ಕಟಪಾಡಿ: ಉದ್ಯಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯಾವರ ಗ್ರಾ.ಪಂ. ನೀರಿನ ಮಟ್ಟ ಕಡಿಮೆಗೊಂಡಿರುವ ಬಾವಿಗಳನ್ನು ನಿರ್ವಹಣೆ ಮಾಡುವ ಕೆಲಸ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಗುಡ್ಡೆ ಅಂಗಡಿ ಎಸ್.ಸಿ., ಕಾಲನಿಯ ವಾಟರ್ ಟ್ಯಾಂಕ್ ಬಳಿಯ ತೆರೆದ ಬಾವಿ, ಗುಡ್ಡೆಯಂಗಡಿ ಅಂಗನವಾಡಿ ಬಳಿಯ ತೆರೆದ ಬಾವಿ, ಕಾಲನಿಯ ಕೊನೆಯಲ್ಲಿ ಮಾಧವ ಮನೆ ಬಳಿಯಲ್ಲಿ ಇರುವ ತೆರೆದ ಬಾವಿ ಮತ್ತು ಪಿತ್ರೋಡಿಯ ಮುಡ್ಡಲಗುಡ್ಡೆ ಎಂಬಲ್ಲಿರುವ ಎರಡು ಸರಕಾರಿ ತೆರೆದ ಬಾವಿಗಳ ಹೂಳೆತ್ತುವುದರ ಜತೆಗೆ ನಿರ್ವಹಣೆ ನಡೆಸಲಾಗುತ್ತಿದೆ. ಆ ಮೂಲಕ ಮುಂಬರುವ ಮಳೆಗಾಲಕ್ಕೂ ಮುನ್ನ ತೆರೆದ ಬಾವಿಗಳ ಕುಡಿಯುವ ನೀರಿನ ಶುದ್ಧತೆ ಜತೆಗೆ ಕುಡಿಯುವ ನೀರಿನ ಪ್ರಮಾಣದ ಹೆಚ್ಚಳಕ್ಕೆ ಈ ಕಾಮಗಾರಿ ಸಹಕಾರಿಯಾಗಬಲ್ಲುದು.
ಉದ್ಯಾವರ ಗ್ರಾ. ಪಂ. ವ್ಯಾಪ್ತಿಯಲ್ಲಿ ಇದೀಗ 5 ಬಾವಿಗಳ ನಿರ್ವಹಣೆಗಾಗಿ ಸುಮಾರು 60 ಸಾವಿರಕ್ಕೂ ಮಿಕ್ಕಿ ಅನುದಾನ ಬಳಸಿಕೊಳ್ಳಲಾಗುತ್ತಿದ್ದು, ಗುಡ್ಡೆಯಂಗಡಿಯ ಬಾವಿಯೊಂದರಲ್ಲಿ ಬಂಡೆಯಿಂದ ಅದರೊಳಗಿನ ಲಭ್ಯ ಅಲ್ಪ ಸ್ಥಳದಲ್ಲಿ ಕಾಂಕ್ರೀಟ್ ರಿಂಗ್ ಕಟ್ಟುವ ಮೂಲಕ ನೀರಿನ ಸೆಲೆ ಹೆಚ್ಚಳಕ್ಕೆ ಕಾಮಗಾರಿ ಮುಂದುವರಿಸಲಾಗುತ್ತಿದೆ.
ಗ್ರಾ.ಪಂ. ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಜ್ ಇಸ್ಮಾಯಿಲ್ ಪಳ್ಳಿ, ಪಿ.ಡಿ.ಒ. ರಮಾನಂದ ಪುರಾಣಿಕ್, ಪಂಚಾಯತ್ ಸಿಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಳೆಗಾಲದ ಆರಂಭಕ್ಕೂ ಮುನ್ನ ಇಂತಹ ನೀರಿನ ಸೆಲೆ ಸ್ವತ್ಛಗೊಳಿಸುವ ಮೂಲಕ ಜಲಮೂಲಗಳ ನಿರ್ವಹಣೆಯಿಂದ ಮುಂಬರುವ ಸಾಲಿನಲ್ಲಿ ಹೆಚ್ಚಿನ ಪ್ರಮಾಣದ ಕುಡಿಯುವ ನೀರಿನ ಲಭ್ಯತೆಗೆ ಇಂತಹ ಕಾಮಗಾರಿ ಸಹಕಾರಿಯಾಗಿದೆ.
ಐದು ಬಾವಿಯಲ್ಲಿ ಹೊಳೆತ್ತಲಾಗಿದೆ
ಜಲಮೂಲಗಳನ್ನು ಸಮರ್ಪಕವಾಗಿ ಇರಿಸುವಲ್ಲಿ ಇಂತಹ ಕಾಮಗಾರಿ ಅತ್ಯವಶ್ಯಕ. ಕುಡಿಯುವ ನೀರಿನ ಲಭ್ಯತೆಯ ಹೆಚ್ಚಳಕ್ಕಾಗಿ ಐದು ಬಾವಿಗಳ ಹೂಳೆತ್ತುವ ಕೆಲಸ ಕಾರ್ಯವನ್ನು ನಡೆಸಲಾಗುತ್ತಿದೆ.
-ರಮಾನಂದ ಪುರಾಣಿಕ್, ಪಿ.ಡಿ.ಒ. ಉದ್ಯಾವರ ಗ್ರಾ.ಪಂ.