ಬೆಂಗಳೂರು: ಚುನಾವಣಾ ನೀತಿ ಸಂಹಿತೆಯ ಬಿಸಿ ಈ ಬಾರಿ ಯುಗಾದಿ ಹಬ್ಬಕ್ಕೂ ತಟ್ಟಲಿದೆ. ಪ್ರಚಾರದ ಭರಾಟೆ ಇದ್ದು, ಹಬ್ಬದ ನೆಪದಲ್ಲಿ ಮತದಾರರಿಗೆ “ಆಮಿಷ’ಗಳನ್ನು ನೀಡುವ ರಾಜಕೀಯ ಪಕ್ಷಗಳ ಪ್ರಯತ್ನಗಳಿಗೆ “ಲಗಾಮು’ ಹಾಕಲು ಚುನಾವಣಾ ಆಯೋಗ ತಂತ್ರ ಹೆಣೆದಿದೆ.
ಯುಗಾದಿ ಹಬ್ಬದ ಪ್ರಯುಕ್ತ ಎಲ್ಲರಿಗೂ ರಜೆ ಇದ್ದರೂ, ಚುನಾವಣಾ ನೀತಿ ಸಂಹಿತೆ ಜಾರಿ ಕಾರ್ಯಾಚರಣೆಯಲ್ಲಿರುವ ಯಾವೊಬ್ಬ ಅಧಿಕಾರಿ ಅಥವಾ ಸಿಬ್ಬಂದಿ ಸೇರಿದಂತೆ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಯಾರಿಗೂ ರಜೆ ಇಲ್ಲ ಎಂದು ಫರ್ಮಾನು ಹೊರಡಿಸಿರುವ ಆಯೋಗ, ಹಬ್ಬದ ದಿನ ನೀತಿ ಸಂಹಿತೆ ಜಾರಿ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ವಿಐಪಿಗಳು ಸೇರಿದಂತೆ ಎಲ್ಲ ವಾಹನಗಳನ್ನು ತಪಾಸಣೆ ನಡೆಸಲು ಚುನಾವಣಾ ನೀತಿ ಸಂಹಿತೆ ಜಾರಿ ತಂಡಗಳಿಗೆ ಸೂಚನೆ ನೀಡಲಾಗಿದೆ. ಮುಖ್ಯವಾಗಿ ಹಬ್ಬದ ಮರುದಿನ ಅನೇಕ ಕಡೆ ಬಾಡೂಟದ (ವರ್ಷದ ತೊಡಕು) ವ್ಯವಸ್ಥೆ ಮಾಡುವ ಸಾಧ್ಯತೆಗಳಿರುವುದರಿಂದ ಸಾಮೂಹಿಕವಾಗಿ ದೊಡ್ಡ ಮಟ್ಟದಲ್ಲಿ ಅಡುಗೆ ತಯಾರಿಸುವ ಜಾಗಗಳ ಮೇಲೆ ನಿಗಾ ಇಟ್ಟು ತಪಾಸಣೆ ನಡೆಸಲಾಗುವುದು. ಇದಲ್ಲದೇ ಖಾಸಗಿ ಕಾರ್ಯಕ್ರಮಗಳನ್ನು, ಖಾಸಗಿ ಹಬ್ಬದ ಆಚರಣೆಯನ್ನು ಚುನಾವಣಾ ಉದ್ದೇಶಗಳಿಗೆ ಬಳಸಿಕೊಳ್ಳುವ ಅನುಮಾನಗಳು ಕಂಡು ಬಂದರೆ ಅಲ್ಲಿಯೂ ತಪಾಸಣೆ ನಡೆಸಲಾಗುವುದು. ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ರಾಜ್ಯಾದ್ಯಂತ 1,512 ಫ್ಲೈಯಿಂಗ್ ಸ್ಕ್ವಾಡ್, 1,837 ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು, 320 ಅಬಕಾರಿ ತಂಡಗಳು, 180 ಆದಾಯ ತೆರಿಗೆ ಅಧಿಕಾರಿಗಳ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. 700ಕ್ಕೂ ಹೆಚ್ಚು ಪೊಲೀಸ್ ನಾಕಾಗಳನ್ನು ಸ್ಥಾಪಿಸಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಈ ಎಲ್ಲ ತಂಡಗಳು ಹೆಚ್ಚಿನ ಕಟ್ಟೆಚ್ಚರ ವಹಿಸಲಿವೆ.ಇದರ ಜೊತೆಗೆ ಅನುಮಾನವಿರುವ ಹಾಗೂ ಸೂಕ್ಷ್ಮ ಎನಿಸಿರುವ ಪ್ರದೇಶಗಳ ಬಗ್ಗೆ ವಿಶೇಷ ಅಧಿಕಾರಿ ಮತ್ತು ತಂಡಗಳನ್ನು ಸಹ ನಿಯೋಜಿಸಲಾಗುತ್ತದೆ. ಹಬ್ಬದ ದಿನ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳು, ಸಂಭ್ರಮಾಚರಣೆಗಳ ಮೇಲೆ ವಿಶೇಷ ಗುಪ್ತಚಾರಿಕೆ ನಡೆಸಲಾಗುತ್ತದೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಗಳಿಗೆ ಹಬ್ಬದ ರಜೆ ಇಲ್ಲ. ಹಬ್ಬದ ಹಿನ್ನೆಲೆಯಲ್ಲಿ ವಿಚಕ್ಷಣೆಯನ್ನು ಹೆಚ್ಚಿಸಲಾಗುವುದು. ವಿಐಪಿಗಳ ವಾಹನಗಳು ಸೇರಿದಂತೆ ಪ್ರತಿಯೊಂದು ವಾಹನದ ತಪಾಸಣೆ ನಡೆಸಲಾಗುವುದು. ಎಲ್ಲ “ಕಮ್ಯೂನಿಟಿ ಕಿಚನ್ಸ್’ಗಳ ಮೇಲೆ ನಿಗಾ ಇಟ್ಟು,
ತಪಾಸಣೆ ನಡೆಸಲಾಗುತ್ತದೆ.
● ಡಾ. ಕೆ.ಜಿ. ಜಗದೀಶ್, ಅಪರ ಮುಖ್ಯ ಚುನಾವಣಾಧಿಕಾರಿ (ಚುನಾವಣಾ ವೆಚ್ಚ).