Advertisement

ಹೊಸ ಬದುಕಿನ ಆರಂಭ ಯುಗಾದಿ

03:26 PM Mar 21, 2023 | Team Udayavani |

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ವರುಷವ ಹೊಸತು ಹೊಸತು ತರುತಿದೆ. ಬದುಕಲ್ಲಿ ಹೊಸತನ ಇಲ್ಲದಿದ್ದರೆ ಅರ್ಥವಿಲ್ಲ. ಹಾಗೆಂದ ಮಾತ್ರಕ್ಕೆ ಹಳೆಯ ಬದುಕಿನ ಕೊಂಡಿ ಕಳಚಿ ಹೋಯಿತೆಂದು ಅರ್ಥವಲ್ಲ. ಹಳೆಯ ಬದುಕಿನ ನೆನಪುಗಳಿಗೆ ಹೊಸ ಕ್ಷಣಗಳನ್ನು ಸೇರಿಸಿ ಬದುಕಿನ ಪರಿಧಿಯನ್ನು ವಿಸ್ತರಿಸುವುದು ತಾನೇ ನಮ್ಮ ಗುರಿ. ಹಿಂದೂ ಕ್ಯಾಲೆಂಡರ್‌ ಪ್ರಕಾರ ಯುಗಾದಿಯು ಹೊಸವರ್ಷದ ಆರಂಭವಾಗಿದೆ.

Advertisement

ಯುಗಾದಿ ಎನ್ನುವ ಪದವು ಸಂಸ್ಕೃತದ ಯುಗ ಮತ್ತು ಆದಿ ಎನ್ನುವ ಪದಗಳಿಂದ ಹುಟ್ಟಿದ್ದು. ಯುಗ ಎಂದರೆ ಅವಧಿ ಹಾಗೂ ಆದಿ ಎಂದರೆ ಪ್ರಾರಂಭ. ಆದ್ದರಿಂದ ಯುಗಾದಿ ಎಂದರೆ ಹೊಸ ಸಮಯದ ಆರಂಭ ಎಂದಾಗಿದೆ. ಯುಗಾದಿಯ ಸಂದರ್ಭದಲ್ಲಿ ಭೂಮಿಯಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಪ್ರಕೃತಿಯೂ ಕೂಡ ಹೊಸತನದಿಂದ ತುಂಬಿ ನಲಿಯುತ್ತದೆ. ವಸಂತ ಋತುವಿನ ಪ್ರಾರಂಭ ಕಾಲವಾದ್ದರಿಂದ ಮರಗಳ ಎಲೆಗಳು ಉದುರಿ ಹೊಸ ಚಿಗುರು ಪ್ರಾರಂಭವಾಗುತ್ತದೆ.

ಯುಗಾದಿಯ ದಿನ ಎಲ್ಲರ ಮನೆ ಮನಗಳಲ್ಲಿ ಹೊಸ ಹುರುಪು ಉತ್ಸಾಹ ತುಂಬಿರುತ್ತದೆ. ಈ ದಿನದಂದು ತಾಜಾ ಮಾವಿನ ಎಲೆಗಳ ತೋರಣವನ್ನು ಮನೆಯ ಮುಂಭಾಗ ಕಟ್ಟುತ್ತಾರೆ ಮನೆ ಮಂದಿಯೆಲ್ಲಾ ಹೊಸಬಟ್ಟೆಯನ್ನು ತೊಟ್ಟು ಸಂಭ್ರಮಿಸುತ್ತಾರೆ. ಯುಗಾದಿ ಅನೇಕ ಶುಭ ಕಾರ್ಯಗಳಿಗೆ ನಾಂದಿ ಹಾಡುತ್ತದೆ. ಯುಗಾದಿಯ ದಿನ ಬೇವು ಬೆಲ್ಲವನ್ನು ತಿಂದು ಬದುಕಿನಲ್ಲಿ ಬರುವ ಸುಖ ಹಾಗೂ ಕಷ್ಟಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸುತ್ತೇವೆ ಎಂದು ಸಂಕಲ್ಪ ಮಾಡುತ್ತೇವೆ. ಯುಗಾದಿ ಹಬ್ಬವನ್ನು ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಜನರು ತಮ್ಮ ಹೊಸ ಮನೆ ನಿರ್ಮಾಣಗಳನ್ನು ಪ್ರಾರಂಭಿಸುತ್ತಾರೆ, ಹೊಸ ವ್ಯವಹಾರಗಳನ್ನು ಕೈಗೊಳ್ಳುತ್ತಾರೆ, ಪ್ರಮುಖ ಖರೀದಿಗಳನ್ನು ಮಾಡುತ್ತಾರೆ ಮತ್ತು ಈ ದಿನದಂದು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುತ್ತಾರೆ. ಬದುಕು ಕೇವಲ ಸಿಹಿ ಕ್ಷಣಗಳಿಂದ ಕೂಡಿರುವುದಿಲ್ಲ. ನೋವು, ನಿರಾಸೆ, ಅವಮಾನ ಮುಂತಾದ ಕಷ್ಟ -ಕಾರ್ಪಣ್ಯಗಳು ನಮ್ಮ ಬದುಕನ್ನು ಕಾಡುತ್ತಿರುತ್ತವೆ. ಇವುಗಳು ಇದ್ದಾಗಲೇ ಬದುಕಿಗೊಂದು ಅರ್ಥ.

ಸುಖದ ಮಹತ್ವ ತಿಳಿಯಬೇಕಾದರೆ ಕಷ್ಟ ಅನುಭವಿಸಲೇ ಬೇಕು. ಆದ್ದರಿಂದ ಯುಗಾದಿಯು ಬದುಕಿನ ಎಲ್ಲ ಮಜಲುಗಳನ್ನು ಆತ್ಮ ವಿಶ್ವಾಸದಿಂದ ಎದುರಿಸುವ ಸ್ಥೈರ್ಯ ನೀಡುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಆಚರಿಸುವ ಪ್ರತೀಯೊಂದು ಹಬ್ಬಕ್ಕೂ ಅದರದೇ ಆದ ವಿಶೇಷತೆ ಇದೆ. ಆದರೆ ಯುಗಾದಿ ಹೊಸ ಬದುಕಿಗೂ, ಹೊಸ ನಿರ್ಣಯಗಳಿಗೂ, ಹೊಸ ಕನಸುಗಳಿಗೂ ಪ್ರೇರಣೆಯನ್ನು ನೀಡುತ್ತದೆ. ನಿನ್ನೆ ಇದ್ದಂತೆ ಇಂದೂ ಇದ್ದರೆ ಬದುಕಿಗೆ ಸೊಗಸಿಲ್ಲ. ಹೊಸತನದ ಕಂಪು ಎಲ್ಲರ ಬದುಕಲ್ಲೂ ಪಸರಿಸಲಿ. ಹೊಸ ಆಲೋಚನೆಗಳ, ಹೊಸ ಅವಕಾಶಗಳ ಪರ್ವ ಎಲ್ಲರ ಬದುಕಿಗೂ ಒದಗಿಬರಲಿ ಎಂಬುದೇ ನಮ್ಮೆಲ್ಲರ ಆಶಯ

– ಅಂಬಿಕಾ ಆರೂರು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next