Advertisement

ಉದ್ಯಾವರ : ಮಳೆನೀರಿನ ತೋಡು ಸೇರುತ್ತಿದೆ ತ್ಯಾಜ್ಯ

11:19 PM May 18, 2019 | sudhir |

ಕಟಪಾಡಿ: ಉದ್ಯಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೇಲ್ಪೇಟೆ ಬಳಿ ಸಂಗ್ರಹಗೊಂಡಿರುವ ತ್ಯಾಜ್ಯವು ಮಳೆ ನೀರು ಹರಿಯುವ ಕಕ್ಕೆದಾರು ತೋಡಿನಲ್ಲಿ ತುಂಬಿಕೊಂಡಿದ್ದು, ಮಳೆಗಾಲದಲ್ಲಿ ನೀರಿನ ಸರಾಗ ಹರಿವಿಗೆ ಅಡ್ಡಿಯಾಗುವ ಆತಂಕ ಎದುರಾಗಿದೆ.

Advertisement

ವಿವಿಧ ವಾಣಿಜ್ಯ ಮಳಿಗೆ, ವಸತಿ ಮಳಿಗೆ, ಮನೆಮಂದಿ, ದಾರಿ ಹೋಕರು, ಇಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಇದರ ಬಗ್ಗೆ ಗೊತ್ತಿದ್ದೂ ಪಂಚಾಯತ್‌ ನಿರ್ಲಕ್ಷ್ಯ ವಹಿಸಿದೆ. ತ್ಯಾಜ್ಯ ಎಸೆಯುವವರ ವಿರುದ್ಧವೂ ಯಾವುದೇ ಕಠಿಣ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಅಥವಾ ಎಸೆದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಗೋಜಿಗೂ ಕೈ ಇಕ್ಕದೆ ತ್ಯಾಜ್ಯವು ಅಲ್ಲಿಯೇ ಕೊಳೆತು ಪರಿಸರ ಅಸಹ್ಯವಾಗುತ್ತಿದೆ.

ಪರಿಸರದ ನಿವಾಸಿಗಳಿಗೆ ತೊಂದರೆ
ತ್ಯಾಜ್ಯದಿಂದಾಗಿ ಪರಿಸರದ ನಿವಾಸಿಗಳಿಗೂ ಇದರಿಂದ ತೊಂದರೆ ಉಂಟಾಗುತ್ತಿದ್ದು, ಈ ಬಗ್ಗೆ ಪಂಚಾಯತ್‌ ಗಮನಕ್ಕೆ ತಂದರೂ ತಕ್ಕ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಯಾದ ಪದ್ಮನಾಭ ಕಾಮತ್‌ ಬೇಸರ ವ್ಯಕ್ತ ಪಡಿಸುತ್ತಾರೆ.

ಜಲಚರಗಳಿಗೂ ಅಪಾಯ
ಈ ತ್ಯಾಜ್ಯವು ಮಳೆ ನೀರಿನೊಂದಿಗೆ ಹರಿದು ಹೋದಲ್ಲಿ ಉದ್ಯಾವರ ಪಾಪನಾಶಿನಿ ಹೊಳೆಗೆ ಸೇರಿಕೊಂಡು ಅಲ್ಲಿನ ಜಲಚರಗಳಿಗೂ ಅಪಾಯ ಜೊತೆಗೆ ಪರಿಸರಕ್ಕೂ ಅಪಾಯ. ಜೊತೆಗೆ ನೀರು ಸರಾಗವಾಗಿ ಹರಿಯಲು ಈ ತ್ಯಾಜ್ಯವು ತೊಡಕುಂಟು ಮಾಡುವ ಎಲ್ಲಾ ಸಾಧ್ಯತೆಗಳೂ ಇದ್ದು ಸಂಬಂಧ ಪಟ್ಟ ಇಲಾಖೆಯು ಕೂಡಲೇ ಈ ತ್ಯಾಜ್ಯವನ್ನು ತೆರವುಗೊಳಿಸಿ, ತ್ಯಾಜ್ಯ ಎಸೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸ್ಥಳೀಯರು ಒತ್ತಾಯಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ
2 ತಿಂಗಳ ಮೊದಲು ಎಲ್ಲರ ಸಹಕಾರದಿಂದ ಸುಮಾರು 4 ಲೋಡ್‌ಗಳಷ್ಟು ತ್ಯಾಜ್ಯವನ್ನು ಈ ಭಾಗದಿಂದ ವಿಲೇವಾರಿ ಮಾಡಲಾಗಿತ್ತು. ಕಸಸಂಗ್ರಹಣಾ ವ್ಯವಸ್ಥೆ ಇದ್ದರೂ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವುದು ಸರಿಯಲ್ಲ. ಸಾರ್ವಜನಿಕರು ಈ ಬಗ್ಗೆ ಮಾಹಿತಿ ನೀಡಿದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುತ್ತದೆ. ಕೆಲ ದಿನಗಳಲ್ಲಿ ಇಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತದೆ.
-ರಮಾನಂದ ಪುರಾಣಿಕ್‌, ಪಿ.ಡಿ.ಒ ಉದ್ಯಾವರ ಗ್ರಾ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next