ಉಡುಪಿ: ದೊಡ್ಡಣಗುಡ್ಡೆ ಮೂಲದ ನಂದನ್‌ಕೃಷ್ಣ ಈಗ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಹುದ್ದೆ ಅಲಂಕರಿಸಿದ್ದಾರೆ.
ಕೇರಳದ ನಿವೃತ್ತ ಡಿವೈಎಸ್‌ಪಿ ಶ್ರೀರಾಮ್ ಮತ್ತು ಗಾಯತ್ರಿ ದಂಪತಿಯ ಏಕಮಾತ್ರ ಪುತ್ರ ನಂದನ್‌ಕೃಷ್ಣ ಕೇರಳದ ಪಯ್ಯನೂರಿನಲ್ಲಿ ತರಬೇತಿಯನ್ನು ಪಡೆದು ನವೆಂಬರ್‌ನಲ್ಲಿ ನೌಕಾಪಡೆಯ ಸಬ್ ಲೆಫ್ಟಿನೆಂಟ್ ಆಗಿ ಸೇವೆ ಆರಂಭಿಸಿದ್ದಾರೆ. ಪ್ರಸ್ತುತ ಅವರ ಕಾರ್ಯಕ್ಷೇತ್ರ ಗುಜರಾತ್ ರಾಜ್ಯದ ಜಾಮ್‌ನಗರದ ಐಎನ್‌ಎಸ್ ವಲ್ಸುರದಲ್ಲಿದೆ.
ಆಜಾನುಬಾಹು ವ್ಯಕ್ತಿತ್ವದ ನಂದನ್‌ಕೃಷ್ಣ ಅವರಿಗೆ ಇನ್ನೂ 21ರ ಎಳೆ ಹರೆಯ. ಅಳಿಕೆಯಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ ಓದಿದ ನಂದನ್‌ಕೃಷ್ಣ ಅವರು ನಾಲ್ಕು ವರ್ಷ ನೌಕಾಪಡೆಯಲ್ಲಿ ತರಬೇತಿ ಪಡೆದರು. ಅವರಿಗೆ ತಂದೆಯವರ ಪೊಲೀಸ್ ಕರ್ತವ್ಯ ಮತ್ತು ದೊಡ್ಡಪ್ಪ ಶ್ರೀಧರ ಕಾರ್ಣಿಕ್ ಅವರ ನೌಕಾಪಡೆಯ ಸೇವೆ ಸ್ಫೂರ್ತಿ ನೀಡಿದೆ.
ಶ್ರೀಧರ ಕಾರ್ಣಿಕ್ ಅವರು ಕಾರವಾರದ ನೌಕಾ ನೆಲೆಯಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಇವರು ಗುಜರಾತ್‌ನಲ್ಲಿ ಭೂಕಂಪ ಉಂಟಾದಾಗ ಪರಿಹಾರ ಕಾರ್ಯದಲ್ಲಿ ತೋರಿದ ಸಾಧನೆ ಗಾಗಿ ಅತ್ಯುನ್ನತವಾದ ನೌಕಾ ಸೇನಾ ಪದಕವನ್ನು ಪಡೆದವರು. ಕಾರವಾರದಲ್ಲಿ ಕಮಾಂಡರ್ ಆಗಿದ್ದಾಗ ನೌಕಾ ನೆಲೆಗೆ ಹೋಗಿ ಅಲ್ಲಿನ ಕಾರ್ಯನಿರ್ವಹಣೆಯನ್ನು ಹತ್ತಿರದಿಂದ ಕಂಡಿದ್ದರು. ತಂದೆ ಶ್ರೀರಾಮ್ ಅವರಿಗೆ ಕೇರಳ ಸರಕಾರದ ಮುಖ್ಯಮಂತ್ರಿ ಪದಕ ಮತ್ತು ರಾಷ್ಟ್ರಪತಿ ಪದಕ ಬಂದಿದೆ.
ಮೂಲತಃ ಕಾಸರಗೋಡು ಜಿಲ್ಲೆ ಬಾಯಾರು ಮೂಲದವರಾದ ಶ್ರೀರಾಮ್ ಅವರು ನಿವೃತ್ತಿ ಬಳಿಕ ಉಡುಪಿಗೆ ಬಂದು ನೆಲೆಸಿದ್ದಾರೆ. ಸೇನಾ ಕ್ಷೇತ್ರದಲ್ಲಿ ಶಿಸ್ತಿನ ಜೀವನವಿರುತ್ತದೆ. ನಮ್ಮ ಭವಿಷ್ಯವನ್ನು ಹೇಗೆ ರೂಪಿಸಿ ಕೊಳ್ಳಬೇಕು ಎಂಬ ನಿಖರತೆ ಇರುತ್ತದೆ. ದೇಶ ಸೇವೆಗೆ ಬಹಳಷ್ಟು ಅವಕಾಶಗಳಿರುತ್ತವೆ. ತಂದೆಯವರ ಪೊಲೀಸ್ ಕಾರ್ಯಕ್ಷಮತೆ ಮತ್ತು ದೊಡ್ಡಪ್ಪನವರ ನೌಕಾಪಡೆಯ ಕಾರ್ಯದಕ್ಷತೆ ನನ್ನ ಮೇಲೆ ಪರಿಣಾಮ ಬೀರಿತು. ಹೀಗಾಗಿ ನಾನು ನೌಕಾಪಡೆಯನ್ನು ಸೇರಿದ್ದೇನೆ.
– ನಂದನ್‌ಕೃಷ್ಣ.