ಪಂಚಾಂಗ ಪಠನವನ್ನು ಜೋತಿಷ ತಿಳಿದ ವಿದ್ವಾಂಸರಿಂದ ಮಾಡಿಸಬೇಕೆಂಬ ಶಾಸ್ತ್ರವಿಧಿಯಿದ್ದರೂ ಜೋತಿರ್ವಿದರು ಅಲಭ್ಯರಾದಾಗ ಮನೆಯ ಯಜಮಾನನೇ ಪತ್ನಿàಪುತ್ರಸಹಿತನಾಗಿ ದೇವರೆದುರು ಪಂಚಾಂಗ ಪಠನ ಮಾಡುವ ಸಂಪ್ರದಾಯವಿದೆ. ಇಲ್ಲಿ ವರ್ಷಫ‌ಲವೆಂದರೆ ಸಾಮಾನ್ಯವಾಗಿ ಪಂಚಾಂಗಗಳ ಕೊನೆಯಲ್ಲಿ ಕೊಟ್ಟಿರುವ ನಮ್ಮ ಜನ್ಮರಾಶಿ, ನಕ್ಷತ್ರಗಳ ವರ್ಷಭವಿಷ್ಯ ಪಠನ ಮಾಡಬೇಕೆಂದು ಅರ್ಥವಲ್ಲ. ಹಾಗೆ ಮಾಡಬೇಕೆಂದು ಎಲ್ಲೂ ಹೇಳಿಲ್ಲ.

ಆ ಬಳಿಕ ಬೇವು-ಬೆಲ್ಲಗಳನ್ನು ದೇವರಿಗೆ ನಿವೇದಿಸಿ ಪೂಜಿಸಿ –
ಶತಾಯುರ್ವಜ್ರದೇಹಾಯ ಸರ್ವಸಂಪತ್ಸಮೃದ್ಧಯೇ |
ಸರ್ವಾರಿಷ್ಟವಿನಾಶಾಯ ಗುಡನಿಂಬಕಭಕ್ಷಣಮ್‌ ||
“ಶತಾಯುಷ್ಯದ ತನಕ ವಜ್ರದಂತೆ ಗಟ್ಟಿಯಾದ ದೇಹಕ್ಕಾಗಿ, ಸರ್ವಸಂಪತ್ಸಮೃದ್ಧಿಗಾಗಿ ಸರ್ವಾರಿಷ್ಟಗಳ ನಿವಾರಣೆಗಾಗಿ ಬೇವು-ಬೆಲ್ಲಗಳನ್ನು ತಿನ್ನುತ್ತೇನೆ’ ಎಂಬ ಅರ್ಥದ ಈ ಶ್ಲೋಕದ ಪಠನದೊಂದಿಗೆ ಜೀವನದಲ್ಲಿ ಸುಖ-ದುಃಖಗಳನ್ನು ಸಮಾನವಾಗಿ ಎದುರಿಸಬೇಕೆನ್ನುವ ಶ್ರೀಕೃಷ್ಣನ ಭಗವದ್ಗೀತೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಬೇವು-ಬೆಲ್ಲಗಳನ್ನು ತಿನ್ನಬೇಕು.

ನಮ್ಮೀ ತುಳುನಾಡಿನಲ್ಲಿ ಬೇವು-ಬೆಲ್ಲಗಳನ್ನು ತಿನ್ನುವ ಸಂಪ್ರದಾಯವಿಲ್ಲ.ಆದರೆ ವಸಂತ ಋತುವಿನ ಉತ್ಪನ್ನಗಳಾದ ನೀರುಸೌತೆ, ಪೀರೆ, ಹಸಿಗೋಡಂಬಿಗಳನ್ನು ಹಾಕಿ ಕಾಯಿಹಾಲಿನ ಪಾಯಸವನ್ನು ಮನೆ ಮಂದಿ ಎಲ್ಲ ಒಟ್ಟಾಗಿ ಕುಳಿತು ಸಂತೋಷದಿಂದ ಊಟಮಾಡುವ ಪದ್ಧತಿ ಆಚರಣೆಯಲ್ಲಿದೆ. ಫ‌ಲವಸ್ತುಗಳು, ಕಡಲೆ, ಹೆಸರುಗಳಿಂದ ಮಾಡಿದ ಮಧುರ ಪದಾರ್ಥಗಳನ್ನು ದೇವರಿಗೆ ನಿವೇದಿಸಿ ವಸಂತಪೂಜೆಯನ್ನು ಮಾಡಿ ಎಲ್ಲರೂ ಒಟ್ಟಿಗೆ ಕುಳಿತು ವಸಂತದ ಮಧುರ ಪದಾರ್ಥಗಳನ್ನು ಪಾನಕಸಹಿತ ಸೇವನೆ ಮಾಡುವ ಕ್ರಮವೂ ಜಾರಿಯಲ್ಲಿದೆ.

ವಿಕಾರಿ ಸಂವತ್ಸರದ ಕೊನೆಯಲ್ಲಿ ವಿಶ್ವವ್ಯಾಪಿಯಾಗಿ ಕಂಡುಬಂದಿರುವ ಕೊರೊನಾ ವೈರಸ್‌ನ ಶೀತ-ಕೆಮ್ಮು-ಜ್ವರಾದಿ ವಿಕಾರಗಳು ದೂರವಾಗಿ ಶಾರ್ವರೀ ಸಂವತ್ಸರದ (ಶರ್ವರೀ=ರಾತ್ರಿ) ರಾತ್ರಿರೂಪವಾದ ಅನಾರೋಗ್ಯದ ಕಗ್ಗತ್ತಲು ನಿವಾರಣೆಯಾಗಿ ನೂತನ ಪ್ಲವ ಸಂವತ್ಸರವು ಕಷ್ಟಪರಂಪರೆಯನ್ನು ದಾಟಿಸುವ ತೆಪ್ಪವಾಗಿ(ಪ್ಲವ=ತೆಪ್ಪ) ಆರೋಗ್ಯ-ಸುಖ-ಸಂತೋಷ-ನೆಮ್ಮದಿಗಳಿಂದ ಕೂಡಿ ವಿಶ್ವಕ್ಕೇ ಸನ್ಮಂಗಲವನ್ನು ಉಂಟುಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.

– ಡಾ| ಡಿ. ಶಿವಪ್ರಸಾದ ತಂತ್ರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next