ಕುಂಜಿಬೆಟ್ಟು ಶಿವ ಹರಿದಾಸ ಭಟ್ಟ ಎಂಬ ಹೆಸರು ಕು.ಶಿ. ಹರಿದಾಸ ಭಟ್ಟ ಎಂದೇ ಚಿರಪರಿಚಿತ. ಉಡುಪಿಯ ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕ, ಜಾನಪದೀಯ, ಸಂಘಟನಾತ್ಮಕ ಇತಿಹಾಸದಲ್ಲಿ ಮರೆಯಲಾಗದ ಹೆಸರಿದು.
ಎಂಜಿಎಂ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿಯೂ ಕು.ಶಿ.ಯವರು ಕೈಯಾಡಿಸಿದ್ದು ಅರ್ಥೇತರ ವಿಷಯಗಳಲ್ಲಿ. “ಉದಯವಾಣಿ’ಯಲ್ಲಿ ಪ್ರಕಟವಾಗುತ್ತಿದ್ದ ಅವರ “ಲೋಕಾಭಿರಾಮ’ ಅಂಕಣ ಅವರ ಲೋಕಾನುಭವದ ಪ್ರತೀಕವಾಗಿತ್ತು. ಅವರು ಈ ಅಂಕಣದಲ್ಲಿ ಅದೆಷ್ಟೋ ಧೀಮಂತರ ಬಗೆಗೆ ಬೆಳಕು ಚೆಲ್ಲಿದ್ದರು. 1924ರ ಮಾ. 17ರಂದು ಜನಿಸಿದ ಭಟ್ಟರು 2000ರ ಆ. 20ರಂದು ಇಹಲೋಕ ತ್ಯಜಿಸಿದರು.
ಎಂಜಿಎಂ ಕಾಲೇಜನ್ನು ತಮ್ಮ ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸಿ ಅದನ್ನೂ ಬೆಳೆಸಿದರು. ಇಂದಿಗೂ ಎಂಜಿಎಂ ಕಾಲೇಜು ಮತ್ತು ಗೋವಿಂದ ಪೈ ಸಂಶೋಧನ ಕೇಂದ್ರ ಅಂದಾಕ್ಷಣ ಕು.ಶಿ.ಯವರ ಚಿತ್ರಣ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ. ಎಂಜಿಎಂ ಕಾಲೇಜಿನ ಗೋವಿಂದ ಪೈ ಸಂಶೋಧನ ಕೇಂದ್ರ, ಯಕ್ಷಗಾನ ಕೇಂದ್ರ, ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ ಅದರ ನಿರ್ದೇಶಕರಾಗಿ ಭದ್ರ ಬುನಾದಿ ಒದಗಿಸಿದ್ದರಲ್ಲದೆ, ಹಲವು ವಿದ್ವಾಂಸರು ಈ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಲು ಕಾರಣರಾದರು. ಬೇಂದ್ರೆ, ಕಾರಂತ, ಪಾವೆಂ ಅಂತಹ ದಿಗ್ಗಜರನ್ನು ಕರೆಸಿ ಸಾಹಿತ್ಯಿಕ, ಸಾಂಸ್ಕೃತಿಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದು ಎಷ್ಟು ಬಾರಿ ಎಂಬುದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಆ ಕಾಲದಲ್ಲಿ ಇಂತಹ ಧೀಮಂತರಿಗೆ ಕು.ಶಿ.ಯವರ ಮನೆಯೇ ಅತಿಥಿಗೃಹವಾಗಿತ್ತು. ಅವರ ಆತಿಥೇಯ ವೈಶಿಷ್ಟéಗಳನ್ನು ಬೇಂದ್ರೆಯಂತಹ ಹಿರಿಯರು ಬೆಟ್ಟು ಮಾಡಿದ್ದಾರೆ.
1960ರ ದಶಕದಲ್ಲಿ ಮಣಿಪಾಲದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟಕರಾಗಿ ಕು.ಶಿ.ಯವರು ಅದನ್ನು ಯಶಸ್ವಿಗೊಳಿಸಿದ್ದನ್ನು ಇಂದಿಗೂ ಸ್ಮರಿಸಿಕೊಳ್ಳುವವರಿದ್ದಾರೆ. “ಅರ್ಥಶಾಸ್ತ್ರ’, “ಸಮಗ್ರ ಯಕ್ಷಗಾನ ಪರಂಪರೆ ಮತ್ತು
ಪ್ರಯೋಗ’, “ಪುಸ್ತಕ ಪುರಾಣ’, “ಕಾರಂತ ಪ್ರಪಂಚ’, “ಬದುಕುವ ದಾರಿ’, “ಪ್ರಜಾತಂತ್ರದ ಹೆದ್ದಾರಿ’, “ಶಿಕ್ಷಣ ಮತ್ತು ಜೀವನದ ಅರ್ಥ’, “ಸ್ವಾತಂತ್ರ್ಯ ಮತ್ತು ಸಂಸ್ಕೃತಿ’, “ಕಾಲವೇ ಬದಲಾಗಿದೆ’ ಮೊದಲಾದ 35ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಯಕ್ಷ ಗಾನ ಕೇಂದ್ರದ ಮೂಲಕ ಹಲವು ವಿದೇಶ ಗಳಲ್ಲಿ ನಮ್ಮ ಕರಾವಳಿ ಕಲೆಯನ್ನು ಪ್ರಚುರ ಪಡಿಸಿದ್ದರು. ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ತುಳು ನಿಘಂಟು ಹೊರತರುವಲ್ಲಿಯೂ ಭಟ್ಟರ ಪಾತ್ರ ಮಹತ್ವ ಪೂರ್ಣವಾದುದು. ಅರ್ಥಶಾಸ್ತ್ರ ಎನ್ನುವುದು ಅವರ ವೃತ್ತಿಪರ ಶಿಕ್ಷಣವಾದರೂ ಅವರು ಕನ್ನಡ ಮತ್ತು ಸಂಸ್ಕೃತದಲ್ಲಿ ವಿದ್ವಾನ್ ಪದವೀಧರರು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ.
ಕು.ಶಿ.ಯವರ ಹೆಸರಿನಲ್ಲಿ ಪ್ರಶಸ್ತಿ : ಕು.ಶಿ.ಯವರು ಬರೆದ ಕೆ.ಕೆ. ಹೆಬ್ಟಾರರ ಜೀವನಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, 1986ರಲ್ಲಿ ಫಿನ್ ಲ್ಯಾಂಡ್ ಪ್ರಶಸ್ತಿ, 1989ರಲ್ಲಿ ಪ್ರತಿಷ್ಠಿತ ವಿಶ್ವ ಮಾನವ ಪ್ರಶಸ್ತಿ ಮೊದಲಾದ ಗೌರವಗಳು ಬಂದಿವೆ. ಕರ್ನಾಟಕ ರಾಜ್ಯೋತ್ಸವದ ಈ ಸುಸಂದರ್ಭದಲ್ಲಿ, ಕು.ಶಿ.ಯವರಿಗೆ 1985ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದನ್ನು ಸ್ಮರಿಸಬೇಕಾಗಿದೆ. ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಗೆ ಕು.ಶಿ.ಯವರ ಹೆಸರಿನಲ್ಲಿ ಪ್ರಶಸ್ತಿಯನ್ನೂ ನೀಡಲಾಗುತ್ತಿದೆ.
ಸ್ಮಾರಕವಿಲ್ಲ :
ಕು.ಶಿ.ಯವರ ಹೆಸರಿನಲ್ಲಿ ಸ್ಮಾರಕವಿನ್ನೂ ರಚನೆಯಾಗಿಲ್ಲ. ಅವರ ಕಾರ್ಯಕ್ಷೇತ್ರವಾಗಿದ್ದ ಉಡುಪಿಯಲ್ಲಿ ಪ್ರಮುಖ ರಸ್ತೆ, ಗ್ರಂಥಾಲಯ ಇತ್ಯಾದಿಗೆ ಅವರ ನಾಮಕರಣ, ಸ್ಮಾರಕ ರಚನೆಗೆ ಜನಪ್ರತಿನಿಧಿಗಳು ಒತ್ತಡ ತಂದು ಸಾಕಾರಗೊಳಿಸಲು ಪ್ರಯತ್ನಿಸಬೇಕಿದೆ.