ಕಟಪಾಡಿ: ಜಿಲ್ಲೆಯಲ್ಲಿ ಪ್ರಥಮವಾಗಿ ಕರ್ನಾಟಕ ಸಿಇಟಿ, ನೀಟ್, ಡಿಪ್ಲೋಮಾ, ಪಿ.ಜಿ. ಸಿಇಟಿ ಇದರ ವಿದ್ಯಾರ್ಥಿಗಳ ದೃಢೀಕರಣ ಕೇಂದ್ರ ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ನಡೆಯುತ್ತಿದ್ದು, ಸೇವೆಯ ಬಗ್ಗೆ ಉತ್ತಮ ರೀತಿಯ ಮೆಚ್ಚುಗೆ ವ್ಯಕ್ತವಾಗಿದೆ.
ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ನಡೆಯುತ್ತಿರುವ ಈ ದೃಢೀಕರಣ ಸೆಂಟರ್‌ನ ನೋಡಲ್ ಆಫೀಸರ್ ಆಗಿ ಪಂಡರಿನಾಥ ಎಸ್., ಎಡಿಶನಲ್ ನೋಡಲ್ ಆಫೀಸರ್ ಆಗಿ ರಾಘವೇಂದ್ರ ಎನ್ ಆರ್., ಕಂಪ್ಯೂಟರ್ ಆಪರೇಟರ್ ಸಹಿತ ಮೂವರು ದೃಢೀಕರಣ ಅಧಿಕಾರಿಗಳು, ಮೂರು ಕಂಪ್ಯೂಟರ್,ದೃಢೀಕರಣ ಕೌಂಟರ್ ಮೂಲಕ ಸುಸಜ್ಜಿತವಾಗಿ ಕಚೇರಿಯು ಅಧಿಕಾರಿಗಳ ಸಹಿತ ಒಟ್ಟು 14 ಸಿಬಂದಿ ಸಮರ್ಥವಾಗಿ ಕಾರ್ಯವೈಖರಿಯನ್ನು ನಡೆಸಿದ್ದಾರೆ.
ಜೂ.6ರಂದು ದೃಢೀಕರಣ ಕೇಂದ್ರ ಸೇವೆಯನ್ನು ಆರಂಭಿಸಿದ್ದು, ಈಗಾಗಲೇ ಸಿಇಟಿ ಇದರ ಸುಮಾರು 1,850 ವಿದ್ಯಾರ್ಥಿಗಳ ದಾಖಲಾತಿಗಳ ಪರಿಶೀಲನೆಯನ್ನು ನಡೆಸಲಾಗಿದೆ. ಆರಂಭದಲ್ಲಿ ಸುಮಾರು 400ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಈ ದಾಖಲಾತಿಯಲ್ಲಿ ಪಾಲ್ಗೊಂಡಿದ್ದರಿಂದ ರಾತ್ರಿ 9 ಗಂಟೆಯವರೆಗೂ ದಾಖಲಾತಿ ಪರಿಶೀಲನೆಯನ್ನು ನಡೆಸುವ ಮೂಲಕ ಸಮರ್ಥ ಕರ್ತವ್ಯ ನಿರ್ವಹಿಸಿರುವುದರಿಂದ ಬಹಳಷ್ಟು ದೂರದ ಊರುಗಳಿಂದ, ಜಿಲ್ಲಾ ಗಡಿಭಾಗದಿಂದ ಆಗಮಿಸಿದ್ದ ವಿದ್ಯಾರ್ಥಿಗಳು-ಪೋಷಕರೂ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಡಿ.ಡಿ.ಪಿಯು. ಸುಬ್ರಹ್ಮಣ್ಯ ಜೋಷಿ ಅವರು ಪರಿಶೀಲನೆಯನ್ನು ನಡೆಸಿರುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೂ.21ರಿಂದ ನೀಟ್ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಆರಂಭಗೊಂಡಿದ್ದು, ಕರ್ನಾಟಕ ಅಭ್ಯರ್ಥಿಗಳಿಗೆ ಜೂ.21ಮತ್ತು 22ರಂದು ನಡೆಯಲಿದೆ. ಹೊರರಾಜ್ಯದ ವಿದ್ಯಾರ್ಥಿಗಳಿಗೆ ಜೂ.24ರಿಂದ 27ರವರೆಗೆ ನೀಟ್ ಆಲ್ ಇಂಡಿಯಾ ವಿದ್ಯಾರ್ಥಿಗಳ ದೃಢೀಕರಣ ನಡೆಯಲಿದೆ.
ಪ್ರಥಮವಾಗಿ ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತೆರೆದುಕೊಂಡಿರುವ ದೃಢೀಕರಣ ಕೇಂದ್ರವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಅಧಿಕಾರಿಗಳು, ಸಿಬಂದಿ ಯಶಸ್ವಿಯಾಗಿದ್ದಾರೆ.
ಸಾಕಷ್ಟು ಜವಾಬ್ದಾರಿಯುತವಾಗಿ ಸಣ್ಣಪುಟ್ಟ ತೊಂದರೆಗಳನ್ನು ಕಾನೂನಾತ್ಮಕ ದೃಷ್ಟಿಯಿಂದಲೇ ಸರಿಪಡಿಸಿ ಅನುಕೂಲತೆಗಳನ್ನು ಕಲ್ಪಿಸಿರುತ್ತಾರೆ.
ಸೇವೆಯ ತೃಪ್ತಿ ಇದೆ
ಎಸ್‌ಡಿಎಂ ಆಯುರ್ವೇದ ಕಾಲೇಜು ಸುಸಜ್ಜಿತ ಕಚೇರಿಯನ್ನು ಒದಗಿಸಿದೆ. ಇಲ್ಲಿ ಬಂದಿರುವ ಯಾವುದೇ ವಿದ್ಯಾರ್ಥಿಗಳು ಹಿಂದಿರುಗಿಲ್ಲ. ದಾಖಲಾತಿಗಳ ಬಗ್ಗೆ ಸಮರ್ಪಕವಾಗಿ ದೃಢೀಕರಣ ಮಾಡಲಾಗಿದೆ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಸೇವೆಯನ್ನು ನಿಭಾಯಿಸಿದ ತೃಪ್ತಿ ಇದೆ .
– ಪಂಡರಿನಾಥ ಎಸ್.,
ನೋಡಲ್ ಆಫೀಸರ್, ವೆರಿಫಿಕೇಶನ್ ಸೆಂಟರ್.