Advertisement

ಸ್ವಕ್ಷೇತ್ರದಲ್ಲಿ ಮೂಡಿಬಂದ ಉಡುಪಿ ಕ್ಷೇತ್ರ ಮಹಾತ್ಮೆ

05:34 PM Jun 20, 2019 | mahesh |

ಶ್ರೀಕೃಷ್ಣಮಠದ ಸುವರ್ಣ ಗೋಪುರ ಸಮರ್ಪಣೋತ್ಸವದಲ್ಲಿ ರೂಪುಗೊಂಡ ವಿವಿಧ ಗೋಪುರಗಳಲ್ಲಿ ಕಲಾಗೋಪುರವೂ ಒಂದು. ಈ ಪ್ರಕಾರದಲ್ಲಿ ಮೊದಲ ಬಾರಿಗೆ ಪ್ರಸ್ತುತಗೊಂಡ “ಉಡುಪಿ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರಸಂಗವೂ ಒಂದು. ಈ ಹಿಂದೆ ಉಡುಪಿ- ಉಡಿಪಿ- ಉಡಿ³ ಎಂಬ ಯಕ್ಷಗಾನ ಪ್ರಯೋಗ ಕಂಡಿದ್ದರೂ ಮತ್ತೆ ಅದು ಮುಂದುವರಿದಿರಲಿಲ್ಲ.

Advertisement

ಹೊಸ ಪ್ರಸಂಗವನ್ನು ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಆಶಯದಂತೆ ಬರೆದವರು ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಶಿಷ್ಯರಾದ ಮೈಸೂರಿನ ಕೃಷ್ಣಕುಮಾರ ಆಚಾರ್ಯ. ಸುಮಾರು 200 ಸೊಲ್ಲುಗಳ ಯಕ್ಷಗಾನ ಕಥಾನಕವನ್ನು ನಾಲ್ಕೈದು ಗಂಟೆಗಳಿಗೆ ಸೂಕ್ತವಾಗಿ ರಚಿಸಿದ್ದಾರೆ. ಇದು ಕಥಾನಕಗಳ ಗುತ್ಛವೆಂಬಂತಿದೆ. ಶ್ರೀಅನಂತೇಶ್ವರ, ಶ್ರೀಚಂದ್ರಮೌಳೀಶ್ವರನ ಕಥೆಯೊಂದಿಗೆ ಶ್ರೀಕೃಷ್ಣನ ಕಥೆಯನ್ನೂ ಹೆಣೆದ ಕಥಾನಕವಿದು. ತೆಂಕುತಿಟ್ಟಿನ ಯಕ್ಷಗಾನವನ್ನು ಇಲ್ಲಿ ಆಡಿತೋರಿಸಲಾಯಿತು.

ಕಲಾವಿದರ ಬಳಗ
ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಪ್ರಫ‌ುಲ್ಲಚಂದ್ರ ನೆಲ್ಯಾಡಿ, ಚಂಡೆ ಮದ್ದಲೆಯಲ್ಲಿ ಕೃಷ್ಣಪ್ರಕಾಶ ಉಳಿತ್ತಾಯ, ಚೈತನ್ಯಕೃಷ್ಣ ಪದ್ಯಾಣ, ಕೌಶಿಕ್‌ ರಾವ್‌, ಪಾತ್ರಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವ‌ರ ಭಟ್‌ (ರಾಮಭೋಜ), ಮೈಸೂರು ಕೃಷ್ಣಕುಮಾರ ಆಚಾರ್ಯ (ಪರಶುರಾಮ), ಭಾಗಮಂಡಲ ಮಹಾಬಲೇಶ್ವರ ಭಟ್‌, ಬಾಲಕೃಷ್ಣ ಮಣಿಯಾಣಿ (ಹಾಸ್ಯಗಾರರು), ವಾಸುದೇವ ರಂಗಾ ಭಟ್‌ (ಶಿವ), ಸುಬ್ರಾಯ ಹೊಳ್ಳ (ದಕ್ಷ), ಜಗದಾಭಿರಾಮ ಪಡುಬಿದ್ರಿ (ಘಟಾಸುರ), ಶ್ರೀರಮಣ ಆಚಾರ್ಯ ಕಾರ್ಕಳ (ದುರ್ಬೀಜಾಸುರ), ಡಾ|ಪುತ್ತೂರು ಶ್ರೀಧರ ಭಂಡಾರಿ (ಕೃಷ್ಣ), ಅಮ್ಮುಂಜೆ ಮೋಹನಕುಮಾರ್‌ (ಚಂದ್ರ), ಪ್ರೊ|ಎಂ.ಎಲ್‌.ಸಾಮಗ (ನಾರದ), ಶಶಿಕಾಂತ ಶೆಟ್ಟಿ ಕಾರ್ಕಳ, ಅಕ್ಷಯ ಮಾರ್ನಾಡು, ಪ್ರಶಾಂತ ನೆಲ್ಯಾಡಿ (ಸ್ತ್ರೀಪಾತ್ರ), ಕಲ್ಮಾಂಜೆ ವಾಸುದೇವ ಉಪಾಧ್ಯಾಯ (ಮಧ್ವಾಚಾರ್ಯ), ವಾಸುದೇವ ರಾವ್‌, ರುದ್ರಮನ್ಯು, ಶಿವಮನ್ಯು, ಕೌಶಲ ರಾವ್‌ (ಇತರ) ಭಾಗವಹಿಸಿದ್ದರು.

ಅನಂತೇಶ್ವರನ ಕಥೆ
ಕಥೆ ಸ್ಕಾಂದ ಪುರಾಣದ ಉಲ್ಲೇಖದಂತೆ ಪರಶುರಾಮ ಸೃಷ್ಟಿಯಿಂದ ಆರಂಭಗೊಳ್ಳುತ್ತದೆ. ಪರಶುರಾಮ ಕರಾವಳಿ ಪ್ರಾಂತ್ಯವನ್ನು ಸೃಷ್ಟಿಸಿದ ಅನಂತರ ರಾಮಭೋಜ ಅರಸ ಅಶ್ವಮೇಧ ಯಾಗಕ್ಕೆ ನೇಗಿಲು ಉಳುವುದು, ಅಸುರನಾಗಿ ಬಂದ ಘಟಕ ಸರ್ಪ ಸಾಯುವುದು, ರಜತಪೀಠದ ದಾನವನ್ನು ಪರಶುರಾಮ ಸ್ವೀಕರಿಸಿ ಲಿಂಗರೂಪದಲ್ಲಿ ಸಾನಿಧ್ಯವಹಿಸುವುದು, ಸುತ್ತ ನಾಲ್ಕು ನಾಗಾಲಯ, ನಾಲ್ಕು ದುರ್ಗಾಲಯಗಳ ಸ್ಥಾಪಿಸುವುದು, ಓರ್ವ ಭಕ್ತನ ಬೇಡಿಕೆಯಂತೆ ಅನಂತೇಶ್ವರನ ಸನ್ನಿಧಾನ ಪಣಿಯಾಡಿ ಅನಂತ ಪದ್ಮನಾಭ ದೇವರಾಗಿ ಕಾಣಿಸಿಕೊಳ್ಳುವುದು ಅನಂತೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಕಥೆಯಾಗಿದೆ.

ವೈಜ್ಞಾನಿಕತೆ – ಸಾಮಾಜಿಕತೆ
ಚಂದ್ರೇಶ್ವರ ದೇವಸ್ಥಾನದ ಕಥೆಯಲ್ಲಿ ಚಂದ್ರ ಮತ್ತು 27 ನಕ್ಷತ್ರಗಳ ಸಾಂಕೇತಿಕ ಗುಣಲಕ್ಷಣಗಳು ವೈಜ್ಞಾನಿಕವಾಗಿ ತಾಳೆಯಾಗುವುದು ವಿಶೇಷ. ಉದಾಹರಣೆಗೆ ಚಂದ್ರನ ಕಾಂತಿ ಕೃಷ್ಣ ಮತ್ತು ಶುಕ್ಲ ಪಕ್ಷಗಳಲ್ಲಿ ಕ್ಷೀಣಿಸುವುದು, ವೃದ್ಧಿಸುವುದು ನಮಗೆ ಗೋಚರವಾದರೆ, ಆಯಾ ನಕ್ಷತ್ರಗಳನ್ನು ಹೊಂದಿದ ವ್ಯಕ್ತಿಗಳ ಗುಣಲಕ್ಷಣಗಳನ್ನು ನೋಡಿಯೇ ಅಳೆಯಬೇಕು. ದಕ್ಷನ 27 ಹೆಣ್ಣು ಮಕ್ಕಳನ್ನು ಚಂದ್ರನಿಗೆ ಮದುವೆ ಮಾಡಿಕೊಡಲಾಗುತ್ತದೆ. ಇವರಲ್ಲಿ ರೋಹಿಣಿ ಸಮಾಧಾನದ ಗುಣ ಉಳ್ಳವಳು, ಕೃತ್ತಿಕೆ ಕಡಕ್ಕಾಗಿ ಮಾತನಾಡುವವಳು, ಆಶ್ಲೇಷೆ ಬುಸುಗುಟ್ಟುವ ಸ್ವಭಾವ ಹೊಂದಿದವರಾಗಿರುತ್ತಾರೆ. ಸಮಯ ಮಿತಿಗೆ ಸರಿಯಾಗಿ ಮೂವರನ್ನು ಮಾತ್ರ ಪ್ರದರ್ಶನದಲ್ಲಿ ತೋರಿಸಲಾಯಿತು. ಒಟ್ಟಾರೆ ಅರ್ಥವೆಂದರೆ 27 ಹೆಮ್ಮಕ್ಕಳು 27 ಬುದ್ಧಿಯವರಾಗಿರುತ್ತಾರೆ. ಕೊನೆಗೆ ಸಮಾಧಾನ ಬುದ್ಧಿಯ ರೋಹಿಣಿಯೊಂದಿಗೆ ಚಂದ್ರ ತೆರಳುವ ಲೋಕಸಹಜ ನಡೆ ಕಥೆಯಲ್ಲಿ ಬರುತ್ತದೆ. ಚಂದ್ರನ ನಡೆ ವಿರುದ್ಧ 26 ಹೆಮ್ಮಕ್ಕಳು ದಕ್ಷನ ಬಳಿ ದೂರು ಕೊಟ್ಟಾಗ ಚಂದ್ರ ಕಾಂತಿಹೀನವಾಗಲಿ ಎಂದು ಶಪಿಸುತ್ತಾನೆ. ಇತ್ತ ಚಂದ್ರ ಶಿವನನ್ನು ಕುರಿತು ತಪಸ್ಸು ಮಾಡಿದಾಗ ಕಾಂತಿ ವೃದ್ಧಿಗೆ ಹರಸುತ್ತಾನೆ. ಇದು ಶಿವ- ದಕ್ಷನ ನಡುವೆ ವಾಗ್ವಾದಕ್ಕೆ ಕಾರಣವಾದಾಗ ವಿಷ್ಣು ಬಂದು ಚಂದ್ರನ ಮಹತ್ವವನ್ನು ವಿವರಿಸುತ್ತಾನೆ. ಚಂದ್ರ ಓಷಧೀಶ. ಔಷಧಿ ಲತೆಗಳು, ಧಾನ್ಯ, ವೃಕ್ಷಗಳು ಬೆಳೆಯಲು ಚಂದ್ರ ಅನಿವಾರ್ಯ ಎಂಬ ಅಭಿಪ್ರಾಯಪಟ್ಟು, ಶುಕ್ಲ ಪಕ್ಷದಲ್ಲಿ ವೃದ್ಧಿ, ಕೃಷ್ಣಪಕ್ಷದಲ್ಲಿ ಕಾಂತಿಹೀನವಾಗುವ ತೀರ್ಪು ನೀಡುತ್ತಾನೆ. ಇಲ್ಲಿ ವೈಜ್ಞಾನಿಕವಾಗಿ ಸಸ್ಯಶಾಸ್ತ್ರವೂ, ಸಮಕಾಲೀನ ಸಮಾಜದಲ್ಲಿ ರಾಜೀ ಪಂಚಾಯಿತಿ ವಿಧಾನವೂ ಗೋಚರವಾಗುತ್ತದೆ. ಚಂದ್ರನಿಗೆ ಶಿವ ಪ್ರತ್ಯಕ್ಷವಾದ ಸ್ಥಳವೇ ಚಂದ್ರೇಶ್ವರ ದೇವಸ್ಥಾನ.

Advertisement

ಕೃಷ್ಣಕಥೆಯಲ್ಲಿ ಉಡುಪಿ-ದ್ವಾರಕೆ ನೆಲೆ
ಅನಂತರ ಮಧ್ಯಗೇಹ ಭಟ್ಟರು ಅನಂತೇಶ್ವರನ ರಥೋತ್ಸವದಲ್ಲಿ ಪಾಲ್ಗೊಂಡು ಪುತ್ರಸಂತಾನವನ್ನು ಯಾಚಿಸುವುದು, ಹುಂಬನೊಬ್ಬ ಅನಂತೇಶ್ವರ ದೇವಸ್ಥಾನದ ಎದುರಿನ ಕಲ್ಲುಕಂಬವನ್ನೇರಿ ಭವಿಷ್ಯದಲ್ಲಿ ಮಹಾನ್‌ ವ್ಯಕ್ತಿ ಅವತರಿಸುತ್ತಾನೆನ್ನುವುದು, ಅತ್ತ ದ್ವಾರಕೆಯಲ್ಲಿ ಕೃಷ್ಣನ ಬಾಲಲೀಲೆ ತೋರಿಸಲು ದೇವಕಿ ಯಾಚಿಸಿದಾಗ ಬಾಲಲೀಲೆ ತೋರಿಸುವುದು, ಇದನ್ನು ಕಂಡ ರುಕ್ಮಿಣಿ ಅಂತಹ ಪ್ರತಿಮೆ ಬಯಸುವುದು, ವಿಶ್ವಕರ್ಮನಿಂದ ಕೃಷ್ಣ ಪ್ರತಿಮೆ ತಯಾರಿಸಿ ಕೊಡುವುದು, ದ್ವಾರಕೆ ಮುಳುಗುವಾಗ ಪ್ರತಿಮೆಯನ್ನು ಅರ್ಜುನ ರುಕ್ಮಿಣಿ ಉದ್ಯಾನವನದಲ್ಲಿ ಬಿಡುವುದು, ಅದಕ್ಕೆ ಗೋಪಿಚಂದನ ಮೆತ್ತಿಕೊಂಡ ಪ್ರತಿಮೆ ಮುಂದೆ ಹಡಗಿನವರ ಮೂಲಕ ಮಲ್ಪೆಗೆ ಬರುವುದು, ಇತ್ತ ಮಧ್ವಾಚಾರ್ಯರು ಜನಿಸಿ ಮಲ್ಪೆಗೆ ತೆರಳಿದಾಗ ಹಡಗು ಬರುವುದು, ಆ ಪ್ರತಿಮೆ ಮಧ್ವಾಚಾರ್ಯರಿಗೆ ಸಿಕ್ಕಿ ಉಡುಪಿಯಲ್ಲಿ ಪ್ರತಿಷ್ಠೆ ಮಾಡುವುದು ಮೂರನೆಯ ಭಾಗದಲ್ಲಿ ಚಿತ್ರಿತವಾಗಿದೆ.

ರಂಗ ಪ್ರಯೋಗಗಳು
ಕಾವಲುಗಾರನ ಮೂಲಕ ಹಾಸ್ಯ, ಚಂದ್ರ- 27 ನಕ್ಷತ್ರಗಳ ಹೆಸರು ಹೊಂದಿದ ಹೆಮ್ಮಕ್ಕಳ ಕಥೆಯಲ್ಲಿ ಜಲಕ್ರೀಡೆ, ಘಟಸರ್ಪದ ಘಟನೆಯಲ್ಲಿ ಘಟಾಸುರ ಹೆಸರಿನ ಅಸುರ ಚಿತ್ರಣ, ದ್ವಾರಪಾಲಕರು- ಆಕ್ರಮಣ ಹೀಗೆ ಅನೇಕ ಸಂದರ್ಭ ಕಲಾಲೋಕಕ್ಕೆ ಅನುಗುಣವಾದ ರಂಗ ಪ್ರಕ್ರಿಯೆಗಳನ್ನು ಪ್ರಸಂಗಕರ್ತರು ಅಳವಡಿಸಿದ್ದಾರೆ.

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next