ಉಡುಪಿ: ಕಾರ್ಕಳ ಬೈಲೂರು ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದ 37ನೇ ವರ್ಷದ ಸಂಸ್ಮರಣೆ-ಪ್ರಶಸ್ತಿ ಪ್ರದಾನ ಸಮಾರಂಭ ಸೋಮವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿತು.
ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗೋವಿಂದ ಭಟ್ ಅವರು, ನಾನು ಕಲಾವಿದ ಎಂದು ಹೇಳಿಕೊಂಡವನಲ್ಲ. ಕಲಾವಿದನಾಗಿ ಈ ಕ್ಷೇತ್ರದಲ್ಲಿ ಪ್ರತಿಹಂತದಲ್ಲಿ ಕಲಿಯುವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದವನು. ರಂಗಭೂಮಿಯನ್ನು ಮೂರ್ತೀಕರಿಸುವ ಕೆಲಸ ರಂಗಕರ್ಮಿಗಳಿಂದ ನಡೆಯಬೇಕು. ಸೀತಾನದಿ ಗಣಪಯ್ಯ ಶೆಟ್ಟಿ ಶ್ರೇಷ್ಠ ಕಲಾವಿದರಾಗಿ ಗುರುತಿಸಿಕೊಂಡವರು. ಅವರೊಂದಿಗೆ ತಾಳಮದ್ದಳೆ ಅರ್ಥಧಾರಿಯಾಗಿದ್ದೆ ಎಂದು ಅವರೊಂದಿಗಿನ ಒಡನಾಡ ಮತ್ತು ಅವರ ವ್ಯಕ್ತಿತ್ವವನ್ನು ಸ್ಮರಿಸಿದರು.
ಎಂಐಟಿ ಪ್ರಾಧ್ಯಾಪಕ ಎಸ್. ವಿ. ಉದಯಕುಮಾರ್ ಶೆಟ್ಟಿ ಅಭಿನಂದನ ಭಾಷಣ ಮಾಡಿ, ಗೋವಿಂದ ಭಟ್ಟರು ಯಕ್ಷಗಾನ ಕ್ಷೇತ್ರದಲ್ಲಿ ಶ್ರೇಷ್ಠ ಕಲಾವಿದರಾಗಿ ಗುರುತಿಸಿಕೊಂಡವರು. ಸಾವಿರಾರು ಶಿಷ್ಯರಿಗೆ ಯಕ್ಷಗಾನ ಪಾಠ ಹೇಳಿಕೊಟ್ಟ ಮಹಾಗುರು. ಧರ್ಮಸ್ಥಳ ಮೇಳದ ಕಂಬವಾಗಿದ್ದ ಇವರು ಜನರ ಅಚ್ಚುಮೆಚ್ಚಿನ ಕಲಾವಿದರಾಗಿ ಎಲ್ಲ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಸಮರ್ಥ ಪ್ರತಿಭೆಯಾಗಿದ್ದವರು ಎಂದು ಬಣ್ಣಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಪಿ. ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ| ಬಿ. ಜಗದೀಶ್ ಶೆಟ್ಟಿ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಪ್ರತಿಷ್ಠಾನದ ಗೌರವ ಸಲಹೆಗಾರ ಎಸ್. ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಪ್ರತಿಷ್ಠಾನದ ಪ್ರ. ಕಾರ್ಯದರ್ಶಿ ಎಸ್. ಅಶೋಕ್ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಭುವನಪ್ರಸಾದ್ ಹೆಗ್ಡೆ ವಂದಿಸಿ, ಸಂಚಾಲಕ ಸೀತಾನದಿ ವಿಠಲ ಶೆಟ್ಟಿ ನಿರೂಪಿಸಿದರು. ಇಂದ್ರಾಳಿ ಯಕ್ಷಗಾನ ಕೇಂದ್ರದ ಕಲಾವಿದರಿಂದ ವೀರ ಬಭ್ರುವಾಹನ ಪ್ರಸಂಗ ಪ್ರಸ್ತುತಿಗೊಂಡಿತು.